ಮಡಿಕೇರಿ, ಅ. ೩: ಪೌರಾಣಿಕ ಹಿನ್ನೆಲೆಯ ಕಥಾಹಂದರ ಪ್ರದರ್ಶನದೊಂದಿಗೆ ಅದ್ಧೂರಿ ಶೋಭಾಯಾತ್ರೆಯ ಮೂಲಕ ನಗರದ ಶಾಂತಿನಿಕೇತನ ಸಮಿತಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯ ವಿಸರ್ಜನೋತ್ಸವ ಜನಮನ ಸೆಳೆಯುವಲ್ಲಿ ಯಶಸ್ವಿಯಾಯಿತು.

ಲೋಕ ಕಲ್ಯಾಣಕ್ಕಾಗಿ ಸಿಂಧೂರ ರಾಕ್ಷಸನನ್ನು ವಧಿಸುವ ಮೂಲಕ ಗಣಪತಿಗೆ ಸಿಂಧೂರ ಗಣಪ ಎಂಬ ಹೆಸರು ಬಂದ ಕಥಾಹಂದರವನ್ನು ಸುಂದರವಾಗಿ ಸಮಿತಿ ಪ್ರಸ್ತುತ ಪಡಿಸಿತು. ಬ್ರಹ್ಮನ ಮಗ ಸಿಂಧೂರ ದೇವಲೋಕವನ್ನು ವಶಪಡಿಸಿಕೊಳ್ಳಲು ಯುದ್ಧಕ್ಕೆ ಮುಂದಾದ ಸಂದರ್ಭ ನಡೆಯುವ ಘಟನಾವಳಿಗಳು, ಆ ಸಂದರ್ಭ ನಾರಾಯಣ, ಶಿವ, ಪಾರ್ವತಿ ಎದುರಾಗುವ ಪ್ರಸಂಗ ಕೊನೆಗೆ ಗಣಪತಿ ಸಿಂಧೂರನನ್ನು ಸಂಹಾರ ಮಾಡುವ ದೃಶ್ಯಗಳು ಮನಮೋಹಕವಾಗಿ ಮೂಡಿಬಂದವು.

ಬೃಹತ್ ಪ್ರಭಾವಳಿಯ ಎದುರು ದೇವರು-ರಾಕ್ಷಸರ ಕಲಾಕೃತಿಗಳು ರೋಮಾಂಚನ ಮೂಡಿಸಿದವು. ಪ್ರದರ್ಶನ ವೇಳೆಯಲ್ಲಿ ಚಿಮ್ಮಿದ ಬೆಂಕಿ, ಹೊಗೆ, ರಂಗುರAಗಿನ ಕಾಗಾದ ಸ್ಫೋಟಕ, ಪಟಾಕಿ, ಕಣ್ಣುಕುಕ್ಕುವ ಲೈಟಿಂಗ್ಸ್

(ಮೊದಲ ಪುಟದಿಂದ) ಮಂಟಪದ ವೈಭವಕ್ಕೆ ಮತ್ತಷ್ಟು ಮೆರುಗು ನೀಡಿತು. ಮೊದಲು ಶಾಂತಿನಿಕೇತನ ಸಮಿತಿ ಎದುರು ಪ್ರದರ್ಶನಗೊಂಡು ಆ ಬಳಿಕ ಕೆ.ಎಸ್.ಆರ್.ಟಿ.ಸಿ. ಡಿಪೋ, ಜನರಲ್ ತಿಮ್ಮಯ್ಯ ವೃತ್ತ, ಅಜ್ಜಮಾಡ ದೇವಯ್ಯ ವೃತ್ತ, ಇಂದಿರಾ ಗಾಂಧಿ ವೃತ್ತ, ಚೌಡೇಶ್ವರಿ ದೇವಾಲಯದ ಮುಂದೆ ಮಂಟಪದ ಪ್ರದರ್ಶನಗಳು ನಡೆದವು. ಆನಂತರ ಗೌರಿಕೆರೆಯಲ್ಲಿ ಮೂರ್ತಿಗೆ ಪೂಜೆ ನೆರವೇರಿಸಿ ವಿಸರ್ಜಿಸಲಾಯಿತು.

ಮಡಿಕೇರಿ ನಗರದಲ್ಲಿ ಜನಪ್ರಿಯತೆ ಗಳಿಸಿರುವ ಈ ವಿಸರ್ಜನೋತ್ಸವ ಕಣ್ತುಂಬಿಕೊಳ್ಳಲು ಸಾವಿರಾರು ಮಂದಿ ಆಗಮಿಸಿದ್ದರು. ಇದರೊಂದಿಗೆ ಡಿಜೆ ಜನರ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸುವಂತೆ ಮಾಡಿತು. ನಗರದ ರಸ್ತೆಗಳಲ್ಲಿ ಕುಣಿದು ಕುಪ್ಪಳಿಸಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್, ಡಿವೈಎಸ್‌ಪಿ ಜಗದೀಶ್ ನೇತೃತ್ವದಲ್ಲಿ ನಗರ ಪೊಲೀಸರು ಸೂಕ್ತ ಬಂದೋಬಸ್ತ್ ವಹಿಸಿದ್ದರು.