ಮಡಿಕೇರಿ, ಸೆ. ೨೫: ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಉತ್ಸವವನ್ನು ವ್ಯವಸ್ಥಿತವಾಗಿ ಆಚರಿಸುವ ನಿಟ್ಟಿನಲ್ಲಿ ಸರ್ವರೂ ಕೈಜೋಡಿಸಬೇಕೆಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್. ಬೋಸರಾಜು ಮನವಿ ಮಾಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ದಸರಾ ಪ್ರಯುಕ್ತ ನಡೆದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡ ಅವರು ದಸರಾ ಸಮಿತಿ ಪದಾಧಿಕಾರಿಗಳ ಸಲಹೆಗಳನ್ನು ಆಲಿಸಿ ಬಳಿಕ ಮಾತನಾಡಿದರು. ಮಡಿಕೇರಿ ದಸರಾ ಉತ್ಸವಕ್ಕೆ ತನ್ನದೇ ಆದ ಇತಿಹಾಸವಿದೆ. ಈ ಹಿನ್ನೆಲೆಯಲ್ಲಿ ದಸರಾ ಆಚರಣೆಗೆ ಅಗತ್ಯ ಮುಂಜಾಗ್ರತಾ ಹಾಗೂ ಪೂರ್ವ ಸಿದ್ಧತಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ರಸ್ತೆ ದುರಸ್ಥಿ, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯಗಳ ವ್ಯವಸ್ಥೆ, ತುರ್ತು ಆರೋಗ್ಯ ಸೇವೆ ಸೇರಿದಂತೆ ಅಗತ್ಯವಾಗಿ ಆಗಬೇಕಾದ ವ್ಯವಸ್ಥೆಗಳನ್ನು ಚಾಚೂ ತಪ್ಪದೆ ಸಂಬAಧಿಸಿದ ಇಲಾಖೆಗಳು ಮಾಡಬೇಕು ಎಂದು ಸಚಿವರು ಹೇಳಿದರು.

ವಿಜಯದಶಮಿಯಂದು ಲಕ್ಷಾಂತರ ಜನ ಮಡಿಕೇರಿಗೆ ಆಗಮಿಸಲಿದ್ದು, ಯಾವುದೇ ರೀತಿಯ ಅನಾಹುತಗಳಾಗದಂತೆ; ಮಡಿಕೇರಿ ನಗರಕ್ಕೆ ಕಪ್ಪು ಚುಕ್ಕೆ ಬಾರದ ರೀತಿಯಲ್ಲಿ ಎಲ್ಲರೂ ಕಾರ್ಯಪ್ರವೃತ್ತರಾಗಬೇಕು ಎಂದು ಕಿವಿಮಾತು ಹೇಳಿದ ಬೋಸರಾಜು ಅವರು, ಸರ್ಕಾರದ ಅನುದಾನ ಉತ್ಸವಕ್ಕೂ ಮುಂಚಿತವಾಗಿ ದಸರಾ ಸಮಿತಿಯ ಕೈ ಸೇರುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆಯಿತ್ತರು. ದಸರಾ ಸಮಿತಿ ಹೆಚ್ಚಿನ ಅನುದಾನಕ್ಕೆ ಬೇಡಿಕೆಯಿಟ್ಟಿದ್ದು, ಈ ಬಗ್ಗೆ ಸಂಬAಧಿಸಿದವರೊAದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಆಶ್ವಾಸನೆಯಿತ್ತರು. ಎಲ್ಲಾ ಅಧಿಕಾರಿಗಳನ್ನು ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳನ್ನು ಒಟ್ಟು ಗೂಡಿಸಿ ದಸರಾವನ್ನು ಯಶಸ್ವಿಯಾಗಿ ನಡೆಸಲು ಮುಂದಡಿಯಿಡುವAತೆ ದಸರಾ ಸಮಿತಿಗೆ ಅವರು ಸಲಹೆ ನೀಡಿದರು.

ಮಡಿಕೇರಿ ಶಾಸಕ ಡಾ. ಮಂಥರ್‌ಗೌಡ ಮಾತನಾಡಿ, ದಸರಾ ಉತ್ಸವಕ್ಕೆ ಹೆಚ್ಚಿನ ಅನುದಾನ ನೀಡಲು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದರು. ದಸರಾ ಸಂದರ್ಭ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಅಗತ್ಯ ಕ್ರಮಕೈಗೊಳ್ಳಬೇಕು. ಮಡಿಕೇರಿ ನಗರ ಅಲಂಕಾರ, ರಸ್ತೆಗಳ ದುರಸ್ತಿ, ಕಟ್ಟಡಗಳಿಗೆ ಸುಣ್ಣಬಣ್ಣ ಇತ್ಯಾದಿಗಳ ಬಗ್ಗೆ ನಗರಸಭಾ ಆಯುಕ್ತರು ಆದಷ್ಟು ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು. ಅ. ೧೫ರಿಂದ ಅ. ೨೪ರವರೆಗೆ ನವರಾತ್ರಿ ಕಾರ್ಯ ಕ್ರಮಗಳು ನಡೆಯಲಿದ್ದು, ಅ. ೨೧ರ ಕಾರ್ಯಕ್ರಮಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ್ ತಂಗಡಗಿ ಅವರು ಭಾಗಿಯಾಗು ವುದಾಗಿ ಖಚಿತಪಡಿಸಿದ್ದಾರೆ. ಮಡಿಕೇರಿ

(ಮೊದಲ ಪುಟದಿಂದ) ದಸರಾ ಉತ್ಸವಕ್ಕೆ ಮಂಟಪಗಳ ತಯಾರಿ, ಕಾರ್ಯಕ್ರಮಗಳು, ಮೂಲಭೂತ ಸೌಕರ್ಯಗಳ ವ್ಯವಸ್ಥೆಗಾಗಿ ಹೆಚ್ಚಿನ ಅನುದಾನದ ಅವಶ್ಯಕತೆಯಿದ್ದು, ಉಸ್ತುವಾರಿ ಸಚಿವರು ಅಗತ್ಯ ಸಹಕಾರ ನೀಡಬೇಕೆಂದು ಕೋರಿದರು.

ದಸರಾ ಸಮಿತಿ ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ, ದಸರಾ ಕಾರ್ಯಕ್ರಮಕ್ಕೆ ಶಾಶ್ವತ ವೇದಿಕೆ ಇಲ್ಲದೆ ಲಕ್ಷಾಂತರ ರೂ. ಹಣ ವೆಚ್ಚವಾಗುತ್ತಿದ್ದು. ಶಾಶ್ವತ ವೇದಿಕೆ ನಿರ್ಮಾಣಕ್ಕೆ ಕ್ರಮಕೈಗೊಳ್ಳುವಂತೆ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದರು. ಈ ಬಾರಿ ೨ ಕೋಟಿ ಅನುದಾನಕ್ಕೆ ಬೇಡಿಕೆ ಸಲ್ಲಿಸಲಾಗಿದ್ದು, ಈ ಸಂಬAಧ ಸಚಿವರು ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಮಡಿಕೇರಿ ದಸರಾದಿಂದ ಪ್ರವಾಸೋದ್ಯಮ, ವ್ಯಾಪಾರ ವಹಿವಾಟು ಚೇತರಿಸಿಕೊಳ್ಳಲಿದೆ ಎಂದು ನುಡಿದ ಅನಿತಾ ಪೂವಯ್ಯ ದಸರಾ ಉತ್ಸವಕ್ಕೆ ಸರ್ಕಾರ ಅಗತ್ಯ ಅನುದಾನ ನೀಡಬೇಕೆಂದು ಹೇಳಿದರು.

ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜೇಶ್ ಯಲ್ಲಪ್ಪ ಮಾತನಾಡಿ, ಕಳೆದ ಬಾರಿ ಬಿಡುಗಡೆಗೆ ಬಾಕಿ ಇರುವ ಹಣ ಈ ಬಾರಿ ಬಿಡುಗಡೆಯಾದರೆ ಅನುಕೂಲವಾಗಲಿದೆ ಎಂದರು. ಕನ್ನಡ ಸಂಸ್ಕೃತಿ ಇಲಾಖೆಯಿಂದ ಬಿಡುಗಡೆ ಆಗುವ ಅನುದಾನ ನೇರವಾಗಿ ನಗರಸಭಾ ಆಯುಕ್ತರ ಖಾತೆಗೆ ಹಣ ಬರುವಂತೆ ಕ್ರಮಕೈಗೊಂಡರೆ ದಸರಾ ಕಾರ್ಯಗಳನ್ನು ಚುರುಕಾಗಿ ನಡೆಸಲು ಸಹಕಾರಿಯಾಗುತ್ತದೆ ಎಂದರು.

ಖಜಾಂಚಿ ಅರುಣ್‌ಶೆಟ್ಟಿ ಮಾತನಾಡಿ, ಮಡಿಕೇರಿ ನಗರದ ಮುಖ್ಯ ರಸ್ತೆಗಳಲ್ಲಿರುವ ಹಲವಾರು ವಿದ್ಯುತ್ ಕಂಬಗಳು ಶಿಥಿಲಾವಸ್ಥೆಗೆ ತಲುಪಿದ್ದು, ಅವುಗಳನ್ನು ಬದಲಾಯಿಸುವಂತೆ ಕೋರಿದರು.

ಮಾಜಿ ಕಾರ್ಯಾಧ್ಯಕ್ಷ ಮಹೇಶ್ ಜೈನಿ ಮಾತನಾಡಿ, ದಸರಾ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕ್ರೀಡಾ ಕಾರ್ಯಕ್ರಮಗಳು ನಡೆಯುವ ಸಂದರ್ಭ ಆಂಬ್ಯುಲೆನ್ಸ್ ವ್ಯವಸ್ಥೆ ಕಲ್ಪಿಸುವಂತಾಗಬೇಕೆAದರು. ದಸರಾ ಉತ್ಸವಕ್ಕೂ ಮೊದಲೇ ಸರ್ಕಾರದ ಅನುದಾನ ಬಿಡುಗಡೆ ಆಗಬೇಕೆಂದರು. ಉಪಾಧ್ಯಕ್ಷ ಬಿ.ಎಂ. ರಾಜೇಶ್ ಮಾತನಾಡಿ, ರಸ್ತೆ ದುರಸ್ತಿ ಕಾರ್ಯ ಆದಷ್ಟು ಶೀಘ್ರ ನಡೆಯಬೇಕೆಂದರು. ದಶಮಂಟಪ ಸಮಿತಿ ಅಧ್ಯಕ್ಷ ಮಂಜುನಾಥ್ ಮಾತನಾಡಿ, ರಸ್ತೆಗಳ ಗುಂಡಿ ಮುಚ್ಚುವ ಕಾರ್ಯ ಕರಗ ಉತ್ಸವಕ್ಕೆ ಮೂರು ದಿನ ಮುಂಚಿತವಾಗಿ ಪೂರ್ಣಗೊಳ್ಳಬೇಕು. ವಿಜಯದಶಮಿಯಂದು ನಗರ ವ್ಯಾಪ್ತಿಯಲ್ಲಿ ಅಗ್ನಿಶಾಮಕ ದಳ ವಾಹನವನ್ನು ವ್ಯವಸ್ಥೆಗೊಳಿಸಬೇಕೆಂದರು.

ದಸರಾ ಸಮಿತಿ ಮಾಜಿ ಖಜಾಂಚಿ ಚುಮ್ಮಿ ದೇವಯ್ಯ ಮಾತನಾಡಿ, ರಸ್ತೆ ದುರಸ್ತಿ ಕಾರ್ಯವನ್ನು ತಾತ್ಕಾಲಿಕವಾಗಿ ಮಾಡದೆ ಶಾಶ್ವತವಾಗಿ ಇರುವ ರೀತಿಯಲ್ಲಿ ಮಾಡುವಂತಾಗಬೇಕು ಎಂದು ಹೇಳಿದರು. ದಸರಾ ಉತ್ಸವಕ್ಕೂ ಮುನ್ನ ಜ. ತಿಮ್ಮಯ್ಯ ಪ್ರತಿಮೆಯನ್ನು ಪುನರ್‌ಸ್ಥಾಪಿಸಬೇಕೆಂದು ಕೋರಿದರು.

ದಸರಾ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ ಮಾತನಾಡಿ, ಈ ಬಾರಿ ದಸರಾ ಉತ್ಸವಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತಾಗಬೇಕು. ದಸರಾ ಉತ್ಸವ ಯಶಸ್ಸಿಗೆ ಸರ್ವರ ಸಹಕಾರ ಅಗತ್ಯ ಎಂದರು.

ವೇದಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್.ವಿ. ಪ್ರಸಾದ್, ಜಿಲ್ಲಾಧಿಕಾರಿ ವೆಂಕಟ್‌ರಾಜಾ, ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರ್ಣಿತ್ ನೇಗಿ ಉಪಸ್ಥಿತರಿದ್ದರು.