ಗೋಣಿಕೊಪ್ಪ ವರದಿ, ಸೆ. ೩೦: ಬೈರಂಬಾಡ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘ ನಿಯಮಿತಕ್ಕೆ ೨೦೨೨-೨೩ನೇ ಸಾಲಿನಲ್ಲಿ ರೂ. ೨೧.೫೪ ಲಕ್ಷ ನಿವ್ವಳ ಲಾಭ ದೊರಕಿದೆ ಎಂದು ಸಂಘದ ಅಧ್ಯಕ್ಷ ಕರ್ನಲ್ ಕಂಡ್ರತAಡ ಸಿ. ಸುಬ್ಬಯ್ಯ ತಿಳಿಸಿದರು.

ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ೪೨ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಸದಸ್ಯರಿಗೆ ಶೇ. ೧೪ ಡಿವಿಡೆಂಡ್ ನೀಡಲಾಗುವುದು. ಸಂಘದಲ್ಲಿ ಒಟ್ಟು ೧,೪೪೨ ಸದಸ್ಯರಿದ್ದು, ಪಾಲು ಬಂಡವಾಳ ರೂ. ೭೬.೯೪ ಲಕ್ಷ ಆಗಿದೆ. ಸಂಘದಲ್ಲಿ ಕೆಸಿಸಿ ಕೃಷಿ ಸಾಲ, ಸ್ವ-ಸಹಾಯ ಗುಂಪು ಸಾಲ, ವ್ಯಾಪಾರ ಸಾಲ, ಜಾಮೀನು ಸಾಲ, ಆಭರಣ ಸಾಲ, ಜಂಟಿ ಭಾದ್ಯತಾ ಗುಂಪು ಸಾಲ, ನಿತ್ಯ ನಿಧಿ ಠೇವಣಿ ಸಾಲ, ನಿರಖು ಠೇವಣಿ ಸಾಲ ಹಾಗೂ ಸಂಬಳ ಆಧಾರಿತ ಸಾಲ ಸೇರಿ ಒಟ್ಟು ರೂ. ೮.೭೩ ಕೋಟಿ ಸಾಲ ವಿತರಿಸಲಾಗಿದೆ. ರೂ. ೬೬.೧೨ ಕೋಟಿ ವ್ಯವಹಾರ ನಡೆಸಿದ್ದು, ರೂ. ೧೫.೮೨ ಕೋಟಿ ದುಡಿಯುವ ಬಂಡವಾಳ ಇದೆ ಎಂದು ತಿಳಿಸಿದರು.

ಸಂಘವು ನಿರಖು ಠೇವಣಿಗೆ ಶೇ.೭ ರ ಬಡ್ಡಿ ನೀಡುತ್ತಿದ್ದು, ಹಿರಿಯ ನಾಗರಿಕರಿಗೆ ಶೇ. ೦೫ ಹೆಚ್ಚುವರಿ ಬಡ್ಡಿ ನೀಡಲಾಗುತ್ತಿದೆ. ಸದಸ್ಯರು ಸಂಘದಲ್ಲಿ ವ್ಯವಹರಿಸುವ ಮೂಲಕ ತಮ್ಮಲ್ಲಿರುವ ಹಣವನ್ನು ಸಂಘದಲ್ಲಿ ಠೇವಣಿ ನೀಡಿ ಬಂಡವಾಳ ಕ್ರೋಢೀಕರಣಕ್ಕೆ ಬೆಂಬಲ ನೀಡಬೇಕಿದೆ. ರಸಗೊಬ್ಬರ, ಹತ್ಯಾರು ಇತ್ಯಾದಿಗಳನ್ನು ಸದಸ್ಯರುಗಳು ನಮ್ಮಲ್ಲಿಯೇ ಖರೀದಿಸಿ ಸಂಘದ ಸರ್ವತೋಮುಖ ಬೆಳವಣಿಗೆಗೆ ಸಹಕರಿಸುವಂತೆ ಕೋರಿದರು.

ಸಂಘದ ಉಪಾಧ್ಯಕ್ಷ ವಿ.ಆರ್. ಹರೀಶ್, ನಿರ್ದೇಶಕರಾದ ಪೊರ್ಕೊಂಡ ಬಿ. ಸವಿತಾ, ಬೊಪ್ಪಂಡ ಪಿ. ಗಣಪತಿ, ಅಪ್ಪಾರಂಡ ಎಂ. ಕಾರ್ಯಪ್ಪ, ಕೊಪ್ಪಡ ಎಂ. ಗಣೇಶ್, ಕೆ.ಎಸ್. ದಿನೇಶ್, ಜಿಲ್ಲಂಡ ಸಿ. ಉತ್ತಪ್ಪ, ಪಿ.ಎ. ಮಂಜುನಾಥ, ವಿ.ಆರ್. ಪ್ರಭಾವತಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಾತಂಡ ಡಿ. ಭೀಮಯ್ಯ, ಮೇಲ್ವಿಚಾರಕಿ ಬಿ.ಎನ್. ಶರೀನ್ ಇದ್ದರು.