ಸೋಮವಾರಪೇಟೆ, ಸೆ. ೨೮: ಪಟ್ಟಣದ ಕಕ್ಕೆಹೊಳೆ ಜಂಕ್ಷನ್‌ನಲ್ಲಿ ಇಂದು ಬೆಳಿಗ್ಗೆ ಜೀಪು ಹಾಗೂ ಕಾರಿನ ನಡುವೆ ಡಿಕ್ಕಿ ಸಂಭವಿಸಿದ್ದು, ಅಪಘಾತದಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಜೀಪು ಆವರಣಗೋಡೆಯನ್ನು ಹಾನಿಗೊಳಿಸಿದ ಘಟನೆ ನಡೆದಿದೆ.

ಪಟ್ಟಣದಿಂದ ಬಜೆಗುಂಡಿ ಕಡೆಗೆ ತೆರಳುತ್ತಿದ್ದ ಜೀಪು ಹಾಗೂ ಬಜೆಗುಂಡಿಯಿAದ ಪಟ್ಟಣಕ್ಕೆ ಆಗಮಿಸುತ್ತಿದ್ದ ಕಾರಿನ ನಡುವೆ ಕಕ್ಕೆಹೊಳೆ ಜಂಕ್ಷನ್‌ನ ಸೇತುವೆ ಬಳಿಯ ತಿರುವಿನಲ್ಲಿ ಡಿಕ್ಕಿ ಸಂಭವಿಸಿದೆ. ಘಟನೆಯಿಂದ ಎರಡೂ ವಾಹನಗಳು ಜಖಂಗೊAಡಿದ್ದು, ಸವಾರರು ಅಪಾಯದಿಂದ ಪಾರಾಗಿದ್ದಾರೆ.

ಅವಘಡಕ್ಕೀಡಾದ ಜೀಪು ರಸ್ತೆ ಬದಿಯಲ್ಲಿರುವ ಬಸವೇಶ್ವರ ಪ್ರತಿಮೆಯ ಆವರಣದೊಳಗೆ ನುಗ್ಗಿದ್ದು, ಇದರಿಂದಾಗಿ ಆವರಣದ ಗೋಡೆ, ಗೇಟ್‌ಗಳು ಮುರಿದುಬಿದ್ದಿವೆ. ಕಳೆದ ತಿಂಗಳು ಕಕ್ಕೆಹೊಳೆ ಜಂಕ್ಷನ್‌ನಲ್ಲಿರುವ ಹಳೆಯ ಕಾಲದ ಸೇತುವೆಯ ತಳಭಾಗ ಕುಸಿಯುತ್ತಿದ್ದ ಹಿನ್ನೆಲೆ ಲೋಕೋಪಯೋಗಿ ಇಲಾಖೆಯವರು ಸೇತುವೆ ಮೇಲಿನ ಸಂಚಾರವನ್ನು ಬಂದ್ ಮಾಡಿದ್ದು, ವಾಹನಗಳ ಓಡಾಟಕ್ಕೆ ಸಂಪೂರ್ಣ ತಡೆಹಾಕಿದೆ.

ಪಟ್ಟಣದಿಂದ ಹಾನಗಲ್ಲು ಸಂಪರ್ಕಿಸುವ ರಸ್ತೆಯಲ್ಲಿ ಓಡಾಡುತ್ತಿದ್ದ ವಾಹನಗಳು ಇದೀಗ ಬಸವೇಶ್ವರ ಪ್ರತಿಮೆಯ ಮುಂಭಾಗದಿAದ ಬಲಭಾಗಕ್ಕೆ ತಿರುವು ಪಡೆದುಕೊಳ್ಳ ಬೇಕಿದೆ. ಇಲ್ಲಿ ಯಾವುದೇ ವೃತ್ತಗಳು, ಸೂಚನಾ ಫಲಕ ಇಲ್ಲದ್ದರಿಂದ ಆಗಾಗ್ಗೆ ಇಂತಹ ಘಟನೆಗಳು ನಡೆಯುತ್ತಿವೆ. ಸೇತುವೆಯನ್ನು ಬಂದ್ ಮಾಡಿದ ಲೋಕೋಪಯೋಗಿ ಇಲಾಖೆಯವರು ನಂತರ ಇತ್ತ ಗಮನವನ್ನೇ ಹರಿಸಿಲ್ಲ; ಕನಿಷ್ಟ ಪಕ್ಷ ರಾಜ್ಯ ಹೆದ್ದಾರಿಯಲ್ಲಿ ಬ್ಯಾರಿಕೇಡ್ -ಸೂಚನಾ ಫಲಕವನ್ನೂ ಅಳವಡಿಸಿಲ್ಲ. ಅತ್ತ ಸೇತುವೆಯನ್ನೂ ದುರಸ್ತಿ ಪಡಿಸುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಸದ್ಯ ಅವಘಡದಿಂದ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಒಂದು ವೇಳೆ ಸೇತುವೆಯ ಮೇಲ್ಭಾಗ ಘಟನೆ ಸಂಭವಿಸಿದ್ದರೆ ಹೆಚ್ಚಿನ ಹಾನಿ ಸಂಭವಿಸುತ್ತಿತ್ತು. ತಕ್ಷಣ ಲೋಕೋಪಯೋಗಿ ಇಲಾಖೆ ಈ ಬಗ್ಗೆ ಗಮನ ಹರಿಸಿ ಹಳೆಯ ಸೇತುವೆಯ ಮೇಲ್ಭಾಗ ಲಘು ವಾಹನಗಳ ಓಡಾಟಕ್ಕೆ ಅವಕಾಶ ಕಲ್ಪಿಸಬೇಕು. ಶಾಲಾ ಕಾಲೇಜು ವಿದ್ಯಾರ್ಥಿಗಳು, ಪಾದಚಾರಿ ಗಳು ನಡೆದುಕೊಂಡು ಹೋಗಲು ಅನುವು ಮಾಡಿಕೊಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.