ಮಡಿಕೇರಿ, ಅ. ೧: ನಮ್ಮ ಸುತ್ತಮುತ್ತಲಿನ ಪರಿಸರದ ಸ್ವಚ್ಛತೆಯನ್ನು ಕಾಪಾಡುವುದು ಪ್ರತಿಯೊಬ್ಬ ಜವಾಬ್ದಾರಿಯುತ ನಾಗರಿಕನ ಕರ್ತವ್ಯ ಎಂದು ಕೊಡಗು ಜಿ.ಪಂ. ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ವರ್ಣಿತ್ ನೇಗಿ ಕರೆ ನೀಡಿದರು.

ಕೊಡಗು ಜಿಲ್ಲಾ ಪಂಚಾಯತ್, ಸ್ವಚ್ಛ ಭಾರತ್ ಮಿಷನ್ (ಗ್ರಾ) ವತಿಯಿಂದ ಸ್ವಚ್ಛತಾ ಹೀ ಸೇವಾ ಅಭಿಯಾನದ ಅಂಗವಾಗಿ ನಗರದ ಅಬ್ಬಿಫಾಲ್ಸ್ ಸಮೀಪ ನಡೆದ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನಮ್ಮ ಬದುಕಿನಲ್ಲಿ ಸ್ವಚ್ಛತೆ ಬಹುಮುಖ್ಯವಾಗಿದೆ. ನಮ್ಮ ಮನೆ ಮಾತ್ರವಲ್ಲದೇ ಸುತ್ತ-ಮುತ್ತಲಿನ ಪರಿಸರದಲ್ಲಿಯೂ ನಾವು ಸ್ವಚ್ಛತೆಯನ್ನು ಕಾಪಾಡಬೇಕು. ಇದರಿಂದ ಉತ್ತಮ ಆರೋಗ್ಯದ ಜೊತೆಗೆ ನಮ್ಮ ಪರಿಸರವೂ ಸಹ ಸುಂದರವಾಗಿರುತ್ತದೆ. ಪ್ರಧಾನಮಂತ್ರಿ ಅವರ ಆಶಯದಂತೆ ದೇಶಾದ್ಯಂತ ತಾ.೧ ರಂದು ಬೆಳಿಗ್ಗೆ ೧೦ ಗಂಟೆಯಿAದ ೧೧ ಗಂಟೆಯವರೆಗೆ ಒಂದು ಗಂಟೆಗಳ ಕಾಲ ಶ್ರಮದಾನ ಮಾಡಲಾಗಿದೆ. ಇದರ ಅಂಗವಾಗಿ ಅಬ್ಬಿ ಜಲಪಾತದ ಬಳಿ ಜಿಲ್ಲಾ ಮಟ್ಟದಲ್ಲಿ “ಬೃಹತ್ ಸ್ವಚ್ಛತಾ ಆಂದೋಲನ” ಹಮ್ಮಿಕೊಳ್ಳಲಾಗಿದೆ. ಅದೇ ರೀತಿ ಜಿಲ್ಲೆಯ ೧೦೩ ಗ್ರಾಮ ಪಂಚಾಯಿತಿಗಳಲ್ಲಿಯೂ ಏಕ ಕಾಲದಲ್ಲಿ ಶ್ರಮದಾನ ಕಾರ್ಯಕ್ರಮ ಜರುಗಿದೆ.

ಇದೇ ವೇಳೆ ಅಂಗಡಿ ಮಾಲೀಕರು ಜವಾಬ್ದಾರಿಯುತವಾಗಿ ಕಸವನ್ನು ಸಂಗ್ರಹಿಸಿ, ಸ್ವಚ್ಛತೆಯನ್ನು ಕಾಪಾಡಬೇಕು ಎಂದರು. ಯಾವುದೇ ಅಂಗಡಿಗಳ ಮಾಲೀಕರು ಸ್ವಚ್ಛತೆ ಕಾಪಾಡದೆ ಎಲ್ಲೆಂದರಲ್ಲಿ ಕಸ ವಿಲೇವಾರಿ ಮಾಡಿದಲ್ಲಿ ಅಂತಹವರ ಟೆಂಡರನ್ನು ರದ್ದುಪಡಿಸಲಾಗುವುದು ಎಂದು ಜಿ.ಪಂ. ಸಿ.ಇ.ಓ ಎಚ್ಚರಿಕೆ ನೀಡಿದರು.

ಜಿ.ಪಂ. ಉಪಕಾರ್ಯದರ್ಶಿ ಜಿ. ಧನರಾಜು ಮಾತನಾಡಿ, ಜಿಲ್ಲೆಯಲ್ಲಿ ಸ್ವಚ್ಛತೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ೧ ಗಂಟೆಗಳ ಕಾಲ ಶ್ರಮದಾನ ಮಾಡಿ ಜನಸಾಮಾನ್ಯರಲ್ಲಿ ಮತ್ತು ಪ್ರವಾಸಿಗರಲ್ಲಿ ಸ್ವಚ್ಛತೆಯ ಕುರಿತು ಅರಿವು ಮೂಡಿಸಲಾಗಿದೆ. ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರೂ ಸಹ ೩ಆರನೇ ಪುಟಕ್ಕೆ

(ಮೊದಲ ಪುಟದಿಂದ) ಪ್ಲಾಸ್ಟಿಕ್ ಬಾಟಲಿ, ಮುಂತಾದ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯದೆ ಈಗಾಗಲೇ ಇರಿಸಿರುವ ಕಸದ ಬುಟ್ಟಿಯಲ್ಲಿಯೇ ಹಾಕಬೇಕು ಎಂದು ತಿಳಿಸಿದರು.

ಮಡಿಕೇರಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಶೇಖರ್ ಅವರು ಸ್ವಚ್ಛತಾ ಹೀ ಸೇವಾ ಪಾಕ್ಷಿಕ ಜನ ಜಾಗೃತಿ ಕಾರ್ಯಕ್ರಮದ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಒಂದು ಗಂಟೆಗಳ ಕಾಲ ನಡೆದ ಶ್ರಮದಾನದಲ್ಲಿ ಸಾರ್ವಜನಿಕರು ಮತ್ತು ಪ್ರವಾಸಿಗರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಮಾಹಿತಿ ಪಡೆದರು.

ಕೆ.ನಿಡುಗಣೆ ಗ್ರಾ.ಪಂ.ನ ಅಧ್ಯಕ್ಷರಾದ ಪಾರ್ವತಿ ಮತ್ತು ಸದಸ್ಯರು, ಜಿ.ಪಂ. ಮುಖ್ಯ ಲೆಕ್ಕಾಧಿಕಾರಿ ಝೀವಲ್ ಖಾನ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ಸುರೇಶ್ ಕುಮಾರ್, ಗ್ರಾ.ಪಂ.ಪಿಡಿಒ ದಿನೇಶ್, ಸ್ವಚ್ಚ ಭಾರತ್ ಮಿಷನ್ (ಗ್ರಾ) ಯೋಜನೆಯ ಜಿಲ್ಲಾ ಸಮಾಲೋಚಕರು ಹಾಗೂ ಗ್ರಾ,ಪಂ. ಸಿಬ್ಬಂದಿಗಳು ಇದ್ದರು.

ಕುಶಾಲನಗರ : ಕೊಡಗು ಮೈಸೂರು ಗಡಿಭಾಗದ ಕುಶಾಲನಗರದ ೧೭೭ ವರ್ಷ ಹಳೆಯ ಸೇತುವೆಯನ್ನು ಸಂರಕ್ಷಣೆ ಮಾಡುವ ಮೂಲಕ ಸ್ಮಾರಕವನ್ನಾಗಿ ಉಳಿಸಲು ಶ್ರಮವಹಿಸಬೇಕು ಎಂದು ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಆಗ್ರಹಿಸಿದ್ದಾರೆ.

ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ‘ಯುವ ಜನತೆ ಹೆಜ್ಜೆಯೊಂದಿಗೆ ಸ್ವಚ್ಛತಾ ಅಭಿಯಾನ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಸೇತುವೆ ಬಳಿ ಸ್ವಚ್ಛತಾ ಕಾರ್ಯ ವೀಕ್ಷಿಸಿ ಮಾತನಾಡಿದರು.

೧೮೪೬ ರಲ್ಲಿ ಬ್ರಿಟಿಷರ ಆಡಳಿತ ಅವಧಿಯಲ್ಲಿ ನಿರ್ಮಾಣಗೊಂಡಿರುವ ಸೇತುವೆಯ ನಿರ್ವಹಣಾ ಕಾಮಗಾರಿ ನಡೆಯಬೇಕು. ಅದನ್ನು ಉಳಿಸುವ ಕೆಲಸ ಆಗಬೇಕಾಗಿದೆ. ನಿರಂತರ ಸ್ವಚ್ಛತಾ ಕಾರ್ಯಗಳ ಮೂಲಕ ಸ್ಥಳೀಯ ಸಂಘ ಸಂಸ್ಥೆಗಳು ಸೇತುವೆಯ ಸ್ವಚ್ಛತೆಯನ್ನು ಕಾಪಾಡಿಕೊಂಡು ಬರುತ್ತಿರುವುದು ಮೆಚ್ಚುಗೆಯ ವಿಷಯ ಎಂದರು.

ಸ್ಥಳೀಯ ಬಿಜೆಪಿ ಕಾರ್ಯಕರ್ತರೊಂದಿಗೆ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡ ರಂಜನ್ ಅವರು, ಕುಶಾಲನಗರ ಪಟ್ಟಣದ ಸರಕಾರಿ ಬಸ್ ನಿಲ್ದಾಣ ಆವರಣ, ಪ್ರವಾಸಿ ಮಂದಿರ ರಸ್ತೆ, ಮಸೀದಿ ರಸ್ತೆಯ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡು ರಸ್ತೆ ಬದಿಯಲ್ಲಿದ್ದ ತ್ಯಾಜ್ಯಗಳನ್ನು ತೆರವುಗೊಳಿಸಿದರು. ಯಾವುದೇ ಸಂದರ್ಭ ರಸ್ತೆ ಬದಿ ಅಥವಾ ಬೀದಿಗಳಲ್ಲಿ ಕಸವನ್ನು ಎಸೆಯುವ ಕಾಯಕ ನಡೆಯಬಾರದು ಎಂದು ಅವರು ಹೇಳಿದರು. ಕುಶಾಲನಗರ ನಗರ ಬಿಜೆಪಿ ಘಟಕದ ಅಧ್ಯಕ್ಷ ಉಮಾಶಂಕರ್, ಪುರಸಭೆ ಸದಸ್ಯರಾದ ಅಮೃತರಾಜ್, ಪ್ರಮುಖರಾದ ಕುಮಾರಪ್ಪ, ವರದ, ಎಂ.ವಿ. ನಾರಾಯಣ, ಪುಂಡರಿಕಾಕ್ಷ, ವೈಶಾಕ್, ಪ್ರವೀಣ್ ಮತ್ತಿತರರು ಇದ್ದರು.