ಸೋಮವಾರಪೇಟೆ, ಅ. ೧: ಇಲ್ಲಿನ ಪಟ್ಟಣ ಪಂಚಾಯಿತಿಯ ನಗರೋತ್ಥಾನ ಯೋಜನೆಯಡಿ ಕೈಗೊಳ್ಳಲು ಉದ್ದೇಶಿಸಲಾಗಿರುವ ಸಾರ್ವಜನಿಕ ಶೌಚಾಲಯ ಮತ್ತು ಲೋಕೋಪಯೋಗಿ ಇಲಾಖೆಯ ಮೂಲಕ ಕೈಗೊಳ್ಳುವ ಕಿಬ್ಬೆಟ್ಟ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಡಾ. ಮಂಥರ್ ಗೌಡ ಅವರು ಚಾಲನೆ ನೀಡಿದರು.
ಪಟ್ಟಣ ಪಂಚಾಯಿತಿಯ ನಗರೋತ್ಥಾನ ಯೋಜನೆಯಡಿ ಕಳೆದ ಸಾಲಿನಲ್ಲಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ತೆರಳುವ ರಸ್ತೆಯಲ್ಲಿ ನೂತನವಾಗಿ ಶೌಚಾಲಯ ನಿರ್ಮಿಸಲು ಯೋಜನೆ ರೂಪಿಸಿದ್ದು, ಇದಕ್ಕೆ ರೂ. ೧೦.೬ ಲಕ್ಷ ಮೀಸಲಿರಿಸಲಾಗಿತ್ತು. ಅಂತೆಯೇ ೨೦೨೨-೨೩ನೇ ಸಾಲಿನ ಮಳೆಹಾನಿ ಪರಿಹಾರ ನಿಧಿಯಡಿ, ಲೋಕೋಪಯೋಗಿ ಇಲಾಖೆ ಮೂಲಕ ಕಿಬ್ಬೆಟ್ಟ ಗ್ರಾಮದಲ್ಲಿ ೧೦ ಲಕ್ಷ ವೆಚ್ಚದಲ್ಲಿ ಕೈಗೊಳ್ಳಲು ಉದ್ದೇಶಿಸಲಾಗಿರುವ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಶಾಸಕರು ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭ ಲೋಕೋಪಯೋಗಿ ಇಲಾಖಾ ಅಭಿಯಂತರ ವಿಜಯಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.