ಮಡಿಕೇರಿ,ಸೆ. ೨೫ : ಅಕ್ಟೋಬರ್ ೧೮ರ ಬೆಳಗ್ಗಿನ ಜಾವ(ತಾ.೧೭ರ ಮಧ್ಯರಾತ್ರಿ ಕಳೆದು) ೧ಗಂಟೆ ೨೭ನಿಮಿಷಕ್ಕೆ ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವ ಸಂದರ್ಭದಲ್ಲಿ ಯಾವುದೇ ಲೋಪದೋಷಗಳಾಗ ದಂತೆ ಪರಿಪೂರ್ಣ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜು ಸಂಬAಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ತುಲಾಸಂಕ್ರಮಣ ಜಾತ್ರೆ ಸಂಬAಧ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಪ್ರಮುಖವಾಗಿ ಜಾತ್ರೆಗೆ ಬರುವ ಭಕ್ತಾದಿಗಳಿಗೆ ಸೂಕ್ತ ರಕ್ಷಣೆಯೊಂದಿಗೆ ಬಂದೋಬಸ್ತ್ ವ್ಯವಸ್ಥೆ ಮಾಡಬೇಕು. ರಸ್ತೆ ಬದಿಗಳಲ್ಲಿನ ಕಾಡು ಕಡಿಯುವುದ ರೊಂದಿಗೆ ಗುಂಡಿ ಮುಚ್ಚುವ ಕೆಲಸವನ್ನು ಈಗಿನಿಂದಲೇ ಮಾಡಬೇಕು. ರಸ್ತೆ ಬದಿಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸಬೇಕು. ಭಾಗಮಂಡಲದಿAದ ತಲಕಾವೇರಿವರೆಗೆ ವಿದ್ಯುತ್ ದೀಪಗಳನ್ನು ಅಳವಡಿಸಬೇಕು, ಸಾರಿಗೆ ಸಂಸ್ಥೆ ಮೂಲಕ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಬೇಕು. ಆರೋಗ್ಯ ಇಲಾಖೆ ಮೂಲಕ ಸೂಕ್ತ ವ್ಯವಸ್ಥೆ ಮಾಡಬೇಕು. ಗ್ರಾಮ ಪಂಚಾಯಿತಿ ಮೂಲಕ ಶೌಚಾಲಯ, ಶುಚಿತ್ವದ ವ್ಯವಸ್ಥೆ ಮಾಡಬೇಕು ಈ ಬಗ್ಗೆ ಈಗಿನಿಂದಲೇ ವ್ಯವಸ್ಥೆ ಮಾಡಿ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಬೇಕೆಂದು ಹೇಳಿದರು.

ಕಾವೇರಿ ನಮ್ಮೆಲ್ಲರ ತಾಯಿ ಯಾಗಿದ್ದು, ಎಲ್ಲರ ಸಹಕಾರದೊಂದಿಗೆ ಯಶಸ್ವಿಗೊಳಿಸಬೇಕು. ಮುಂದಿನ ದಿನಗಳಲ್ಲಿ ಸ್ಥಳೀಯ ಗಣ್ಯರು, ಅಧಿಕಾರಿಗಳು, ಜನಪ್ರತಿನಿಧಿಗಳನ್ನೊಳ ಗೊಂಡು ಭಾಗಮಂಡಲದಲ್ಲಿ ಮತ್ತೊಂದು ಸಭೆ ನಡೆಸುವದಾಗಿ ಹೇಳಿದರು.

ಶಾಸಕ ಪೊನ್ನಣ್ಣ ಮಾತನಾಡಿ; ಈ ಬಾರಿ ರಾತ್ರಿ ವೇಳೆ ತೀರ್ಥೋದ್ಭವ ಆಗುವದರಿಂದ ಭಕ್ತರು ಹೆಚ್ಚಿರುತ್ತಾರೆ. ಯಾರಿಗೂ ತೊಂದರೆಯಾಗಬಾರದು. ಓಡಾಡಲು ಅನುಕೂಲವಾಗುವಂತೆ ಸೂಕ್ತ ಬೆಳಕಿನ ವ್ಯವಸ್ಥೆ ಮಾಡಬೇಕು.

ಕುಂಡಿಕೆ ಬಳಿ ಅತಿಥಿಗಳಿಗೆ ಅವಕಾಶ ಮಾಡಿಕೊಡಬೇಕು. ಕ್ಷೇತ್ರದಲ್ಲಿ ಕಲಾತಂಡಗಳಿಗೂ ಅವಕಾಶ ಮಾಡಿಕೊಟ್ಟು ಕಾರ್ಯಕ್ರಮ ನೀಡುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ ಹಾಗಾಗಿ ಹೆಚ್ಚಿನ ವ್ಯವಸ್ಥೆ ಮಾಡಬೇಕಿದೆ. ಬಸ್ ವ್ಯವಸ್ಥೆ ಕೂಡ ಕಲ್ಪಿಸಬೇಕು. ನೀರು, ಶೌಚಾಲಯದ ವ್ಯವಸ್ಥೆಯನ್ನು ಪಂಚಾಯಿತಿಯವರು ಮಾಡಬೇಕೆಂದು ಹೇಳಿದರು.

ವಿಧಾನಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಮತನಾಡಿ; . ದಸರಾ ಉತ್ಸವ ಕೂಡ ಇರುವದರಿಂದ ವಾಹನಗಳು,

(ಮೊದಲ ಪುಟದಿಂದ) ಜನರು ಹೆಚ್ಚಾಗಿ ಇರುತ್ತಾರೆ. ಹೆಚ್ಚಿನ ಬಂದೋಬಸ್ತ್ ಹಾಗೂ ಬೆಳಕಿನ ವ್ಯವಸ್ಥೆ ಮಾಡಬೇಕು, ರಸ್ತೆಬದಿಗಳಲ್ಲಿರುವ ನಾಮ ಫಲಕಗಳನ್ನು ಸರಿಪಡಿಸಬೇಕೆಂದು ಸಲಹೆ ಮಾಡಿದರು.

ಪಾಳಿಯಲ್ಲಿ ಬಂದೋಬಸ್ತ್

ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಮಾತನಾಡಿ; ಈ ಬಾರಿ ಹಗಲು ಹಾಗೂ ರಾತ್ರಿ ಪಾಳಿಯಲ್ಲಿ ಬಂದೋಬಸ್ತ್ಗಾಗಿ ಸಿಬ್ಬಂದಿಗಳನ್ನು ನೇಮಕ ಮಾಡಲಾಗುವದು, ಭಾಗಮಂಡಲ ರಸ್ತೆಯಲ್ಲಿ ತಿರುವುಗಳಿದ್ದು, ಕಾಡು ಪೊದೆಗಳಿಂದ ಕೂಡಿದೆ, ಅಲ್ಲದೆ ರಸ್ತೆಗಳಲ್ಲಿ ಗುಂಡಿಗಳಿದ್ದು, ಇದರಿಂದಾಗಿ ಅವಘಡಗಳು ಸಂಭವಿಸುತ್ತವೆ. ಹಾಗಾಗಿ ಕಾಡು ಕಡಿದು, ಗುಂಡಿ ಮುಚ್ಚುವ ಕೆಲಸ ಆಗಬೇಕು, ಇದರಿಂದ ಅಪಘಾತ ತಡೆಯಬಹುದಾಗಿದೆ ಎಂದು ಹೇಳಿದರು. ತಲಕಾವೇರಿಯಲ್ಲಿ ಗಣ್ಯರಿಗೆ ಪ್ರತ್ಯೇಕ ವಾಹನ ನಿಲುಗಡೆ ವ್ಯವಸ್ಥೆಯೊಂದಿಗೆ ಭಕ್ತಾದಿಗಳಿಗೂ ವಾಹನ ನಿಲುಗಡೆಗೆ ಅವಕಾಶ ಮಾಡಿಕೊಡಲಾಗುವದು. ಅಲ್ಲಿ ಭರ್ತಿಯಾದ ಬಳಿಕ ಭಾಗಮಂಡಲದಲ್ಲಿಯೇ ತಡೆ ಹಿಡಿದು ಸಾರಿಗೆ ಬಸ್‌ಗಳ ಮುಖೇನ ಪ್ರಯಾಣಿಸಲು ಅವಕಾಶ ಮಾಡಿಕೊಡಲಾಗುವದು ಎಂದು ಮಾಹಿತಿ ನೀಡಿದರು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್.ವಿ. ಪ್ರಸಾದ್ ಮಾತನಾಡಿ; ಎಲ್ಲಾ ವ್ಯವಸ್ಥೆಗಳನ್ನು ಸರಿಯಾಗಿ ಮಾಡಿಕೊಳ್ಳಬೇಕು. ದಸರಾ ಹಾಗೂ ವಿಶೇಷ ರಜೆ ಇರುವದರಿಂದ ಹೆಚ್ಚಿನ ಜನರು ಬರುತ್ತಾರೆ. ಅನ್ನದಾನ ಸಂದರ್ಭದಲ್ಲೂ ಯಾವುದೇ ತೊಂದರೆ ಆಗದಂತೆ ನಿಗಾ ವಹಿಸಬೇಕು. ಏನಾದರೂ ಸಮಸ್ಯೆಗಳಿದ್ದಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ತರುವಂತೆ ಹೇಳಿದರು.

ಜಿಲ್ಲಾಧಿಕಾರಿ ವೆಂಕಟ್‌ರಾಜಾ ಮಾತನಾಡಿ; ಸಭೆಯಲ್ಲಿ ಚರ್ಚೆಯಾದ ಎಲ್ಲ ವ್ಯವಸ್ಥೆಗಳ ಬಗ್ಗೆ ಗಮನಿಸಲಾಗಿದೆ, ಲೋಕೋಪಯೋಗಿ ಇಲಾಖೆಗೆ ಹೆಚ್ಚಿನ ಜವಾಬ್ದಾರಿ ಇದೆ. ಒಂದು ವಾರದಲ್ಲಿ ಮತ್ತೊಂದು ಸಭೆ ನಡೆಸಿ ತೀರ್ಮಾನ ಕೈಗೊಳ್ಳೋಣವೆಂದು ಹೇಳಿದರು.

ಸಭೆಯಲ್ಲಿದ್ದ ಎಂ.ಬಿ. ದೇವಯ್ಯ ಮಾತನಾಡಿ, ಪ್ರತಿ ವರ್ಷ ಕುಂಡಿಕೆ ಬಳಿ ಬಾಳೋಪಾಟ್ ಹಾಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಕಲಾತಂಡಕ್ಕೆ ತಲಕಾವೇರಿಗೆ ತೆರಳಲು ವಾಹನಕ್ಕೆ ಪಾಸ್ ಕೊಡಿಸುವಂತೆ ಮನವಿ ಮಾಡಿದರು. ಬಿ.ಎಸ್. ತಮ್ಮಯ್ಯ ಮಾತನಾಡಿ; ಬೀದಿ ದಿಪಗಳ ಬೆಳಕಿನ ವ್ಯವಸ್ಥೆ ಸಾಕಾಗುವದಿಲ್ಲ. ಹಾಗಾಗಿ ಜನರೇಟರ್‌ಗಳನ್ನು ಬಳಸಿಕೊಂಡು ಹೆಚ್ಚಿನ ಟೂಬ್‌ಲೈಟ್‌ಗಳನ್ನು ಅಳವಡಿಸಬೆಕೆಂದು ಸಲಹೆ ಮಾಡಿದರು.

ಡಿ.ಎಸ್. ಹರ್ಷ ಮಾತನಾಡಿ; ರಸ್ತೆ ದುರಸ್ತಿ ಕೆಲಸವನ್ನು ಈಗಿನಿಂದಲೇ ಮಾಡಬೇಕು. ರಸ್ತೆ ಬದಿಯಲ್ಲಿನ ಮರಗಳನ್ನು ತೆರವುಗೊಳಿಸಬೇಕು, ಇದರಿಂದಾಗಿ ರಸ್ತೆಗಳು ಹಾಳಾಗುತ್ತಿರುವದಾಗಿ ಹೇಳಿದರು. ಬಾಲಚಂದ್ರ ನಾಯರ್ ಮಾತನಾಡಿ; ಕರಿಕೆ-ಭಾಗಮಂಡಲ ರಸ್ತೆ ಬದಿಗಳಲ್ಲಿ ಕಾಡು ಕಡಿಯದೇ ವಾಹನಗಳು ಸಂಚರಿಸಲು ಸಾಧ್ಯವಾಗುತ್ತಿಲ್ಲವೆಂದು ಹೇಳಿದರು. ಸುನಿಲ್ ಪತ್ರಾವೋ ಮಾತನಾಡಿ, ಕಳೆದ ವರ್ಷ ಕಾವೇರಿ ನೀರಾವರಿ ನಿಗಮದಿಂದ ರೂ. ೧.೧೦ ಕೋಟಿ ಅನುದಾನ ಬಿಡುಗಡೆಗೊಂಡಿದ್ದು, ಈ ಬಗ್ಗೆ ಮಾಹಿತಿ ನೀಡುವಂತೆ ಕೋರಿದರು. ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ವೀಣಾ, ಉಪ ವಿಭಾಗಾಧಿಕಾರಿ ವರ್ಣಿತ್ ನೇಗಿ ಇದ್ದರು.