ಕೊಯನಾಡು, ಸೆ. ೩೦: ಸುನ್ನಿ ಮುಸ್ಲಿಂ ಜುಮಾ ಮಸೀದಿ, ನುಸ್ರತುಲ್ ಇಸ್ಲಾಂ ಅಸೋಸಿಯೇಶನ್, ಗಲ್ಫ್ ಸಮಿತಿ, ಕೊಯನಾಡು ಸಂಯುಕ್ತ ಆಶ್ರಯದಲ್ಲಿ ಈದ್ ಮಿಲಾದ್ ಕಾರ್ಯಕ್ರಮದ ಪ್ರಯುಕ್ತ ಸುಬುಲುಸ್ಸಲಾಂ ಮದ್ರಸ ಸಭಾಂಗಣದಲ್ಲಿ ಜಮಾಅತ್ ಅಧ್ಯಕ್ಷ ಎಸ್.ಎ. ಅಬ್ದುಲ್ ರಜಾಕ್ ಅವರು ಧ್ವಜಾರೋಹಣ ನೆರವೇರಿಸಿ ಮಿಲಾದ್ ಸಮಾವೇಶಕ್ಕೆ ಚಾಲನೆ ನೀಡಿದರು. ಸ್ವಲಾತ್ ಜಾಥಾ ಕಾರ್ಯಕ್ರಮ ಉದ್ಘಾಟನೆಯನ್ನು ಮಾಜಿ ಜಿಲ್ಲಾ ವಕ್ಫ್ ಸದಸ್ಯರಾದ ಹಾಜಿ ಎಸ್. ಮೊಯ್ದೀನ್ ಕುಂಞ ಅವರು ನೆರವೇರಿಸಿದರು. ಕೊಯನಾಡಿನಿಂದ ಚೆಡಾವುವರೆಗೆ ಸಾಗಿ ಬಂದ ಜಾಥಾದಲ್ಲಿ ಮದ್ರಸ ವಿದ್ಯಾರ್ಥಿಗಳ ಆಕರ್ಷಣೀಯ ದಫ್ ಪ್ರದರ್ಶನ, ಊರಿನ ಯುವಕರ ವಿವಿಧ ಶೈಲಿಯ ಘೋಷವಾಕ್ಯ, ಪ್ರವಾದಿ ಸಂದೇಶವನ್ನು ಸಾರುವ ಮೂಲಕ ಜಾಥಾ ಕಾರ್ಯಕ್ರಮವು ಸಾಗಿಬಂತು.

ನಂತರ ೧೧ ಗಂಟೆಗೆ ಮಸೀದಿಯಲ್ಲಿ ಬೃಹತ್ ಮೌಲೀದ್ ಪಾರಾಯಣ ನಡೆಯಿತು. ಮಗ್ರಿಬ್ ನಮಾಜಿನ ಬಳಿಕ ಮದ್ರಸ ವಿದ್ಯಾರ್ಥಿಗಳ ಪ್ರತಿಭೋತ್ಸವ ಕಾರ್ಯಕ್ರಮ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಸೀದಿ ಅಧ್ಯಕ್ಷ ಎಸ್.ಎ. ಅಬ್ದುಲ್ ರಜಾಕ್ ವಹಿಸಿದ್ದರು. ಉದ್ಘಾಟನೆಯನ್ನು ಮಸೀದಿ ಖತೀಬರಾದ ಅಬ್ದುಲ್ ಹಮೀದ್ ಅಮ್ಜದಿ ಉಸ್ತಾದರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸದರ್ ಉಸ್ತಾದ್ ಹಂಜ ಸಅದಿ ಸ್ವಾಗತ ನಿರೂಪಣೆ ಮಾಡಿದರು. ಮಿಲಾದ್ ಶುಭ ನುಡಿಯನ್ನು ಅಬ್ದುಲ್ ಜಲೀಲ್ ಸಖಾಫಿ ನುಡಿದರು, ವೇದಿಕೆಯಲ್ಲಿ ಸಮಿತಿ ಸದಸ್ಯರು, ನುಸ್ರತುಲ್ ಇಸ್ಲಾಂ ಸದಸ್ಯರು, ಗಲ್ಪ್ ಸಮಿತಿ ಸದಸ್ಯರು ಸಹಿತ ಹಲವಾರು ಗಣ್ಯರು ಭಾಗವಹಿಸಿದ್ದರು. ಮೂರು ಸ್ವಲಾತ್‌ನೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.