ನಾಪೋಕ್ಲು, ಅ. ೪: ಸಮೀಪದ ಕಕ್ಕಬೆ - ಕುಂಜಿಲ ಗ್ರಾಮ ಪಂಚಾಯಿತಿಯ ಮರಂದೋಡ ಗ್ರಾಮದಲ್ಲಿ ಕಾಡಾನೆಗಳ ಉಪಟಳ ಮುಂದುವರಿದಿದ್ದು ರೈತರು ಭಯಭೀತರಾಗಿದ್ದಾರೆ.
ಕತ್ತಲಾಗುತ್ತಿದ್ದಂತೆ ಮುಖ್ಯ ರಸ್ತೆ,ದಾರಿಗಳಲ್ಲಿ ರಾಜಾರೋಷವಾಗಿ ಕಾಡಾನೆ ಸಂಚರಿಸುತ್ತಿದ್ದು, ಗ್ರಾಮಸ್ಥರು ಮನೆಯಿಂದ ಹೊರಬರದ ಸ್ಥಿತಿ ಸೃಷ್ಟಿಯಾಗಿದೆ. ಕೂಲಿ ಕಾರ್ಮಿಕರು ತೋಟದ ಕೆಲಸಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಶಾಲಾ ಕಾಲೇಜು ವಿದ್ಯಾರ್ಥಿಗಳು ಭಯದಲ್ಲಿ ತೆರಳುವ ಸನ್ನಿವೇಶ ಎದುರಾಗಿದೆ.
ಸೋಮವಾರ ರಾತ್ರಿ ಗ್ರಾಮದ ರೈತ ಅನ್ನಾಡಿಯಂಡ ಚಂಗಪ್ಪ ಅವರ ಗದ್ದೆ, ಮಂಗಳವಾರ ರಾತ್ರಿ ಚೋಯಮಾಡಂಡ ಪೂಣಚ್ಚ ಅವರ ಗದ್ದೆಗೆ ದಾಳಿ ಮಾಡಿರುವ ಮೂರು ನಾಲ್ಕು ಕಾಡಾನೆಗಳು ಸುಮಾರು ಒಂದು ಎಕರೆ ಭತ್ತದ ಪೈರುಗಳನ್ನು ತಿಂದು, ತುಳಿದು ನಾಶಪಡಿಸಿವೆ. ಈ ವ್ಯಾಪ್ತಿಯಲ್ಲಿ ಹತ್ತು ಹದಿನೈದು ಆನೆಗಳು ಸಂಚರಿಸುತ್ತಿವೆ ಎಂದು ರೈತರು ತಿಳಿಸಿದ್ದಾರೆ.
ಅರಣ್ಯ ಅಧಿಕಾರಿಗಳಿಗೆ ಕಾಡಾನೆಗಳನ್ನು ಕಾಡಿಗಟ್ಟುವಂತೆ ಮನವಿ ಸಲ್ಲಿಸಿದರೂ ನಿರ್ಲಕ್ಷö್ಯ ವಹಿಸುತ್ತಿದ್ದಾರೆ. ರೈತರಿಗೆ ಸಂಕಷ್ಟ ಎದುರಾಗಿದೆ ಎಂದು ಮರಂದೋಡ ಗ್ರಾಮ ಪಂಚಾಯತಿ ಸದಸ್ಯ ಚೋಯಮಾಡಂಡ ಹರೀಶ್ ಆರೋಪಿಸಿದ್ದಾರೆ. ಗ್ರಾಮದ ಅನ್ನಾಡಿಯಂಡ, ಮುಕ್ಕಾಟಿರ, ಚಂಡೀರ, ಬಾರಿಕೆರ ಸೇರಿದಂತೆ ವಿವಿಧ ಕುಟುಂಬಗಳ ರೈತರು ಕಷ್ಟಪಟ್ಟು ಬೆಳೆಸಿದ ಭತ್ತದ ಪೈರುಗಳು ಆನೆಗಳ ದಾಳಿಗೆ ತುತ್ತಾಗುವ ಆತಂಕ ಗ್ರಾಮಸ್ಥರಲ್ಲಿ ಮನೆ ಮಾಡಿದೆ.
ನಿರಂತರ ಕಾಡಾನೆ ದಾಳಿಯಿಂದಾಗಿ ಗದ್ದೆ ಪೈರು, ತೋಟಗಳ ಅಡಿಕೆ ತೆಂಗು ಸೇರಿದಂತೆ ಇತರ ಫಸಲು ಭರಿತ ಗಿಡಗಳನ್ನು ತಿಂದು ತುಳಿದು ನಮ್ಮ ಕೃಷಿ ಭೂಮಿ ಬರಡಾಗುತ್ತಿದೆ. ಅರಣ್ಯ ಇಲಾಖೆಯವರು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಆನೆಯಿಂದ ನಮಗಾದ ನಷ್ಟಕ್ಕೆ ಎಕರೆಗೆ ಕನಿಷ್ಠ ೨೫,೦೦೦ ಪರಿಹಾರ ನೀಡಬೇಕೆಂದು. ನಷ್ಟ ಒಳಗಾದ ರೈತ ಚೋಯಮಾಡಂಡ ಪೂಣಚ್ಚ ಸರಕಾರವನ್ನು ಒತ್ತಾಯಿಸಿದ್ದಾರೆ.
-ದುಗ್ಗಳ ಸದಾನಂದ