ಮಡಿಕೇರಿ, ಸೆ. ೨೬ : ಭಾಗ ಮಂಡಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಲಕಾವೇರಿ ಪುಣ್ಯಕ್ಷೇತ್ರದ ಸಮೀಪ ಪ್ರವಾಸಿಗರನ್ನು ಸೆಳೆಯಲು ಎರಡು ಗ್ಲಾಸ್ ಬ್ರಿಡ್ಜ್ ನಿರ್ಮಿಸಲು ನೀಡಿರುವ ಅನುಮತಿಯನ್ನು ರದ್ದುಪಡಿಸುವಂತೆ ಕೋರಿ ಕೊಡಗು ಏಕೀಕರಣ ರಂಗ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್ ಪೊನ್ನಣ್ಣ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.

೨೦೨೦ರ ಆಗಸ್ಟ್ ತಿಂಗಳಲ್ಲಿ ತಲಕಾವೇರಿಯಲ್ಲಿ ಸಂಭವಿಸಿದ ಭೂ ಕುಸಿತದಲ್ಲಿ ಐವರ ಜೀವಹಾನಿ ಯಾಗಿದೆ. ಈ ಬಗ್ಗೆ ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ ನಡೆಸಿದ ಅಧ್ಯಯನದಲ್ಲಿ ಈ ಭೂಕುಸಿತಕ್ಕೆ ತಲಕಾವೇರಿಯ ಪರ್ವತ ಸಾಲುಗಳಲ್ಲಿ ಬೃಹತ್ ಯಂತ್ರಗಳನ್ನು ಬಳಸಿ ನಡೆಸಿದ ಭೂ ಅಭಿವೃದ್ಧಿ ಕಾಮಗಾರಿಯೇ ಕಾರಣ ಎಂಬುದು ದೃಢಪಟ್ಟಿದೆ.

ಕ್ಷೇತ್ರದ ಸಮೀಪವೇ ಮತ್ತೊಂದು ಪ್ರವಾಸಿ ಆಕರ್ಷಣೆ ರೂಪುಗೊಂಡಲ್ಲಿ ತಲಕಾವೇರಿಗೆ ಭಕ್ತಾದಿಗಳಿಗಿಂತ ಪ್ರವಾಸಿಗರೇ ಅಧಿಕ ಸಂಖ್ಯೆಯಲ್ಲಿ ಆಗಮಿಸುವ ಅಪಾಯವಿದೆ. ೧೯೮೬ರ ಪರಿಸರ ಸಂರಕ್ಷಣಾ ಕಾಯ್ದೆ ಪ್ರಕಾರ ತಲಕಾವೇರಿ ವನ್ಯಧಾಮವನ್ನು ಸೂಕ್ಷö್ಮ ಪರಿಸರ ವಲಯ ಎಂದು ಕೇಂದ್ರದ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಮೇ ೧೫, ೨೦೧೭ರಂದು ಘೋಷಿಸಿದೆ. ಈ ಘೋಷಣೆಯಂತೆ ರಾಜ್ಯ ಸರಕಾರ ಜೋನಲ್ ಪ್ಲಾನ್ ರೂಪಿಸಬೇಕಿದೆ. ಆದರೆ ರಾಜ್ಯ ಸರಕಾರ ಇದುವರೆಗೂ ಆ ರೀತಿಯ ಘೋಷಣೆ ಹೊರಡಿಸಿಲ್ಲ ಎಂದು ರಂಗದ ನಿರ್ದೇಶಕ ಎ.ಎ. ತಮ್ಮುಪೂವಯ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ.