ಕುಶಾಲನಗರ, ಸೆ. ೨೮ : ಮಾಜಿ ಸೈನಿಕರು ತಮ್ಮ ಆರೋಗ್ಯ ಕಾಪಾಡಿ ಕೊಳ್ಳುವ ನಿಟ್ಟಿನಲ್ಲಿ ಹೆಚ್ಚಿನ ಕಾಳಜಿ ವಹಿಸಿಕೊಳ್ಳಬೇಕಾಗಿದೆ ಎಂದು ಕೊಡಗು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಮೇಜರ್ ಜನರಲ್ ಬಿ.ಎ. ಕಾರ್ಯಪ್ಪ ಕರೆ ನೀಡಿದ್ದಾರೆ.

ಕುಶಾಲನಗರದಲ್ಲಿ ಮಾಜಿ ಸೈನಿಕರ ಸಂಘದ ಬೆಳ್ಳಿ ಹಬ್ಬ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು ಆಸ್ಪತ್ರೆಯಲ್ಲಿ ಪ್ರತಿಯೊಂದು ರೋಗಗಳ ಪರೀಕ್ಷೆಗಳ ಸೌಲಭ್ಯಗಳ ಕೊರತೆ ಕಾಣುತ್ತಿದೆ. ಮಾಜಿ ಸೈನಿಕರ ಕ್ಯಾಂಟೀನ್‌ನಲ್ಲಿ ಕಂಡು ಬರುತ್ತಿರುವ ಅಗತ್ಯ ವಸ್ತುಗಳ ಕೊರತೆಯನ್ನು ನೀಗಿಸಬೇಕು ಎಂದು ಸಂಘದ ಮೂಲಕ ಮನವಿ ಮಾಡಲಾಗಿದೆ ಎಂದರು. ಜಿಲ್ಲೆಯ ಮಾಜಿ ಸೈನಿಕರಿಗೆ ಅಗತ್ಯವಾದ ನಿವೇಶನಗಳ ಕೊರತೆ ಇನ್ನೂ ಕೂಡ ನೀಗಿಸಿಲ್ಲ ಎಂದ ಅವರು ಜಿಲ್ಲೆಯ ಮಾಜಿ ಸೈನಿಕರು ಒಗ್ಗಟ್ಟಾಗಿ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದರು.

ಮಾಜಿ ಸೈನಿಕರ ಸಂಘದಲ್ಲಿ ಯಾವುದೇ ಸಂದರ್ಭ ರಾಜಕೀಯ ನುಸುಳದಂತೆ ಎಚ್ಚರ ವಹಿಸಬೇಕು ಎಂದ ಕಾರ್ಯಪ್ಪ ಅವರು ಜಿಲ್ಲಾಡಳಿತ ಮಾಜಿ ಸೈನಿಕರ ಬಗ್ಗೆ ಕಾಳಜಿ ವಹಿಸಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಗಮನಹರಿಸಬೇಕು ಎಂದು ಆಗ್ರಹಿಸಿದರು.

ಕುಶಾಲನಗರ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕ್ಯಾಪ್ಟನ್ ಡಿ.ಕೆ. ಚಿಣ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ಮಾಜಿ ಸೈನಿಕರ ಕಟ್ಟಡಕ್ಕೆ ಸ್ಥಳದಾನ ಮಾಡಿದ ನಾಯಕ್ ಕೆದಂಬಾಡಿ ಸಣ್ಣಪ್ಪ ಅವರು ಉದ್ಘಾಟಿಸಿದರು. ಸುಬೇದಾರ್ ಮಾದಪ್ಪ ಅವರು ಸಂಘದ ಹೆಜ್ಜೆ ಗುರುತಿನ ಬಗ್ಗೆ ಮಾಹಿತಿ ನೀಡಿದರು.

ಸಂಘದ ಕಟ್ಟಡದ ಸ್ಥಳದಾನಿಗಳು ಹಾಗೂ ಸಂಘದ ಸಂಸ್ಥಾಪಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಂಘದ ಸದಸ್ಯರಿಗೆ ಮತ್ತು ಕುಟುಂಬ ಸದಸ್ಯರಿಗೆ, ಪತ್ನಿಯರಿಗೆ ನಡೆದ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಕೊಡಗು ಮಾಜಿ ಸೈನಿಕರ ಸಂಘದ ಕಾರ್ಯದರ್ಶಿ ಮೇಜರ್ ಚಿಂಗಪ್ಪ, ಗ್ರೂಪ್ ಕ್ಯಾಪ್ಟನ್ ಕೆ.ಎ. ಕಾರ್ಯಪ್ಪ, ಕುಶಾಲನಗರ ಕೊಡವ ಸಮಾಜದ ಅಧ್ಯಕ್ಷರಾದ ಬೋಸ್ ಮೊಣ್ಣಪ್ಪ ಉಪಸ್ಥಿತರಿದ್ದರು. ಉಪಾಧ್ಯಕ್ಷ ಮನು ನಂಜುAಡ ಸ್ವಾಗತಿಸಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.