ವೀರಾಜಪೇಟೆ, ಸೆ. ೨೫: ರಕ್ತದಾನ ಮಾಡುವುದು ಜೀವ ಉಳಿಸುವ ಪ್ರಕ್ರಿಯೆಯಾಗಿದೆ ಎಂದು ಮೂರ್ನಾಡು ರಸ್ತೆಯ ಆಶಿರ್ವಾದ್ ಮೆಡಿಕಲ್ ಸೆಂಟರಿನ ವೈದ್ಯರಾದ ಡಾ.ಚೇಂದಿರ ಎ. ಬೋಪಣ್ಣ ಹೇಳಿದರು.
ವೀರಾಜಪೇಟೆಯ ಐತಿಹಾಸಿಕ ಗೌರಿ-ಗಣೇಶೋತ್ಸವ ನವ ದಿನಗಳ ಕಾಲದ ಉತ್ಸವ ಆಚರಣೆಯ ಅಂಗವಾಗಿ ಕಾವೇರಿ ಗಣೇಶೋತ್ಸವ ಸಮಿತಿ ಹಾಗೂ ಮೂರ್ನಾಡು ರಸ್ತೆಯ ಆಶಿರ್ವಾದ್ ಮೆಡಿಕಲ್ ಸೆಂಟರಿನ ಆಶ್ರಯದಲ್ಲಿ ಆಸ್ಪತ್ರೆಯ ಸಭಾಂಗಣದಲ್ಲಿ ನಡೆದ ರಕ್ತದಾನ ಶಿಬಿರವನ್ನು ಉದ್ದೇಶಿಸಿ ಮಾತನಾಡಿದ ಡಾ.ಚೇಂದಿರ ಎ. ಬೋಪಣ್ಣ ಅಪಘಾತ ಮತ್ತು ಇನ್ನಿತರ ಗಂಭೀರ ಸ್ವರೂಪದ ಕಾಯಿಲೆಗಳಿಗೆ ತುತ್ತಾಗಿ ರೋಗಿಗಳಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಹೆಚ್ಚಿಗೆ ಇರುತ್ತದೆ. ಮಾನವ ರಕ್ತಕ್ಕೆ ಪರ್ಯಾಯವಾಗಿ ಇನ್ನಿತರ ದ್ರವಗಳು ಇಲ್ಲದಿರುವುದರಿಂದ ರಕ್ತಕ್ಕೆ ರಕ್ತವೇ ಪರ್ಯಾಯವಾಗಿದೆ. ದಾನಿಗಳಿಂದ ಸಂಗ್ರಹಿಸಿದ ರಕ್ತವನ್ನು ಅವಶ್ಯಕ ರೋಗಿಗಳಿಗೆ ನೀಡಲಾಗುತ್ತದೆ. ಈ ನಿಟ್ಟಿನಲ್ಲಿ ಗಣೇಶೋತ್ಸವದ ಅಂಗವಾಗಿ ಆಯೋಜಿಸಿರುವ ರಕ್ತದಾನ ಶಿಬಿರ ಶ್ಲಾಘನೀಯ ಎಂದು ಹೇಳಿದರು.
ಶ್ರೀ ಕಾವೇರಿ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಆನಂದ್ ರಾಜಪ್ಪ ಮಾತನಾಡಿ ಗಣೇಶೋತ್ಸವ ಒಂದು ಧಾರ್ಮಿಕ ಕಾರ್ಯಕ್ರಮಕ್ಕೆ ಮಾತ್ರ ಸೀಮಿತವಾಗದೆ. ಸಾಮಾಜಿಕ ಕಳಕಳಿ ಇರುವಂತಾಗಬೇಕು. ಆದುದರಿಂದ ಸಮಿತಿಯು ಸಮಾಜಕ್ಕೆ ಉಪಯುಕ್ತವಾಗಲೆಂದು ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ. ಸಾರ್ವಜನಿಕರು ರೋಗದಿಂದ ನರಳುತ್ತಿರುವ ರೋಗಿಗಳಿಗೆ ರಕ್ತ ನೀಡಿ ಸಹಕರಿಸಿ ಎಂದು ಮನವಿ ಮಾಡಿದರು. ಶಿಬಿರದಲ್ಲಿ ಸುಮಾರು ೪೦ ಕ್ಕೂ ಅಧಿಕ ಮಂದಿ ಸಮಿತಿಯ ಸದಸ್ಯರು ಮತ್ತು ಸಾರ್ವಜನಿಕರು ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ರಕ್ತದಾನ ಮಾಡಿದರು.
ಈ ಸಂದರ್ಭದಲ್ಲಿ ಸಮಿತಿಯ ಕಾರ್ಯದರ್ಶಿ ವಿ.ಜಿ.ರಾಕೇಶ್ ಮತ್ತು ಸದಸ್ಯರಾದ ಕಿರಣ್, ಲೋಕೇಶ್ ಆಚಾರ್ಯ, ಶೀನೋಜ್, ಅರ್ಚಕರಾದ ಪ್ರಶಾಂತ್ ಭಟ್ ಇತರ ಸದಸ್ಯರು ಹಾಗೂ ಸಾರ್ವಜನಿಕರು ಹಾಜರಿದ್ದರು.