ಕೂಡಿಗೆ, ಸೆ. ೨೨: ಶ್ರೀಗಂಧ ಮರಗಳನ್ನು ಕಡಿದು ನಾಟಗಳಾಗಿ ಪರಿವರ್ತಿಸಿ ಸಾಗಾಟ ಮಾಡಲು ಪ್ರಯತ್ನಿಸುತ್ತಿದ್ದ ಸಂದರ್ಭ ಇಬ್ಬರು ಆರೋಪಿಗಳನ್ನು ಅರಣ್ಯ ಇಲಾಖೆ ಮಾಲುಸಹಿತ ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಶಿರಂಗಾಲ ಗ್ರಾಮದ ಬಿ.ಕೆ. ವಿಜಯ ಮತ್ತು ಎಸ್.ಪಿ.ಗಣೇಶ್ ಬಂಧಿತ ಆರೋಪಿಗಳು. ಮತ್ತೋರ್ವ ಆರೋಪಿ ರಾಘವ ಎಂಬಾತ ತಲೆಮರೆಸಿಕೊಂಡಿದ್ದಾನೆ. ಆತನ ಪತ್ತೆಗೆ ಇಲಾಖೆ ಬಲೆ ಬೀಸಿದೆ.

ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೇನುಕಲ್ಲು ಬೆಟ್ಟ ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿಯ ಚಿಕ್ಕ ನಾಯಕನ ಹೊಸಳ್ಳಿ ಎಂಬ ಗ್ರಾಮದಿಂದ ಶ್ರೀಗಂಧ ಮರವನ್ನು ಕಡಿದು ಸ್ಕೂಟರ್‌ನಲ್ಲಿ ಸಾಗಿಸಲು ಯತ್ನಿಸುತ್ತಿದ್ದ ಸಂದರ್ಭ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಆರೋಪಿಗಳನ್ನು ಬಂಧಿಸಿದೆ. ಈ ಸಂದರ್ಭ ಮತ್ತೋರ್ವ ಆರೋಪಿ ರಾಘವ ಸ್ಥಳದಿಂದ ಓಡಿ ತಲೆಮರೆಸಿಕೊಂಡಿದ್ದಾನೆ.

ಡಿ.ಎಫ್.ಓ. ಎ.ಟಿ.ಪೂವಯ್ಯ, ಎ.ಸಿ.ಎಫ್. ಗೋಪಾಲ್ ಮಾರ್ಗ ದರ್ಶನದಲ್ಲಿ ಸೋಮವಾರಪೇಟೆ ವಲಯ ಅರಣ್ಯಾಧಿಕಾರಿ ಎಚ್.ಪಿ.ಚೇತನ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಹೆಬ್ಬಾಲೆ ಉಪ ವಲಯ ಅರಣ್ಯಾಧಿಕಾರಿ ಎಂ.ಕೆ. ಭರತ್, ಅರಣ್ಯ ಪಾಲಕ ಎಚ್.ಎಸ್. ಲೋಕೇಶ್, ಅರಣ್ಯ ವೀಕ್ಷಕ ರಾಜಪ್ಪ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.