ಸಿದ್ದಾಪುರ, ಸೆ.೨೧ : ಕಾಡಾನೆ ದಾಳಿಗೆ ಕರಡಿಗೋಡಿನಲ್ಲಿ ಅಪಾರ ಪ್ರಮಾಣದ ಕೃಷಿ ಪಸಲು ನಾಶವಾಗಿವೆ. ಕರಡಿಗೋಡಿನ ಕುಕ್ಕನೂರು ಕುಸುಮಾವತಿ ಎಂಬವರ ತೋಟದೊಳಗೆ ನುಗ್ಗಿರುವ ಕಾಡಾನೆಗಳು ಅಡಿಕೆ ಮತ್ತು ಕಾಫಿ ಗಿಡಗಳನ್ನು ನಾಶಪಡಿಸಿವೆ. ಫಸಲಿಗೆ ಬಂದಿದ್ದ ಅಡಿಕೆ ಮರವನ್ನು ಸಂಪೂರ್ಣವಾಗಿ ಹಾನಿಗೊಳಿಸಿವೆ.
ಬುಧವಾರ ರಾತ್ರಿ ೭.೩೦ ಗಂಟೆಗೆ ಕರಡಿಗೋಡು ಸರಕಾರಿ ಶಾಲೆಯ ಸಮೀಪ ೨೦ ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ರಸ್ತೆ ಮೂಲಕ ಪಕ್ಕದ ಕಾಫಿ ತೋಟದೊಳಗೆ ಪ್ರವೇಶಿಸಿವೆ. ಈ ಸಂದರ್ಭ ಇದೇ ಮಾರ್ಗವಾಗಿ ಸಂಚರಿಸುತ್ತಿದ್ದ ವಾಹನ ಸವಾರರು ಕಾಡಾನೆಗಳ ಹಿಂಡನ್ನು ಕಂಡು ಭಯಭೀತರಾದರು. ಕುಕ್ಕನೂರು ಸೂರಜ್ ಎಂಬವರ ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆಗಳ ಹಿಂಡು ಕಾಫಿ ಗಿಡ, ಹಣ್ಣಿನ ಗಿಡ ಸೇರಿದಂತೆ ಅಪಾರ ಪ್ರಮಾಣದ ಕೃಷಿ ಫಸಲನ್ನು ನಾಶಗೊಳಿಸಿದೆ.
ಫಸಲು ಬಂದಿರುವ ಗಿಡಗಳನ್ನು ಹಾನಿ ಮಾಡುವುದಲ್ಲದೆ ಕಾಡಾನೆಗಳ ಭಯದಿಂದ ಕಾರ್ಮಿಕರು ಕೆಲಸಕ್ಕೂ ತೆರಳದ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಡಾನೆಗಳನ್ನು ಕಾಡಿಗೆ ಅಟ್ಟುವುದರ ಜತೆಗೆ ಪರಿಹಾರ ಒದಗಿಸುವಂತೆ ತೋಟದ ಮಾಲೀಕರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.