ಮಡಿಕೇರಿ, ಸೆ. ೩೦: ಕೊಡವ ಭಾಷೆಯ ಆದಿಕವಿ ಹರದಾಸ ಅಪ್ಪನೆರವಂಡ ಅಪ್ಪಚ್ಚ ಅವರ ಹೆಸರಿನಲ್ಲಿ ಮಡಿಕೇರಿಯಲ್ಲಿ ಕಲಾಭವನ ನಿರ್ಮಾಣ ಸೇರಿದಂತೆ ಅವರ ಹೆಸರು ಚಿರಸ್ಥಾಯಿಗೊಳಿಸಲು ವಿವಿಧ ಕಾರ್ಯಕ್ರಮ ಕೈಗೊಳ್ಳಬೇಕೆಂದು ಅಪ್ಪಚ್ಚ ಕವಿ ಅಭಿಮಾನಿ ಬಳಗ ಒತ್ತಾಯಿಸಿದೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಳಗದ ಪ್ರಮುಖರಾದ ಡಾ. ಉಳ್ಳಿಯಡ ಪೂವಯ್ಯ, ಸೆ. ೨೧ಕ್ಕೆ ಅಪ್ಪಚ್ಚ ಕವಿ ೧೫೫ ಜಯಂತಿ ಪ್ರಯುಕ್ತ ಕಾರ್ಯಕ್ರಮ ಆಯೋಜಿಸಬೇಕಾಗಿತ್ತು. ಆದರೆ, ಸಾಧ್ಯವಾಗಿಲ್ಲ. ಅವರ ಸೇವೆಯನ್ನು ತಿಳಿಸುವ ಕೆಲಸ ಮುಂದಿನ ದಿನಗಳಲ್ಲಿ ನಡೆಯುತ್ತದೆ. ಅಪ್ಪಚ್ಚ ಕವಿ ಅವರು ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ್ದಾರೆ. ಅವರ ಸ್ಮರಣೆ ಅತ್ಯಗತ್ಯ ಎಂದ ಅವರು, ಅಪ್ಪನೆರವಂಡ ಐನ್ಮನೆಯನ್ನು ಕವಿ ಸ್ಮಾರಕ ಕೇಂದ್ರವಾಗಿ ಅಭಿವೃದ್ಧಿಪಡಿಸಬೇಕು, ಮಡಿಕೇರಿ ಚೌಕಿ ವೃತ್ತಕ್ಕೆ ಹರದಾಸ ಅಪ್ಪಚ್ಚ ಕವಿ ಹೆಸರಿಡಬೇಕು, ಕೊಡಗು ವಿಶ್ವವಿದ್ಯಾನಿಲಯಕ್ಕೆ ಅಪ್ಪಚ್ಚಕವಿ ಸ್ಮಾರಕ ಕನ್ನಡ ವಿಭಾಗ ಎಂದು ನಾಮಕರಣ ಮಾಡಬೇಕು, ಅಪ್ಪಚ್ಚ ಕವಿ ಅಪ್ರಕಟಿತ ಪುಸ್ತಕ ಪರಿಶೋಧಿಸಿ ಕೊಡವ ಸಾಹಿತ್ಯ ಅಕಾಡೆಮಿ ಮೂಲಕ ಮುದ್ರಿಸಬೇಕು, ಪ್ರತಿ ವರ್ಷ ಅಪ್ಪಚ್ಚಕವಿ ಜಯಂತಿಯAದು ಕೊಡವ ಭಾಷೆಯಲ್ಲಿ ಬರಹ ಸ್ಪರ್ಧೆ ಆಯೋಜಿಸಬೇಕು, ಅಪ್ಪಚ್ಚಕವಿ ಅವರ ಸಾಹಿತ್ಯಿಕ ಸೇವೆ ಬಗ್ಗೆ ಅಧ್ಯಯನ ಮಾಡುವವರಿಗೆ ಉತ್ತೇಜನ ನೀಡುವಂತಾಗಬೇಕೆAದು ಆಗ್ರಹಿಸಿದರು.
ಬಳಗದ ಅಲ್ಲಾರಂಡ ವಿಠಲ ನಂಜಪ್ಪ ಮಾತನಾಡಿ, ಅಪ್ಪಚ್ಚಕವಿ ಹೆಸರಿನಲ್ಲಿ ಕಲಾಭವನ ನಿರ್ಮಿಸಿ ಕೊಡಗಿನ ಸಾಹಿತಿಗಳನ್ನು ಪರಿಚಯಿಸುವ ಕೆಲಸವಾಗಬೇಕು, ಜೊತೆಗೆ ಎಲ್ಲಾ ರೀತಿಯ ವ್ಯವಸ್ಥೆಯನ್ನು ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಶಾಸಕರಿಗೆ ಮನವಿ ಸಲ್ಲಿಸಲಾಗಿದ್ದು, ಸಕರಾತ್ಮಕ ಸ್ಪಂದನ ದೊರೆತಿದೆ. ಸರಕಾರ ಕೂಡ ಇದನ್ನು ಗಂಭೀರವಾಗಿ ಪರಿಗಣಿಸಿ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.
ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷ ಬಿ.ಜಿ. ಅನಂತಶಯನ ಮಾತನಾಡಿ, ಕೊಡವ ಭಾಷೆಯೊಂದಿಗೆ ಕನ್ನಡ ಹಾಗೂ ಸಂಸ್ಕೃತದಲ್ಲೂ ನಿರರ್ಗಳತೆಯನ್ನು ಅಪ್ಪಚ್ಚಕವಿ ಸಾಧಿಸಿದ್ದರು. ಇದು ಅವರ ಛಲದಿಂದ ಸಾಧ್ಯವಾಯಿತು. ಅಂದಿನ ಕಾಲದಲ್ಲಿಯೇ ಮಹಿಳೆಯರು ಸ್ವಾವಲಂಬಿಗಳಾಗಬೇಕು ಎಂದು ಪ್ರತಿಪಾದಿಸಿದಲ್ಲದೆ ಭ್ರಷ್ಟಾಚಾರ ವಿರೋಧಿ ವಿಚಾರಗಳನ್ನು ಬರೆದಿದ್ದರು. ಜೊತೆಗೆ ದೈವತ್ವದ ವಿಚಾರದ ಬಗ್ಗೆಯೂ ಆಳವಾಗಿ ಚಿಂತಿಸುತ್ತಿದ್ದರು.
ಅಪ್ಪಚ್ಚಕವಿ ಕೊಡಗಿನ ಆದಿ ಕವಿಯಾಗಿದ್ದು, ಬಾಲ್ಯದಿಂದಲೇ ಸಾಹಿತ್ಯದ ಬಗ್ಗೆ ಅಪಾರ ಒಲವು ಹೊಂದಿದ್ದರು. ಮಾತುಕತೆ, ವಿದ್ಯಮಾನಗಳನ್ನು ಅರಿತುಕೊಂಡು ಅದರ ಕುರಿತು ಅಧ್ಯಯನ ನಡೆಸಿ ಜ್ಞಾನ ಪಡೆಯುತ್ತಿದ್ದರು.
ಇವೆಲ್ಲದರ ನಡುವೆ ನಾಟಕದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಅಪ್ಪಚ್ಚ ಕವಿ ಅವರು, ಕೊಡಗಿನಲ್ಲಿ ರಂಗಭೂಮಿ ಹುಟ್ಟಿಗೂ ಕಾರಣಿಭೂತರು. ಇವರು ಆದಿಕವಿ ಮಾತ್ರವಲ್ಲ ಕೊಡಗಿನ ಶೇಕ್ಸ್ಫಿಯರ್ ಎಂದು ಬಣ್ಣಿಸಿದರು.