ಸೋಮವಾರಪೇಟೆ, ಸೆ. ೩೦: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಳ ಕಚೇರಿ ಮೂಲಕ ಗರ್ಭಿಣಿ ಹಾಗೂ ಬಾಣಂತಿಯರಿಗೆ ವಿತರಿಸಲಾದ ಅಕ್ಕಿಯಲ್ಲಿ ಹುಳುಗಳು ಪತ್ತೆಯಾಗಿವೆ.
ಹುಳು ಹಿಡಿದ ಅಕ್ಕಿಯನ್ನೇ ಗೋದಾಮಿನಿಂದ ಚೀಲಗಳಲ್ಲಿ ತುಂಬಿ ಕಳುಹಿಸಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ನಿರ್ಲಕ್ಷö್ಯತನ ಎದ್ದು ಕಾಣುತ್ತಿದ್ದು, ಸರ್ಕಾರದ ಯೋಜನೆಯೊಂದನ್ನು ಇವರುಗಳೆಲ್ಲಾ ಸೇರಿಕೊಂಡು ಹುಳು ತಿನ್ನುವಂತೆ ಮಾಡುತ್ತಿದ್ದಾರೆ ಎಂದು ಗರ್ಭಿಣಿಯರು ಅಸಮಾಧಾನ ಹೊರಹಾಕುತ್ತಿದ್ದಾರೆ.
ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಕೂತಿ ಗ್ರಾಮದ ಅಂಗನವಾಡಿಯಿAದ ಸರಬರಾಜಾದ ಅಕ್ಕಿ, ಬೇಳೆಯಲ್ಲಿ ಹುಳುಗಳು ಪತ್ತೆಯಾಗಿವೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧೀನದಲ್ಲಿ ಈ ಕಾರ್ಯಕ್ರಮ ಜಾರಿಯಲ್ಲಿದೆ. ಕೂಡಿಗೆಯ ಎಂ.ಎಸ್.ಪಿ.ಸಿ. ಘಟಕದ ಮೂಲಕ ಅಂಗನವಾಡಿಗಳಿಗೆ ಆಹಾರ ಧಾನ್ಯಗಳ ಕಿಟ್ ನೀಡಲಾಗುತ್ತಿದೆ.
ಈ ಕಿಟ್ನಲ್ಲಿ ೪ ಕೆ.ಜಿ. ಅಕ್ಕಿ, ತಲಾ ಅರ್ಧ ಕೆ.ಜಿ.ಯಷ್ಟು ಸಕ್ಕರೆ, ಬೇಳೆ, ಶೇಂಗ ಬೀಜ, ಹಾಲಿನ ಪುಡಿ ಪ್ಯಾಕೆಟ್ ಒಳಗೊಂಡಿರುತ್ತದೆ. ಕೂಡಿಗೆಯಲ್ಲಿರುವ ಎಂ.ಎಸ್.ಪಿ.ಸಿ. ಘಟಕದಲ್ಲಿ ಕಿಟ್ಗಳನ್ನು ತಯಾರಿಸಿ ವಾಹನಗಳ ಮೂಲಕ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡಲಾಗುತ್ತಿದೆ.
ಅಂಗನವಾಡಿ ವ್ಯಾಪ್ತಿಯಲ್ಲಿರುವ ಗರ್ಭಿಣಿಯರು ಹಾಗೂ ಬಾಣಂತಿಯರು ಅಂಗನವಾಡಿಗೆ ತೆರಳಿ ಸಹಿ ಮಾಡಿ ಆಹಾರದ ಕಿಟ್ಗಳನ್ನು ಪಡೆಯಬೇಕಿದೆ. ಹೀಗೆ ಆಹಾರದ ಕಿಟ್ಗಳನ್ನು ಕೂತಿ ಅಂಗನವಾಡಿಯಿAದ ಪಡೆದ ಬಹುತೇಕ ಫಲಾನುಭವಿಗಳಿಗೆ ಹುಳು ಹಿಡಿದ ಅಕ್ಕಿ ಹಾಗೂ ಬೇಳೆ ದೊರೆತಿದೆ.
ಈ ಹಿಂದೆಯೂ ಅನೇಕ ಬಾರಿ ಇಂತಹ ಪ್ರಕರಣ ನಡೆದಿವೆ. ಆದರೂ ಕೂಡಿಗೆಯ ಎಂ.ಎಸ್.ಪಿ.ಸಿ.ಯವರು ಎಚ್ಚರಿಕೆ ವಹಿಸುತ್ತಿಲ್ಲ. ಹುಳು ಹಿಡಿದ ಅಕ್ಕಿ, ಬೇಳೆಯನ್ನು ಸರಬರಾಜು ಮಾಡುತ್ತಿದ್ದಾರೆ. ಕಿಟ್ಗಳನ್ನು ನೇರವಾಗಿ ಅಂಗನವಾಡಿ ಕಾರ್ಯಕರ್ತೆಯರು ಫಲಾನು ಭವಿಗಳಿಗೆ ನೀಡುತ್ತಿದ್ದಾರೆ. ಅಂಗನವಾಡಿಯಲ್ಲಿ ಇವುಗಳನ್ನು ತೆರೆದು ನೋಡುವಂತೆ ಇಲ್ಲ. ಹೀಗಾಗಿ ಅಂಗನವಾಡಿಗಳಿಗೆ ಕೆಟ್ಟ ಹೆಸರು ಬರುವಂತಾಗಿದೆ.
ಈ ಬಗ್ಗೆ ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿ ವಿಮಲ ಅವರ ಗಮನ ಸೆಳೆದ ಸಂದರ್ಭ ಪ್ರತಿಕ್ರಿಯೆ ನೀಡಿದ ಅವರು, ಕೂಡಿಗೆಯ ಎಂ.ಎಸ್.ಪಿ.ಸಿ.ಗೆ ಭೇಟಿ ನೀಡಿ ಗುಣಮಟ್ಟದ ಆಹಾರ ಧಾನ್ಯಗಳನ್ನು ನೀಡುವಂತೆ ಸೂಚನೆ ನೀಡಲಾಗಿದೆ. ಒಂದೆರಡು ಬಾರಿ ಧಾನ್ಯಗಳಲ್ಲಿ ಹುಳುಗಳು ಪತ್ತೆಯಾಗಿರುವುದು ಗಮನಕ್ಕೆ ಬಂದಿದೆ. ಅಂತಹ ಪ್ರಕರಣಗಳು ಕಂಡುಬAದರೆ ತಕ್ಷಣ ಸಂಬAಧಿಸಿದ ಅಂಗನವಾಡಿಯವರು ಫಲಾನುಭವಿಗಳಿಂದ ಕಿಟ್ಗಳನ್ನು ವಾಪಸ್ ಪಡೆದು, ಉತ್ತಮ ಧಾನ್ಯಗಳನ್ನು ವಿತರಿಸಲು ಕ್ರಮವಹಿಸುವಂತೆ ನಿರ್ದೇಶನ ನೀಡಲಾಗಿದೆ ಎಂದರು.
ಆಹಾರ ಧಾನ್ಯದ ಕಿಟ್ಗಳನ್ನು ವಿತರಿಸುವ ಸಂದರ್ಭವೂ ಸಹ ಈ ಬಗ್ಗೆ ಫಲಾನುಭವಿಗಳಿಗೆ ಮಾಹಿತಿ ನೀಡುವಂತೆ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರಿಗೆ ತಿಳಿಸಲಾಗಿದೆ. ಹುಳು ಹಿಡಿದ ಧಾನ್ಯಗಳು ಸರಬರಾಜಾಗಿದ್ದರೆ ತಕ್ಷಣ ಅಂಗನವಾಡಿಗೆ ವಾಪಸ್ ನೀಡಬೇಕು. ಬದಲಿ ಕಿಟ್ಗಳನ್ನು ನೀಡಲು ಕ್ರಮ ಕೈಗೊಳ್ಳಲಾಗುವುದು. ಕೂಡಿಗೆಯ ಘಟಕಕ್ಕೆ ಭೇಟಿ ನೀಡಿ ಮತ್ತೊಮ್ಮೆ ಪರಿಶೀಲನೆ ನಡೆಸಲಾಗುವುದು ಎಂದು ‘ಶಕ್ತಿ’ ಯೊಂದಿಗೆ ವಿಮಲ ಅವರು ತಿಳಿಸಿದ್ದಾರೆ.