ನವದೆಹಲಿ, ಸೆ. ೨೧: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹೊರಡಿಸಿರುವ ಆದೇಶದಂತೆಯೇ ತಮಿಳುನಾಡಿಗೆ ಪ್ರತಿದಿನ ೫ ಸಾವಿರ ಕ್ಯೂಸೆಕ್, ಕಾವೇರಿ ನೀರು ಹರಿಸುವಂತೆ ರಾಜ್ಯಕ್ಕೆ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ನಿರ್ದೇಶನ ನೀಡಿದೆ.
ತಮಿಳುನಾಡಿಗೆ ಪ್ರತಿದಿನ ೫ ಸಾವಿರ ಕ್ಯೂಸೆಕ್, ನೀರು ಹರಿಸಬೇಕು ಎಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹೊರಡಿಸಿರುವ ಆದೇಶಕ್ಕೆ ತಡೆಯಾಜ್ಞೆ ನೀಡಬೇಕು ಎಂಬ ಕರ್ನಾಟಕ ರಾಜ್ಯದ ಮನವಿಯನ್ನು ಸುಪ್ರೀಂ ಕೋರ್ಟ್ ಮಾನ್ಯ ಮಾಡಲಿಲ್ಲ. ಜೊತೆಗೆ ಉಭಯ ರಾಜ್ಯಗಳ ರೈತರು ತಮ್ಮ ವಾದವನ್ನೂ ಆಲಿಸಲು ಕೋರಿದ್ದ ಅರ್ಜಿಯನ್ನು ಪುರಸ್ಕರಿಸಲೂ ಪೀಠ ನಿರಾಕರಿಸಿತು.
ಬಳಿಕ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹಾಗೂ ಕಾವೇರಿ ನೀರು ನಿಯಂತ್ರಣಾ ಸಮಿತಿ ಸಭೆಗಳನ್ನು ನಡೆಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಸೂಚಿಸಿತು. ಸುಪ್ರೀಂ ಕೋರ್ಟ್ನ ಈ ನಿರ್ದೇಶನದಂತೆ ಮುಂದಿನ ೧೫ ದಿನಗಳ ಕಾಲ ತಮಿಳುನಾಡಿಗೆ ನಿತ್ಯ ೫ ಸಾವಿರ ಕ್ಯೂಸೆಕ್ ನೀರನ್ನು ಕರ್ನಾಟಕ ಹರಿಸಬೇಕಿದೆ.
ತಾ. ೧೩ ರಿಂದ ಮುಂದಿನ ೧೫ ದಿನಗಳವರೆಗೆ ೫ ಸಾವಿರ ಕ್ಯೂಸೆಕ್ ತಮಿಳುನಾಡಿಗೆ ನೀರು ಹರಿಸಬೇಕು ಎಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶಿಸಿತ್ತು. ಇದಕ್ಕೆ ತಡೆ ನೀಡುವಂತೆ ರಾಜ್ಯ ಸುಪ್ರೀಂ ಕೋರ್ಟ್ನಲ್ಲಿ ಮನವಿ ಸಲ್ಲಿಸಿತ್ತು.
ಕಾವೇರಿ ಹಾಗೂ ಕೃಷ್ಣಾ ಕಣಿವೆಯಲ್ಲಿ ಭಾರಿ ನೀರಿನ ಕೊರತೆ ಕಾಣಿಸಿಕೊಂಡಿದ್ದು, ಹೀಗಾಗಿ ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್ಗೆ ಈಗಾಗಲೇ ಪ್ರಮಾಣಪತ್ರ ಸಲ್ಲಿಸಿತ್ತು.
ಕಾವೇರಿ ಜಲಾನಯನ ಪ್ರದೇಶದಲ್ಲಿ ಹೆಚ್ಚುತ್ತಿರುವ ಮತ್ತು ವಿಸ್ತರಿಸುತ್ತಿರುವ ಬರದ ತೀವ್ರತೆಯನ್ನು ಗಮನಿಸಿ, ಕುಡಿಯುವ ನೀರಿನ ಅವಶ್ಯಕತೆ ಮತ್ತು ನೀರಾವರಿಯ ಕನಿಷ್ಟ ಅಗತ್ಯತೆಗಳಿಗೆ ನೀರಿನ ಅವಶ್ಯಕತೆ ಇರುವ ಹಿನ್ನೆಲೆಯಲ್ಲಿ ಜಲಾಶಯಗಳಿಗೆ ಒಳಹರಿವು ಸುಧಾರಿಸದ ಹೊರತು ನೀರನ್ನು ಬಿಡುಗಡೆ ಮಾಡುವ ಸ್ಥಿತಿಯಲ್ಲಿಲ್ಲ ಎಂದು ಕರ್ನಾಟಕವು ಪ್ರಾಧಿಕಾರಕ್ಕೆ ತಿಳಿಸಿತ್ತು.
ಪ್ರತಿಯಾಗಿ ತಮಿಳುನಾಡು, ೬,೫೦೦ ಕ್ಯೂಸೆಕ್ ಬಾಕಿಯನ್ನು ಒಳಗೊಂಡAತೆ ಮುಂದಿನ ೧೫ ದಿನಗಳವರೆಗೆ ಒಟ್ಟು ೧೨,೫೦೦ ಕ್ಯೂಸೆಕ್ಸ್ ನೀರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿತ್ತು.
ಅಂತಿಮವಾಗಿ ಕಾವೇರಿ ನೀರು ನಿಯಂತ್ರಣ ಸಮಿತಿಯ ಶಿಫಾರಸನ್ನು ಎತ್ತಿ ಹಿಡಿದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ೧೫ ದಿನಗಳವರೆಗೆ ಪ್ರತಿದಿನ ೫ ಸಾವಿರ ಕ್ಯೂಸೆಕ್ ನೀರು ಹರಿಸಲು ಆದೇಶಿಸಿತ್ತು. ಇದೇ ಆದೇಶವನ್ನು ಸುಪ್ರೀಂ ಕೋರ್ಟ್ ಕೂಡ ಎತ್ತಿ ಹಿಡಿದಿದೆ.
ರಾಜ್ಯದಲ್ಲಿ ಆಕ್ರೋಶ
ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದ ಬೆನ್ನಲ್ಲೇ ರಾಜ್ಯದಲ್ಲಿ ಕನ್ನಡಪರ ಹೋರಾಟಗಾರರು ಬೀದಿಗಿಳಿದು ಹೋರಾಟಕ್ಕೆ ಮುಂದಾಗಿದ್ದು, ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಆದರೆ ಪೊಲೀಸರು ಅವರನ್ನು ಬಂಧಿಸುವ ಮೂಲಕ ಅವರ ಪ್ರಯತ್ನವನ್ನು ವಿಫಲಗೊಳಿಸಿದರು. ಏತನ್ಮಧ್ಯೆ, ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಅನುಸರಿಸದಂತೆ ಕರ್ನಾಟಕ ಸರ್ಕಾರವನ್ನು ಒತ್ತಾಯಿಸಿದ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣ ಗೌಡ ಅವರು ಪ್ರತಿಭಟನೆಯನ್ನು ತೀವ್ರಗೊಳಿಸು ವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ರಾಜ್ಯದ ಮಂಡ್ಯ, ಚಾಮರಾಜನಗರ ಸೇರಿದಂತೆ ಅನೇಕ ಕಡೆಗಳಲ್ಲಿ ಜನರು ಬೀದಿಗಿಳಿದು ಹೋರಾಟ ನಡೆಸಿದ್ದಾರೆ.
ಪ್ರತಿಪಕ್ಷಗಳ ಟೀಕೆ
ರಾಜ್ಯ ಸರ್ಕಾರ ಸಮರ್ಪಕ ವಾದ ಮಾಡದೆ ಇದ್ದುದರಿಂದ, ವಾಸ್ತವಿಕ ಸ್ಥಿತಿಯನ್ನು ಸಮರ್ಥವಾಗಿ ಮನದಟ್ಟು ಮಾಡಿಕೊಡಲು ವಿಫಲವಾಗಿದ್ದರಿಂದ ಕಾವೇರಿ ವಿಚಾರದಲ್ಲಿ ಸುಪ್ರೀಂಕೋರ್ಟ್ನಲ್ಲಿ ರಾಜ್ಯಕ್ಕೆ ಹಿನ್ನಡೆಯಾಯಿತು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಭಿಪ್ರಾಯ ಪಟ್ಟಿದ್ದಾರೆ.
ರಾಜ್ಯ ಸರ್ಕಾರ ನೇರ ಹೊಣೆ - ಹೆಚ್.ಡಿ.ಕೆ
ಸುಪ್ರೀಂ ಕೋರ್ಟ್ ಆದೇಶ ನಿಜಕ್ಕೂ ದುರದೃಷ್ಟಕರ. ಇದಕ್ಕೆಲ್ಲ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವೇ ನೇರ ಹೊಣೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಬರೆದಿರುವ ಕುಮಾರಸ್ವಾಮಿ, ನೀರಾವರಿ ಬಗ್ಗೆ ಕನಿಷ್ಟ ಜ್ಞಾನ, ತಿಳುವಳಿಕೆ ಇಲ್ಲದವರು ಅಧಿಕಾರದಲ್ಲಿದ್ದರೆ ಏನಾಗುತ್ತದೆ ಎನ್ನುವುದಕ್ಕೆ ಕಾವೇರಿ ಬಿಕ್ಕಟ್ಟು ಸ್ಪಷ್ಟ ಉದಾಹರಣೆ ಎಂದು ಹೇಳಿದ್ದಾರೆ.