ಅನಿಲ್ ಎಚ್.ಟಿ.

ಮಡಿಕೇರಿ, ಸೆ. ೨೧: ಭಾರತದ ವೀರಸೇನಾನಿ ಜನರಲ್ ತಿಮ್ಮಯ್ಯ ಪ್ರತಿಮೆ ಸರಿಪಡಿಸುವ ಕಾರ್ಯ ಅಂತಿಮ ಹಂತ ತಲುಪಿದ್ದು, ೫೦ ವರ್ಷಗಳ ಹಿಂದೆ ಇದ್ದಂತೆಯೇ ಪ್ರತಿಮೆ ಮತ್ತೆ ಕಂಗೊಳಿಸಲಿದೆ. ದಸರಾ ಜನೋತ್ಸವಕ್ಕೆ ಮುನ್ನವೇ ಪ್ರತಿಮೆಯ ಮರುಸ್ಥಾಪನೆ ಆಗಲೇಬೇಕು ಎಂಬುದು ಜನತೆಯ ಆಗ್ರಹವಾಗಿದೆ.

ಕಳೆದ ತಿಂಗಳ ೨೧ ರಂದು ಸರ್ಕಾರಿ ಬಸ್ ಡಿಕ್ಕಿಯಾಗಿ ಹಾನಿಗೊಳಗಾದ ಮಡಿಕೇರಿ ಹೃದಯ ಭಾಗದಲ್ಲಿನ ಜನರಲ್ ತಿಮ್ಮಯ್ಯ ಪ್ರತಿಮೆಯನ್ನು ತರುವಾಯ ಮೈಸೂರಿಗೆ ಆಗಸ್ಟ್ ೨೯ ರಂದು ಕಳುಹಿಸಿ ಪರಿಣಿತ ಶಿಲ್ಪಿಗಳಿಂದ ದುರಸ್ತಿಗೊಳಪಡಿಸಲಾಗಿತ್ತು. ಮೈಸೂರಿನ ಖ್ಯಾತ ಶಿಲ್ಪತಜ್ಞ ಕಶ್ಯಪ್ ಶಿಲ್ಪ ನೇತೃತ್ವದಲ್ಲಿ ಪ್ರತಿಮೆ ದುರಸ್ತಿ ಕಾರ್ಯ ನಡೆದಿದ್ದು, ಇದೀಗ ಅಂತಿಮ ಹಂತ ತಲುಪಿದೆ. ಇನ್ನು ನಾಲ್ಕು ದಿನಗಳಲ್ಲಿಯೇ ಪ್ರತಿಮೆಯನ್ನು ರವಾನಿಸಲು ಸಿದ್ದರಿದ್ದೇವೆ ಎಂದು ಹೇಳಿರುವ ಶಿಲ್ಪಿ ಯಶವಂತ್, ದೇಶದ ಹೆಮ್ಮೆಯ ಸೇನಾನಿ ಜನರಲ್ ತಿಮ್ಮಯ್ಯ ಅವರ ಪ್ರತಿಮೆಯನ್ನು ಅತ್ಯಂತ ಶ್ರದ್ಧೆಯಿಂದ ದುರಸ್ತಿ ಗೊಳಿಸಿದ್ದೇವೆ. ಹಿತ್ತಾಳೆ ಪ್ರತಿಮೆಯ ಹಿಂಬದಿ ಬಸ್ ಡಿಕ್ಕಿಯಾಗಿ ತೂತು ಗಳಾಗಿದ್ದವು. ಲೋಪಕಾಣದಂತೆ ಅವುಗಳನ್ನು ಮುಚ್ಚಲಾಗಿದ್ದು, ಪ್ರತಿಮೆ ಹಾನಿ ಗೊಳಗಾದ ಯಾವುದೇ ಕುರುಹುಗಳು ಇಲ್ಲದಂತೆ ಮತ್ತೆ ಹೊಸ ರೀತಿಯಲ್ಲಿ ಕಂಗೊಳಿಸುವAತೆ ರೂಪಿಸಲಾಗಿದೆ. ಪ್ರತಿಮೆಯನ್ನು ಕಿಂಚಿತ್ತೂ ಲೋಪವಾಗದಂತೆ ದುರಸ್ತಿಪಡಿಸಿದ ಸಮಾಧಾನ ನಮಗಿದೆ ಎಂದರು.

ಜನರಲ್ ತಿಮ್ಮಯ್ಯ ಪ್ರತಿಮೆಯನ್ನು ಮುಂಬೈನಲ್ಲಿ ೫೦ ವರ್ಷಗಳ ಹಿಂದೆ ಅಂದಿನ ಮಡಿಕೇರಿ ಪುರಸಭೆಯ ಅಧ್ಯಕ್ಷ ಎಂ.ಸಿ.ನಾಣಯ್ಯ ಅವರ ಮುಂದಾಳತ್ವದಲ್ಲಿ ಮುಂಬೈನ ಹೆಸರಾಂತ ಶಿಲ್ಪಿ ವಾಗ್ ರೂಪಿಸಿದ್ದರು. ಪ್ರತಿಮೆಯ ಮೂಲ ವೆಚ್ಚವಾದ ರೂ. ೫೦ ಸಾವಿರ ಬದಲಾಗಿ ಇಂಥ ಅಪ್ರತಿಮ ಸೇನಾಧಿಕಾರಿಯ ಪ್ರತಿಮೆ ರೂಪಿಸಲು ಅವಕಾಶ ದೊರಕಿದ್ದು ಸೌಭಾಗ್ಯ ಎಂದು ತಿಳಿದು ಕಲಾಶಿಲ್ಪಿ ವಾಗ್ ಕೇವಲ ರೂ. ೩೦ ಸಾವಿರಕ್ಕೆ ಪ್ರತಿಮೆ ರೂಪಿಸಿದ್ದರು ಎಂದು ಎಂ.ಸಿ. ನಾಣಯ್ಯ ಸ್ಮರಿಸಿಕೊಂಡರು. ೫೦ ವರ್ಷಗಳ ಹಿಂದೆ ೬ ತಿಂಗಳಲ್ಲಿ ಶಿಲ್ಪಿ ವಾಗ್ ಅವರ ಕೈಚಳಕದಲ್ಲಿ ತಿಮ್ಮಯ್ಯ ಪ್ರತಿಮೆ ರೂಪುಗೊಂಡಿತ್ತು.

(ಮೊದಲ ಪುಟದಿಂದ) ಈಗಾಗಲೇ ಮಡಿಕೇರಿ ಕೊಡವ ಸಮಾಜವು ಪ್ರತಿಮೆ ಮರುಸ್ಥಾಪನೆಗೆ ಎಲ್ಲಾ ರೀತಿಯ ಸಿದ್ಧತೆ ಕೈಗೊಂಡಿದೆ. ಆದರೆ ನಗರಸಭೆಯ ವಿಳಂಬ ನೀತಿಯಿಂದ ನಿಗದಿತ ಸಮಯದಲ್ಲಿ ಪ್ರತಿಮೆ ಮರುಸ್ಥಾಪನೆ ತಡವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಕೊಡವ ಸಮಾಜದ ಅಧ್ಯಕ್ಷ ಎಂ.ಪಿ.ಮುತ್ತಪ್ಪ, ಅಕ್ಟೋಬರ್ ಮೊದಲ ವಾರದಲ್ಲಿ ದಸರಾಕ್ಕೆ ಮುನ್ನ ಮಡಿಕೇರಿಯಲ್ಲಿ ಮೊದಲು ಇದ್ದ ಜಾಗದಲ್ಲಿಯೇ ತಿಮ್ಮಯ್ಯ ಪ್ರತಿಮೆಯನ್ನು ಮರುಸ್ಥಾಪಿಸಲಿದ್ದೇವೆ ಎಂದರು.

ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಸಿ.ಸತೀಶ್ ಮತ್ತು ತಾನು ಮೈಸೂರಿಗೆ ತೆರಳಿ ಪ್ರತಿಮೆ ದುರಸ್ಥಿ ಕಾರ್ಯವನ್ನು ಪರಿಶೀಲಿಸಿದ್ದು ಉತ್ತಮ ರೀತಿಯಲ್ಲಿ ಶಿಲ್ಪಿಗಳು ಪ್ರತಿಮೆ ದುರಸ್ತಿಪಡಿಸಿದ್ದಾರೆ. ಹಬ್ಬದ ಸಂಭ್ರಮದAತೆ ಪ್ರತಿಮೆಯನ್ನು ಮರುಸ್ಥಾಪನೆ ಮಾಡಲು ಕೊಡವ ಸಮಾಜ ರೂಪುರೇಷೆ ಸಿದ್ಧಪಡಿಸಿದೆ. ಸೇನಾಧಿಕಾರಿಗಳು, ಮಾಜಿ ಸೇನಾನಿಗಳು, ಗಣ್ಯರನ್ನು ಆಹ್ವಾನಿಸಿ ತಿಮ್ಮಯ್ಯ ಪ್ರತಿಮೆಯ ೫೦ ವರ್ಷಗಳ ಸಂಭ್ರಮದೊAದಿಗೆ ಮರುಸ್ಥಾಪನೆ ಮಾಡುವ ಉದ್ದೇಶವಿದೆ. ಮೈಸೂರಿನಿಂದ ಪ್ರತಿಮೆಯನ್ನು ಬೈಕ್ ಜಾಥಾದ ಮೂಲಕ ಮಡಿಕೇರಿಗೆ ತರುವ ಯೋಜನೆಯೂ ಇದೆ ಎಂದು ಕೊಡವ ಸಮಾಜ ನಿರ್ದೇಶಕ ಮತ್ತು ನಗರಸಭೆಯ ಸದಸ್ಯ ಕೆ.ಎಸ್. ಅಪ್ಪಣ್ಣ ಮಾಹಿತಿ ನೀಡಿದರು.

ಪ್ರತಿಮೆಯ ವರ್ಣವಾದ ಕಪ್ಪು ಬಣ್ಣವನ್ನು ಮತ್ತಷ್ಟು ಮೆರುಗು ತರುವಂತೆ ಮಾಡಲಾಗಿದೆ. ಹೊಸ ಪ್ರತಿಮೆಯಂತೆ ಇದು ಕಂಗೊಳಿಸಲಿದೆ. ಹಾಗೆಂದು ಮೂಲ ಪ್ರತಿಮೆಗೆ ಯಾವುದೇ ರೀತಿಯಲ್ಲಿಯೂ ಲೋಪವಾಗದಂತೆ ಗಮನ ಹರಿಸಿದ್ದೇವೆ ಎಂದು ಕಲಾವಿದ ಯಶವಂತ್ ಹೇಳಿದರು.

ಈಗ ಆಗಬೇಕಾಗಿರುವುದು ಏನು?

ಮಡಿಕೇರಿಯ ಜಂಕ್ಷನ್ ಎಂದೇ ಪರಿಗಣಿತವಾದ ತಿಮ್ಮಯ್ಯ ವೃತ್ತದಲ್ಲಿ ಪ್ರತಿಮೆಯನ್ನು ಮರುಸ್ಥಾಪಿಸುವ ಮುನ್ನ ರಸ್ತೆಯ ವಿಭಜಕಗಳನ್ನು ಸರಿಯಾಗಿ ಮರು ರೂಪಿಸಬೇಕಾಗಿದೆ. ಈಗ ಈ ವೃತ್ತದಲ್ಲಿ ವಾಹನ ಸಂಚಾರ ತೀರ ಗೊಂದಲಮಯವಾಗಿದೆ. ಮಂಗಳೂರು ರಸ್ತೆ, ಮೂರ್ನಾಡು ರಸ್ತೆ, ಮೈಸೂರು ರಸ್ತೆ, ಮಡಿಕೇರಿ ನಗರ ಪ್ರವೇಶದ ರಸ್ತೆಗಳು ಈ ಜಂಕ್ಷನ್ ಮೂಲಕ ಸಾಗುವುದರಿಂದಾಗಿ ಸರಿಯಾದ ಮಾರ್ಗದರ್ಶನ ಇಲ್ಲದೇ ವಾಹನ ಚಾಲಕರು ಗೊಂದಲಕ್ಕೀಡಾಗಿದ್ದಾರೆ. ಪಾದಚಾರಿಗಳು ಕೂಡ ಗಡಿಬಿಡಿಯಲ್ಲಿಯೇ ರಸ್ತೆ ದಾಟಬೇಕಾಗಿದೆ. ಹೆದ್ದಾರಿ ಪ್ರಾಧಿಕಾರದ ಮಾರ್ಗದರ್ಶನದಲ್ಲಿ ಈ ಹೆದ್ದಾರಿಯನ್ನು ಮತ್ತೆ ಯಾವುದೇ ಗೊಂದಲಗಳಿಗೆ ಅವಕಾಶ ಇಲ್ಲದಂತೆ ಸಂಚಾರಿ ಪೊಲೀಸರ ಸಲಹೆಗಳ ಅನುಸಾರವಾಗಿ ಅಗತ್ಯವಿದ್ದಲ್ಲಿ ಮಾತ್ರ ವಿಭಜಕಗಳನ್ನು ಇರಿಸಿಕೊಂಡು ರಸ್ತೆಯನ್ನು ಮರು ರೂಪಿಸಬೇಕಾಗಿದೆ. ಒಮ್ಮೆ ಪ್ರತಿಮೆ ಮರುಸ್ಥಾಪನೆಯಾದಲ್ಲಿ ಮತ್ತೆ ರಸ್ತೆಯನ್ನು ಯಾವುದೇ ರೀತಿಯಲ್ಲಿಯೂ ಸರಿಪಡಿಸಲು ಕಷ್ಟಸಾಧ್ಯವಾಗಲಿದೆ.

ಮಡಿಕೇರಿ ಶಾಸಕರಾದ ಡಾ.ಮಂಥರ್ ಗೌಡ ಅವರು ಇಲ್ಲಿನ ವಿಭಜಕ ತೆರವುಗೊಳಿಸಿ ಸೂಕ್ತ ರಸ್ತೆ ನಿಯಮ ಪಾಲಿಸಿ ರಸ್ತೆಯನ್ನು ಮರುನಿರ್ಮಿಸುವಂತೆ ಸಲಹೆ ನೀಡಿದ್ದರು. ಆದಷ್ಟು ಬೇಗ ಈ ಕ್ರಮ ಜಾರಿಗೆ ಬರಬೇಕಾಗಿದೆ.

ಹಾನಿಗೊಳಗಾದ ಜನರಲ್ ತಿಮ್ಮಯ್ಯ ಪ್ರತಿಮೆ ಇದೇ ೨೫ ರೊಳಗಾಗಿ ದುರಸ್ತಿಗೊಳಪಟ್ಟು ಮೊದಲಿನಂತೆ ಕಂಗೊಳಿಸಲಿದೆ. ಈಗಿರುವ ಪ್ರಶ್ನೆ.. ಮುಂದಿನ ಕ್ರಮಗಳನ್ನು ವಿಳಂಬವಿಲ್ಲದAತೆ ಯಾರ ನೇತೃತ್ವದಲ್ಲಿ ಯಾರು ಹೇಗೆ ಕೈಗೊಳ್ಳುತ್ತಾರೆ ಎಂಬುದಾಗಿದೆ.