ಮಡಿಕೇರಿ, ಸೆ. ೨೬: ಇಲ್ಲಿನ ಕೆಎಸ್ ಆರ್‌ಟಿಸಿ ಡಿಪೋ ಬಳಿ ಇರುವ ಶಾಂತಿ ನಿಕೇತನ ಬಡಾವಣೆಯ ಶಾಂತಿನಿಕೇತನ ಯುವಕ ಸಂಘದ ವತಿಯಿಂದ ಪ್ರತಿಷ್ಠಾ ಪಿಸಲಾಗಿರುವ ೪೫ನೇ ವರ್ಷದ ಗಣೇಶ ಉತ್ಸವದ ಪ್ರಯುಕ್ತ ಕ್ರೀಡಾಕೂಟ-೨೦೨೩ ಏರ್ಪಡಿಸಲಾಗಿತ್ತು.

ಸಂಘದ ಆವರಣದಲ್ಲಿ ಸಂಘದ ಅಧ್ಯಕ್ಷ ಚೇತನ್ ಅವರ ಮಾರ್ಗದ ರ್ಶನದಲ್ಲಿ ನಡೆದ ಕ್ರೀಡಾಕೂಟಕ್ಕೆ ಅಶ್ವಿನಿ ಗಣಪತಿ ದೇವಸ್ಥಾನದಿಂದ ಕ್ರೀಡಾ ಜ್ಯೋತಿಯೊಂದಿಗೆ ಆಗಮಿಸಿದ ಸಂಘದ ಸದಸ್ಯ, ಮಾಜಿ ಕ್ರೀಡಾಪಟು ರವಿ ಪಿ.ಎ. ಚಾಲನೆ ನೀಡಿದರು. ಕ್ರೀಡಾಕೂಟದ ಉದ್ಘಾಟನೆಯನ್ನು ಉದ್ಯಮಿ ಕೆ. ಕೆ. ದಾಮೋದರ ನೆರವೇರಿಸಿದರು.

v=೨೦ಕ್ಕೂ ಹೆಚ್ಚು ಸ್ಪರ್ಧೆಯಲ್ಲಿ ಪುಟ್ಟ ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರು ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿದ್ದ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ ಮಾತನಾಡಿ, ಶಾಂತಿನಿಕೇತನ ಯುವಕ ಸಂಘ ಅಂದು ಬಾಲಗಂಗಾಧರ ತಿಲಕರ ಗಣೇಶೋತ್ಸವದ ಉದ್ದೇಶವನ್ನು ಇಂದಿಗೂ ಯಥಾವತ್ತಾಗಿ ಪಾಲಿಸಿಕೊಂಡು ಶ್ರದ್ಧಾ- ಭಕ್ತಿಯಿಂದ ಆಚರಿಸುತ್ತಾ ಬರುತ್ತಿದೆ. ಸರ್ವ ಧರ್ಮ ಗಣಪತಿ ಎಂದರೆ ಅದು ಶಾಂತಿನಿಕೇತನ ಗಣಪತಿ. ದಸರೆಯ ೧೧ನೇ ಮಂಟಪ ಶಾಂತಿನಿಕೇತನ ಯುವಕ ಸಂಘದ ಗಣೇಶೋತ್ಸವ ಮಂಟಪ ಎಂಬ ಹೆಗ್ಗಳಿಕೆ ಇದೆ. ಸಂಘದ ಅಧ್ಯಕ್ಷ ಚೇತನ್ ಮತ್ತು ತಂಡದ ಶ್ರಮ ಶ್ಲಾಘನೀಯ ಎಂದರು. ಮತ್ತೋರ್ವ ಅತಿಥಿ ಸಂಘದ ಗೌರವ ಸಲಹೆಗಾರ ಮನು ಮಂಜುನಾಥ್ ಮಾತನಾಡಿ ಮಕ್ಕಳು ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು. ಮೊಬೈಲ್ ಚಟ ಒಳ್ಳೆಯದಲ್ಲಾ. ಕ್ರೀಡೆ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಸಹಾಯಕಾರಿ ಎಂದರು. ಅತಿಥಿಗಳಾಗಿ ಉದ್ಯಮಿ ರಾಜು, ಮನು ಮಂಜುನಾಥ್, ಕ್ರೀಡಾ ಸಮಿತಿಯ ಆಕಾಶ್ ತೇಜು ಹಾಗೂ ತಮ್ಮಿ ಉಪಸ್ಥಿತರಿದ್ದರು. ಯೋಗೇಶ್ ಕುಮಾರ್ ಸ್ವಾಗತಿಸಿ, ಭರತ್ ಕುಮಾರ್ ನಿರೂಪಿಸಿದರೆ, ದಿವಾಕರ್ ರೈ ವಂದಿಸಿದರು.