ಮಡಿಕೇರಿ, ಸೆ. ೨೧: ಐತಿಹಾಸಿಕ ಮಡಿಕೇರಿ ದಸರಾಕ್ಕೆ ರೂ. ೨ ಕೋಟಿ ಅನುದಾನ ಬಿಡುಗಡೆಗೊಳಿಸುಂತೆ ದಸರಾ ಸಮಿತಿ ನಿಯೋಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜು ತಂಗಡಗಿ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು ಅವರನ್ನು ಮನವಿ ಮಾಡಿತು.

ಇಂದು ಬೆಂಗಳೂರಿನ ವಿಧಾನಸೌಧಕ್ಕೆ ತೆರಳಿ ಸಚಿವರನ್ನು ಭೇಟಿಯಾದ ನಿಯೋಗ, ರೂ. ೭೫ ಲಕ್ಷ ಅನುದಾನಕ್ಕೆ ಸರಕಾರ ಒಪ್ಪಿಗೆ ನೀಡಿದೆ. ಆದರೆ, ದಸರಾಕ್ಕೆ ಹೆಚ್ಚುವರಿ ಹಣ ಬೇಕಾಗಿದ್ದು, ಕನಿಷ್ಟ ರೂ. ೨ ಕೋಟಿ ಬಿಡುಗಡೆಗೊಳಿಸಬೇಕೆಂದು ಕೋರಿದೆ.

ತಾ. ೨೨ ರಂದು (ಇಂದು) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನಿಯೋಗ ಭೇಟಿಯಾಗಿ ಹೆಚ್ಚಿನ ಅನುದಾನ ಬಿಡುಗಡೆ ಸಂಬAಧ ಗಮನ ಸೆಳೆಯಲಿದೆ.

ಸಚಿವರ ಭೇಟಿ ಸಂದರ್ಭ ಮಡಿಕೇರಿ ಶಾಸಕ ಡಾ. ಮಂಥರ್ ಗೌಡ, ಮಡಿಕೇರಿ ದಸರಾ ಸಮಿತಿ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ರಾಜೇಶ್ ಯಲ್ಲಪ್ಪ, ಖಜಾಂಜಿ ಅರುಣ್ ಶೆಟ್ಟಿ, ಗೌರವ ಸಲಹೆಗಾರ ಟಿ.ಪಿ. ರಮೇಶ್ ಹಾಜರಿದ್ದರು.