ಸೋಮವಾರಪೇಟೆ, ಸೆ. ೨೧: ಶಾಲಾ ಕಾಲೇಜಿನ ವಿದ್ಯಾರ್ಥಿಗಳ ಸಹಿತ ಪ್ರಯಾಣಿಕರಿದ್ದ ಸರ್ಕಾರಿ ಬಸ್ವೊಂದು ಕುಂಬಾರಗಡಿಗೆ ಗ್ರಾಮದ ಅಡ್ಕಮೊಟ್ಟೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಗುಂಡಿಗೆ ಇಳಿದಿದ್ದು, ಅದೃಷ್ಟವಶಾತ್ ವಿದ್ಯಾರ್ಥಿಗಳು ಸೇರಿದಂತೆ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ಬೆಳಿಗ್ಗೆ ಮಡಿಕೇರಿಯಿಂದ ೭.೪೫ಕ್ಕೆ ಹೊರಟು ಮಾದಾಪುರ, ಗರ್ವಾಲೆ, ಸೂರ್ಲಬ್ಬಿ, ಕುಂಬಾರಗಡಿಗೆ, ಹರಗ, ಶಾಂತಳ್ಳಿ ಮಾರ್ಗವಾಗಿ ಸೋಮವಾರಪೇಟೆಗೆ ಆಗಮಿಸುತ್ತಿದ್ದ ಬಸ್, ಕುಂಬಾರಗಡಿಗೆ ಬಳಿಯ ಅಡ್ಕಮೊಟ್ಟೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಗುಂಡಿಗೆ ನುಗ್ಗಿದೆ.
ಈ ಮಾರ್ಗಕ್ಕೆ ಇದೇ ಪ್ರಥಮ ಬಾರಿಗೆ ಬಸ್ ಚಾಲಿಸಿಕೊಂಡು ಬಂದ ಚಾಲಕನು, ತಿರುವಿನಲ್ಲಿ ನಿಯಂತ್ರಣ ತಪ್ಪಿದ್ದು, ಪರಿಣಾಮ ಬಸ್ ರಸ್ತೆ ಬದಿಯ ಗುಂಡಿಗೆ ಇಳಿದಿದೆ. ಅದೃಷ್ಟವಶಾತ್ ಮರಗಳು ತಡೆದಿದ್ದು, ತಪ್ಪಿದ್ದಲ್ಲಿ ಸುಮಾರು ೫೦ ಅಡಿ ಆಳದ ಪ್ರಪಾತಕ್ಕೆ ಬಸ್ ಬೀಳುವ ಸಾಧ್ಯತೆಯಿತ್ತೆಂದು ಪ್ರಯಾಣಿಕರು ತಿಳಿಸಿದ್ದಾರೆ.
ಬಸ್ ರಸ್ತೆಯ ಗುಂಡಿಗೆ ಇಳಿದು ವಾಪಸ್ ಬರಲಾರದ ಸ್ಥಿತಿಯಲ್ಲಿದ್ದು, ಬಸ್ನಲ್ಲಿದ್ದ ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ಖಾಸಗಿ ವಾಹನಗಳಲ್ಲಿ ತೆರಳಿದರು. ಈ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಸ್ನ ಸಮಯವನ್ನು ಬದಲಿಸಿ ಓಡಿಸಲಾಗುತ್ತಿತ್ತು. ಕಡಿದಾದ ಮತ್ತು ತಿರುವುಗಳಿಂದ ಕೂಡಿರುವ ಮಾರ್ಗವಾಗಿರುವುದರಿಂದ ತೀವ್ರ ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಬೇಕಿದೆ. ಇದರೊಂದಿಗೆ ಇದೇ ಪ್ರಥಮ ಬಾರಿಗೆ ಈ ಮಾರ್ಗದಲ್ಲಿ ಚಾಲಕ ಬಸ್ ಚಲಾಯಿಸುತ್ತಿದ್ದುದರಿಂದ ಅವಘಡ ಸಂಭವಿಸಿದೆ ಎಂದು ಸ್ಥಳೀಯರು ಅಭಿಪ್ರಾಯಿಸಿದ್ದಾರೆ.
ಈ ರಸ್ತೆಯು ನಿರ್ವಹಣೆಯ ಕೊರತೆ ಎದುರಿಸುತ್ತಿದ್ದು, ರಸ್ತೆಯ ಇಕ್ಕೆಲಗಳಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ಕಡಿಯದೇ ಹಾಗೆಯೇ ಬಿಟ್ಟಿರುವುದರಿಂದ ಎದುರಿನಿಂದ ಆಗಮಿಸುವ ವಾಹನಗಳು ಕಾಣುವುದಿಲ್ಲ. ಇದರೊಂದಿಗೆ ಮರಗಳನ್ನು ಕಡಿದು ರಸ್ತೆಯ ಬದಿಯಲ್ಲಿ ಹಾಕಿರುವುದರಿಂದ ಎದುರಿನ ವಾಹನಗಳಿಗೆ ಸ್ಥಳಾವಕಾಶ ನೀಡಲು ಕಷ್ಟಸಾಧ್ಯವಾಗಿದೆ. ತಿರುವುಗಳಲ್ಲಿ ಯಾವುದೇ ಎಚ್ಚರಿಕೆ/ಸೂಚನಾ ಫಲಕಗಳನ್ನೂ ಅಳವಡಿಸಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.