ಮಡಿಕೇರಿ, ಅ. ೩: ಕೊಡಗು ವಿಶ್ವವಿದ್ಯಾನಿಲಯ ಸ್ಥಾಪನೆ ಬಳಿಕ ಮಡಿಕೇರಿಯ ಫೀ.ಮಾ. ಕಾರ್ಯಪ್ಪ ಕಾಲೇಜಿನ ಅತಿಥಿ ಉಪನ್ಯಾಸಕರು, ತಾತ್ಕಾಲಿಕ ಸಿಬ್ಬಂದಿಗಳು ಅತಂತ್ರ ಸ್ಥಿತಿಗೆ ಸಿಲುಕಿಕೊಂಡಿದ್ದಾರೆ. ಸಂಪನ್ಮೂಲ ಕೊರತೆಯಿಂದ ಸಿಬ್ಬಂದಿ ಗಳು ವೇತನವಿಲ್ಲದೆ ಪರದಾಡುತ್ತಿದ್ದು, ಮುಂದೇನೂ ಎಂಬ ಚಿಂತೆ ಅವರನ್ನು ಕಾಡುತ್ತಿದೆ.

‘ವಿನೂತನ ಮಾದರಿಯ ನೂತನ ವಿಶ್ವವಿದ್ಯಾನಿಲಯ’ ಹೆಸರಿನಲ್ಲಿ ಚಿಕ್ಕಅಳುವಾರದಲ್ಲಿ ಈ ಹಿಂದಿನ ಸರಕಾರ ಕೊಡಗು ವಿಶ್ವವಿದ್ಯಾನಿಲಯ ಸ್ಥಾಪನೆ ಘೋಷಿಸಿತು. ಹೊಸ ವಿ.ವಿ.ಗಳಿಗೆ ರೂ. ೨ ಕೋಟಿ ಅನುದಾನ ಬಿಡುಗಡೆ ಗೊಳಿಸುವುದಾಗಿ ಭರವಸೆಯನ್ನು ನೀಡಲಾಗಿತ್ತು. ಆದರೆ, ಇದುವರೆಗೂ ಬಿಡಿಗಾಸು ಅನುದಾನವನ್ನು ಸರಕಾರ ಬಿಡುಗಡೆಗೊಳಿಸಿಲ್ಲ. ಇದರಿಂದ ಶೈಕ್ಷಣಿಕ ಚಟುವಟಿಕೆ ಮೇಲೆ ಪ್ರತಿಕೂಲ ಪರಿಣಾಮ ಬೀರಿದ್ದು, ವೇತನವಿಲ್ಲದೆ ಬೋಧಕ-ಬೋಧಕೇತರ ಸಿಬ್ಬಂದಿಗಳು ಪರಿತಪಿಸುತ್ತಿದ್ದಾರೆ.

ಜಿಲ್ಲೆಯಲ್ಲಿ ನೂತನವಾಗಿ ವಿಶ್ವವಿದ್ಯಾನಿಲಯ ಸ್ಥಾಪನೆಯಾದ ಹಿನ್ನೆಲೆ ಮಂಗಳೂರು ವಿ.ವಿ. ಜಿಲ್ಲೆಯ ೨೧ ಪದವಿ ಹಾಗೂ ೧ ಬಿಎಡ್ ಕಾಲೇಜು ಹೊರಬಂದಿವೆ. ಇದರಲ್ಲಿ ೬ ಸರಕಾರಿ ಪದವಿ ಕಾಲೇಜುಗಳು ಇವೆ. ಈ ಪೈಕಿ ಮಡಿಕೇರಿಯ ಕಾರ್ಯಪ್ಪ ಕಾಲೇಜಿನ ಅತಿಥಿ ಉಪನ್ಯಾಸಕರು, ತಾತ್ಕಾಲಿಕ ಸಿಬ್ಬಂದಿಗಳು ವೇತನವಿಲ್ಲದೆ ಬೀದಿಗೆ ಬೀಳುವ ಪರಿಸ್ಥಿತಿಯಲ್ಲಿದ್ದಾರೆ. ಜಿಲ್ಲೆಯ ಅತೀ ದೊಡ್ಡ ಶಿಕ್ಷಣ ಸಂಸ್ಥೆಯಾಗಿರುವ ಕಾರ್ಯಪ್ಪ ಕಾಲೇಜಿನಲ್ಲಿ ವಿವಿಧ ವಿಭಾಗಗಳು ಸೇರಿ ೧೩೦೦ ರಷ್ಟು ವಿದ್ಯಾರ್ಥಿಗಳಿದ್ದಾರೆ.

ವೇತನಕ್ಕೆ ಕತ್ತರಿ

ಕಾರ್ಯಪ್ಪ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಹಾಗೂ ತಾತ್ಕಾಲಿಕ ಸಿಬ್ಬಂದಿಗಳಿಗೆ ಕಳೆದ ೨-೩ ತಿಂಗಳಿನಿAದ ಸಂಬಳ ಪಾವತಿಯಾಗಿಲ್ಲ.

ಜೂನ್ ತಿಂಗಳು ವೇತನ ಪಾವತಿಯಾಗಿದೆ. ಜುಲೈ ತಿಂಗಳದ್ದು ಬಾಕಿ ಇದ್ದು, ಆಗಸ್ಟ್ ತಿಂಗಳ ವೇತನ ನೀಡಲಾಗಿದೆ. ಸೆಪ್ಟಂಬರ್ ತಿಂಗಳ ವೇತನ ಇದುವರೆಗೂ ಸಂದಾಯವಾಗಿಲ್ಲ. ಇದರ ನಡುವೆಯೂ ಉಪನ್ಯಾಸಕರು ಕೆಲಸ ನಿರ್ವಹಿಸುತ್ತಿದ್ದಾರೆ. ಜೊತೆಗೆ ಡಿ ದರ್ಜೆ ಸೇರಿದಂತೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹಲವು ಸಿಬ್ಬಂದಿಗಳು ಕೆಲಸವನ್ನೂ ಕಳೆದುಕೊಂಡಿದ್ದಾರೆ. ಮಡಿಕೇರಿಯ ಫೀ.ಮಾ. ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ೪೦ ಅತಿಥಿ ಉಪನ್ಯಾಸಕರು, ೪೫ ಬೋಧಕೇತರ ಸಿಬ್ಬಂದಿಗಳಿಗೆ ಇದುವರೆಗೂ ವೇತನ ದೊರೆತ್ತಿಲ್ಲ. ಈ ಸಮಸ್ಯೆಗಳ ಕುರಿತು ಕಾಲೇಜಿನ ಅತಿಥಿ ಉಪನ್ಯಾಸಕಿ ಕಾಂಚನ ಎಂಬವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿ ವಿವಿ ವಿರುದ್ಧ ಕಿಡಿಕಾರಿದ್ದರು.

ಸಂಪನ್ಮೂಲ ಕೊರತೆ

ಅತಿಥಿ ಉಪನ್ಯಾಸಕರಿಗೆ ಹಾಗೂ ತಾತ್ಕಾಲಿಕ ಸಿಬ್ಬಂದಿಗಳಿಗೆ ಈ ಮೊದಲು ಮಂಗಳೂರು ವಿ.ವಿ. ಮೂಲಕ ವೇತನ ನೀಡಲಾಗುತಿತ್ತು. ಕೊಡಗು ವಿ.ವಿ.ಯೊಂದಿಗೆ ವಿಲೀನವಾದ ಬಳಿಕ ಸಂಪನ್ಮೂಲ ಕೊರತೆಯಿಂದ ಸಮಸ್ಯೆ ಎದುರಾಗಿದೆ.

ವಿದ್ಯಾರ್ಥಿಗಳ ದಾಖಲಾತಿ ಯಿಂದ ಬಂದ ಹಣದಲ್ಲಿ ವಿವಿಯನ್ನು ನಿರ್ವಹಿಸಬೇಕಾದ ಸ್ಥಿತಿ ಬಂದಿದೆ. ಬಂದಿರುವ ದಾಖಲಾತಿ ಹಣದಲ್ಲಿ

(ಮೊದಲ ಪುಟದಿಂದ) ೨-೩ ತಿಂಗಳಷ್ಟೆ ನಿಭಾಯಿಸಬಹುದಾಗಿದೆ. ಇವೆಲ್ಲ ಕಾರಣದಿಂದ ವೇತನಕ್ಕೆ ಕತ್ತರಿ ಬಿದ್ದಂತಾಗಿದೆ.

ಅದಲ್ಲದೆ, ಕಾಲೇಜುಗಳ ನಿರ್ವಹಣೆಗೂ ಹಣ ಬಿಡುಗಡೆಗೊಳಿಸಲು ಸಾಧ್ಯವಾಗದಿರುವುದರಿಂದ ಅಸಹಾಯಕತೆ ಪರಿಸ್ಥಿತಿ ಸೃಷ್ಟಿಯಾಗಿದೆ. ಸರಕಾರದಿಂದಲೂ ಹಣ ಬಿಡುಗಡೆಯಾಗದಿದ್ದರೆ ಮುಂದೆ ಕಾಲೇಜುಗಳ ನಿರ್ವಹಣೆ ಕಷ್ಟ ಸಾಧ್ಯವಾಗುತ್ತದೆ ಎಂದು ಹೆಸರು ಹೇಳಲು ಇಚ್ಛಿಸದ ಸಿಬ್ಬಂದಿಗಳು ಹೇಳುತ್ತಾರೆ.

ಅತಿಥಿ ಉಪನ್ಯಾಸಕ ನೇಮಕಾತಿ ತಡ

ಜಿಲ್ಲೆಯ ಸರಕಾರ ಪದವಿ ಕಾಲೇಜಿನಲ್ಲಿ ಪ್ರತಿ ವರ್ಷ ಅತಿಥಿ ಉಪನ್ಯಾಸಕರನ್ನು ಕೌನ್ಸಿಲಿಂಗ್ ಮೂಲಕ ನೇಮಕಾತಿ ಮಾಡಲಾಗುತ್ತದೆ. ಆದರೆ, ಈ ವರ್ಷ ನೂತನ ವಿಶ್ವವಿದ್ಯಾನಿಲಯದಡಿ ಬಂದಿರುವ ಹಿನ್ನೆಲೆ ನೇಮಕಾತಿ ತಡವಾಗಿದೆ. ಈ ಬಗ್ಗೆ ಸರಕಾರದ ಗಮನ ಸೆಳೆಯುವಲ್ಲಿ ಆಡಳಿತ ವಿಫಲವಾಗಿದೆ.

ನೇಮಕಾತಿ ತಡವಾಗಿರುವ ಕಾರಣ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ಫೀ.ಮಾ. ಕಾರ್ಯಪ್ಪ ಕಾಲೇಜಿನಲ್ಲಿ ಇನ್ನೂ ೪೦ ಉಪನ್ಯಾಸಕರ ಅವಶ್ಯಕತೆ ಇದೆ. ಜೊತೆಗೆ ವಿವಿಧ ಸರಕಾರಿ ಪದವಿ ಕಾಲೇಜುಗಳಿಗೆ ಉಪನ್ಯಾಸಕರು ಬೇಕಾಗಿದ್ದಾರೆ.

ಖಾಯಂ ನೌಕರರ ಮೇಲೂ ಪರಿಣಾಮ

ಕೊಡಗು ವಿವಿಗೆ ವಿಲೀನ ಬಳಿಕ ಖಾಯಂ ನೌಕರರ ಮೇಲೂ ಪರಿಣಾಮ ಬೀರಿದೆ. ಪಿಂಚಣಿ ಸೇರಿದಂತೆ ಸೇವಾ ಸೌಲಭ್ಯಕ್ಕೆ ತೊಡಕು ಉಂಟಾಗುವ ಸಾಧ್ಯತೆಗಳ ಬಗ್ಗೆಯೂ ಆತಂಕ ಹೆಚ್ಚಾಗಿದೆ.

ಇವೆಲ್ಲದರ ಕುರಿತು ಅಸ್ಪಷ್ಟ ಮಾಹಿತಿಯಿಂದ ಖಾಯಂ ನೌಕರರು ಕೂಡ ಅತಂತ್ರತೆಯಲ್ಲಿದ್ದಾರೆ. ಇವೆಲ್ಲ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರ ಪರಿಹಾರಕ್ಕೆ ನೌಕರರು ಒತ್ತಾಯಿಸಿದ್ದಾರೆ.