ಕುಶಾಲನಗರ, ಸೆ. ೨೨: ಕುಶಾಲನಗರ ಮುಳ್ಳುಸೋಗೆಯಿಂದ ೨೦೧೭ ರಲ್ಲಿ ನಾಪತ್ತೆಯಾಗಿದ್ದ ಬೇಕರಿ ಅಂಗಡಿ ಮಾಲೀಕನೊಬ್ಬ ಏಳು ವರ್ಷಗಳ ನಂತರ ಪತ್ತೆಯಾಗಿದ್ದಾನೆ.

೨೦೧೭ರಲ್ಲಿ ರಾತ್ರೋರಾತ್ರಿ ಕಣ್ಮರೆಯಾಗಿದ್ದ ಕುಶಾಲನಗರ ಸಮೀಪದ ಮುಳ್ಳುಸೋಗೆಯ ಬೇಕರಿ ಮಾಲೀಕ ಗಿರೀಶ (ಷಣ್ಮುಗಯ್ಯ - ೪೩) ಬಿಜಾಪುರದಲ್ಲಿ ಪತ್ತೆಯಾಗಿದ್ದಾನೆ.

ಕುಶಾಲನಗರ ಸಮೀಪದ ಮುಳ್ಳುಸೋಗೆ ಗ್ರಾಮದ ನಿವಾಸಿ, ಶಿವಕುಮಾರ್ ಎಂಬವರ ಮನೆಯಲ್ಲಿ ಬಾಡಿಗೆಗಿದ್ದ ಗಿರೀಶ ಲಕ್ಷಗಟ್ಟಲೆ ಸಾಲ ಮಾಡಿ ತನ್ನ ಪತ್ನಿ ಮಗುವನ್ನು ಬಿಟ್ಟು ನಾಪತ್ತೆಯಾಗಿದ್ದ.

ನಾಪತ್ತೆಯಾಗಿದ್ದ ವ್ಯಕ್ತಿ ೭ ವರ್ಷಗಳ ಬಳಿಕ ಪತ್ತೆ

(ಮೊದಲ ಪುಟದಿಂದ) ಕುಶಾಲನಗರದಿಂದ ಕಣ್ಮರೆಯಾದ ಗಿರೀಶ ಮನೆ ಮಾಲೀಕ ಶಿವಕುಮಾರ್ ಅವರಿಂದ ಮತ್ತು ಕುಶಾಲನಗರದ ಕೆಲವರಿಂದ ಲಕ್ಷಾಂತರ ರೂಗಳನ್ನು ಸಾಲರೂಪದಲ್ಲಿ ಪಡೆದಿದ್ದ ಎನ್ನಲಾಗಿದೆ.

ಈ ಬಗ್ಗೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪತಿ ಕಾಣೆಯಾಗಿರುವ ಬಗ್ಗೆ ಪತ್ನಿ ಪ್ರೀತಿ ದೂರು ಸಲ್ಲಿಸಿದ್ದರು.

ಹಲವು ದಿನಗಳ ಕಾಲ ಹುಡುಕಿ ಪತ್ತೆಯಾಗದೆ ನಂತರದ ದಿನಗಳಲ್ಲಿ ಗಿರೀಶ್ ಕೊಲೆಯಾಗಿದೆ ಎಂದು ವದಂತಿ ಕೂಡ ಹಬ್ಬಿತ್ತು.

ಈ ನಡುವೆ ಅನಾವಶ್ಯಕವಾಗಿ ಮನೆ ಮಾಲೀಕ ಶಿವಕುಮಾರ್ ಅವರ ಮೇಲೆ ಇಲ್ಲಸಲ್ಲದ ಆರೋಪ ಕೂಡ ಹೊರಿಸಿದ್ದರು. ಇದರಿಂದ ಶಿವಕುಮಾರ್ ಕುಟುಂಬದ ನಡುವೆ ಮನಸ್ತಾಪ ಉಂಟಾಗಲು ಕಾರಣವಾಗಿತ್ತು.

ಈ ನಡುವೆ ನೊಂದ ಶಿವಕುಮಾರ್ ನಾಪತ್ತೆಯಾದ ಗಿರೀಶನ ಸುಳಿವು ಪತ್ತೆ ಮಾಡುವಲ್ಲಿ ಕೊನೆಗೂ ಯಶಸ್ವಿಯಾಗಿ ಕುಶಾಲನಗರ ಪೊಲೀಸರಿಗೆ ಮಾಹಿತಿ ನೀಡಿದ ಮೇರೆಗೆ ಕುಶಾಲನಗರ ಡಿವೈಎಸ್ಪಿ ಗಂಗಾಧರಪ್ಪ, ಇನ್ಸ್ಪ್ಪೆಕ್ಟರ್ ರಾಜೇಶ್ ಮಾರ್ಗದರ್ಶನ ಮೇರೆಗೆ ಠಾಣಾಧಿಕಾರಿಗಳಾದ ಮೋಹನ್ ರಾಜ್ ಹಾಗೂ ಭಾರತಿ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳು ಬಿಜಾಪುರಕ್ಕೆ ಗಿರೀಶನ ಪತ್ನಿಯೊಂದಿಗೆ ತೆರಳಿ ನಾಪತ್ತೆಯಾಗಿದ್ದ ಗಿರೀಶನನ್ನು ಪತ್ತೆ ಹಚ್ಚಿ ಕುಶಾಲನಗರಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಹೆಚ್ಚಿನ ವಿಚಾರಣೆ ನಡೆಯುತ್ತಿದೆ. - ಸಿಂಚು