ಗೋಣಿಕೊಪ್ಪಲು, ಸೆ. ೨೧: ಏಕಾಏಕಿ ಕಾಡಾನೆಗಳು ಮುಖ್ಯ ರಸ್ತೆಗಿಳಿದ ಸಂದರ್ಭ ಅಮ್ಮ, ಮಗಳು ಕಾಡಾನೆಗಳ ಧಾಳಿಯಿಂದ ಪಾರಾದ ಘಟನೆ ಅಮ್ಮತ್ತಿ ಹೋಬಳಿಯ ಕಣ್ಣಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಚ್ಚಾಟ್ ಗ್ರಾಮದಲ್ಲಿ ನಡೆದಿದೆ. ಬುಧವಾರ ಸಂಜೆ ೫.೩೦ರ ಸುಮಾರಿಗೆ ಪಚ್ಚಾಟ್ ಗ್ರಾಮದ ಸವಿತಾ ಹಾಗೂ ಆಕೆಯ ಮಗಳು ವೇದಾ ತಮ್ಮ ಕಾರಿನಲ್ಲಿ ಕಣ್ಣಂಗಾಲ ಪಟ್ಟಣ ದಿಂದ ಮನೆಯತ್ತ ತೆರಳುತ್ತಿದ್ದರು.
ಮುಖ್ಯ ರಸ್ತೆಯಲ್ಲಿ ತೆರಳುತ್ತಿ ದ್ದಂತೆಯೇ ಕಾಫಿ ತೋಟದಲ್ಲಿದ್ದ ಒಂಟಿ ಆನೆ ಸೇರಿದಂತೆ ಮೂರು ಕಾಡಾನೆಗಳು ಒಮ್ಮೆಗೆ ರಸ್ತೆಗಿಳಿದು ಕಾರಿನತ್ತ ಹೆಜ್ಜೆ ಹಾಕಿದವು. ಇದರಿಂದ ಗಾಬರಿಗೊಂಡ ಕಾರು ಚಾಲಕಿ ಸವಿತ ಅವರಿಗೆ ಕಾರನ್ನು ಹಿಂದಕ್ಕೆ ಸರಿಸಲು ಸಾಧ್ಯವಾಗಲಿಲ್ಲ. ಇದನ್ನು ಗಮನಿಸಿದ ಮಗಳು ವೇದಾ ಕೂಡಲೇ ತಾಯಿಯನ್ನು ಬದಿಗೆ ಸರಿಸಿ ತಾನೇ ಕಾರನ್ನು ಹಿಂದಕ್ಕೆ ಚಲಾಯಿಸಿದಳು.
(ಮೊದಲ ಪುಟದಿಂದ) ಈ ವೇಳೆ ರಸ್ತೆಯಲ್ಲಿ ಬಂದAತಹ ಬೈಕ್ ಕಾಡಾನೆಯನ್ನು ಗಮನಿಸದೆ ಮುಂದೆ ನುಗ್ಗಿತ್ತು. ಬೈಕನ್ನು ಕಂಡ ಕಾಡಾನೆಯು ಕಾರನ್ನು ಬಿಟ್ಟು ಬೈಕ್ನತ್ತ ತೆರಳಿತು. ಈ ಸಂದರ್ಭ ಬೈಕ್ ಸವಾರ ತನ್ನ ಬೈಕನ್ನು ಬಿಟ್ಟು ಜೋರಾಗಿ ಕಿರುಚುತ್ತಾ ಸಮೀಪದ ತೋಟದ ಒಳಗೆ ಓಡಿ ತನ್ನ ಪ್ರಾಣ ಉಳಿಸಿಕೊಂಡಿದ್ದಾನೆ. ಬೈಕ್ ಸವಾರನ ಕೂಗಿಗೆ ಕಾಡಾನೆಯು ಗಾಬರಿಗೊಂಡು ತೋಟದೊಳಕ್ಕೆ ಸೇರಿಕೊಂಡಿದೆ. ಇದೆಲ್ಲವೂ ಕಾರಿನಲ್ಲಿದ್ದ ಸವಿತ ಹಾಗೂ ವೇದಾಳ ಎದುರೆ ನಡೆಯುತ್ತಿತ್ತಾದರೂ ಏನೂ ಮಾಡಲು ಸಾಧ್ಯವಾಗಲಿಲ್ಲ. ರಸ್ತೆ ಮಾರ್ಗದಲ್ಲಿ ಬರುತ್ತಿದ್ದ ವಾಹನಗಳನ್ನು ಮುಂದಕ್ಕೆ ಹೋಗದಂತೆ ಎಚ್ಚರಿಸಿದರು.
ಈ ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಸೂಚನೆಯಂತೆ ಕೆಪಿಸಿಸಿ ರಾಜ್ಯ ವಕ್ತಾರ ಸಂಕೇತ್ ಪೂವಯ್ಯ ಪಚ್ಚಾಟ್ನ ಪೊರ್ಕಂಡ ಬೋಪಣ್ಣ ಎಂಬವರ ಮನೆಗೆ ತೆರಳಿ ಅವರ ಪತ್ನಿ ಸವಿತಾ ಅವರಿಂದ ಘಟನೆಯ ಬಗ್ಗೆ ಮಾಹಿತಿ ಪಡೆದರು.
ಶಾಸಕರ ನಿರ್ದೇಶನದ ಮೇರೆ ಅರಣ್ಯ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿದರು. ಹಿರಿಯ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಶಾಸಕ ಪೊನ್ನಣ್ಣ ಮುಖ್ಯ ರಸ್ತೆಯಲ್ಲಿ ಆಗಿಂದಾಗ್ಗೆ ಜನರಿಗೆ ತೊಂದರೆ ನೀಡುತ್ತಿರುವ ಕಾಡಾನೆಗಳ ಮಾಹಿತಿ ಪಡೆದು ಅವುಗಳನ್ನು ಸೆರೆ ಹಿಡಿಯಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಅಲ್ಲದೆ ಸ್ಥಳದಲ್ಲಿದ್ದ ಅರಣ್ಯ ಸಿಬ್ಬಂದಿಗೆ ಕಾಡಾನೆ ಕಾಡಿಗಟ್ಟಲು ಮುಂದಾಗುವAತೆ ಸೂಚನೆ ನೀಡಿದರು. ಕಾಡಾನೆಗಳ ನಿರಂತರ ಉಪಟಳದಿಂದ ತೊಂದರೆ ಅನುಭವಿಸುತ್ತಿರುವ ಪಚ್ಚಾಟ್ನ ಸುತ್ತಮುತ್ತಲಿನ ಗ್ರಾಮಸ್ಥರಾದ ಮಚ್ಚಂಡ ಸುಬ್ಬಯ್ಯ, ಕಣ್ಣಂಗಾಲ ಗ್ರಾ.ಪಂ. ಸದಸ್ಯರಾದ ಕಲ್ಪೇಶ್, ಚಂಬಾAಡ ಚಂಗಪ್ಪ ಮಾತನಾಡಿ ಈ ಭಾಗದಲ್ಲಿ ನಿರಂತರ ಕಾಡಾನೆಗಳ ಉಪಟಳವಿದೆ. ಕಾಫಿ ತೋಟದಲ್ಲಿ ಕಾಡಾನೆಗಳು ನೆಲೆ ನಿಂತಿವೆ.
ಕಾಡಾನೆಗಳನ್ನು ವ್ಯವಸ್ಥಿತ ರೀತಿಯಲ್ಲಿ ಅರಣ್ಯಕ್ಕೆ ಅಟ್ಟುವ ಹಾಗೂ ತೊಂದರೆ ನೀಡುತ್ತಿರುವ ಕೆಲವು ಆನೆಗಳನ್ನು ಸ್ಥಳಾಂತರಿಸುವ ಬಗ್ಗೆ ಕ್ರಮಕೈಗೊಳ್ಳಬೇಕು. ಮುಖ್ಯ ರಸ್ತೆಯಲ್ಲಿಯೇ ಕಾಡಾನೆಗಳು ಕಾಣಿಸಿಕೊಳ್ಳುತ್ತಿವೆ. ಈ ಭಾಗದ ಜನತೆ ಸದಾ ಭಯದ ವಾತಾವರಣದಿಂದ ದಿನ ಕಳೆಯುತ್ತಿದ್ದಾರೆ. ತೋಟದ ಬೆಳೆಗಳು ಹಾಗೂ ಭತ್ತದ ಬೆಳೆಗಳು ಕಾಡಾನೆಗಳ ಹಾವಳಿಗೆ ಹಾಳಾಗುತ್ತಿವೆ. ಅರಣ್ಯ ಇಲಾಖೆ ನೀಡುವ ಪರಿಹಾರ ಏನೇನೂ ಸಾಲದು ಶಾಸಕರು ಈ ಬಗ್ಗೆ ಕ್ರಮ ವಹಿಸಬೇಕೆಂದು ಮನವಿ ಮಾಡಿದರು.
ಸ್ಥಳದಲ್ಲಿದ್ದ ಅರಣ್ಯ ಇಲಾಖೆಯ ಸಿಬ್ಬಂದಿ ಮಧ್ಯಾಹ್ನದ ನಂತರ ಕಾಡಾನೆಗಳ ಇರುವಿಕೆಯನ್ನು ಪತ್ತೆಹಚ್ಚಿ ಅವುಗಳನ್ನು ಕಾಡಿಗೆ ಅಟ್ಟುವ ಕೆಲಸವನ್ನು ಕೈಗೆತ್ತಿಕೊಳ್ಳುವ ಈ ಸಂದರ್ಭ ಕಾಂಗ್ರೆಸ್ ಮುಖಂಡರಾದ ಕೆ.ಎಸ್. ಗೋಪಾಲಕೃಷ್ಣ, ಅಮ್ಮತ್ತಿ ಒಂಟಿಯAಗಡಿಯ ಮಚ್ಚಾರಂಡ ಕಿರಣ್ ಸೇರಿದಂತೆ ಇನ್ನಿತರರು ಹಾಜರಿದ್ದರು.
ಈ ಭಾಗದ ರೈತರು ಬೆಳೆದಿರುವ ಭತ್ತದ ಗದ್ದೆಗೆ ದಾಳಿ ಮಾಡಿರುವ ಕಾಡಾನೆಗಳ ಹಿಂಡು ಬೆಳೆದು ನಿಂತಿದ್ದ ಭತ್ತದ ಬೆಳೆಗಳನ್ನು ಧ್ವಂಸಗೊಳಿಸಿದೆ. ಸಮೀಪದ ಕಾಫಿ ತೋಟಕ್ಕೆ ತೆರಳಿ ಫಸಲುಭರಿತ ಬಾಳೆ.ತೆಂಗು ಹಾಗೂ ಕಾಫಿ ಗಿಡಗಳನ್ನು ನಾಶಗೊಳಿಸಿ ಅಪಾರ ನಷ್ಟ ಉಂಟು ಮಾಡಿವೆ.
(ಹೆಚ್.ಕೆ.ಜಗದೀಶ್)