ನವದೆಹಲಿ, ಸೆ. ೧೯: ಆಡಳಿತಾರೂಢ ಎನ್‌ಡಿಎ ಸಂಸತ್ತಿನಲ್ಲಿ ಮಹಿಳೆಯರಿಗೆ ಗಣನೀಯ ಪ್ರಮಾಣದ ಸ್ಥಾನಗಳನ್ನು ಮೀಸಲಿಡುವ ಮಹತ್ವದ ಮಸೂದೆಯನ್ನು ಮಂಡಿಸಿದೆ. ಇಂದು ನೂತನ ಸಂಸತ್ ಭವನದಲ್ಲಿ ಕಾನೂನು ಸಚಿವ ಅರ್ಜುನ್ ರಾಮ್ ಮೇಘ್ವಾಲ್ ಅವರು ಮಹಿಳೆಯರಿಗೆ ಶೇಕಡ ೩೩ರಷ್ಟು ಮೀಸಲಾತಿ ನೀಡುವ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಿದರು. ಹೊಸ ಸಂಸತ್ ಭವನದಲ್ಲಿ ನಡೆದ ಎರಡನೇ ದಿನದ ಸಂಸತ್ ವಿಶೇಷ ಅಧಿವೇಶನ ತಾ.೨೦ಕ್ಕೆ ಮುಂದೂಡಲ್ಪಟ್ಟಿದೆ.

ತಾ. ೨೦ ರಂದು (ಇಂದು) ಬೆಳಿಗ್ಗೆ ೧೧ ಗಂಟೆಗೆ ಸಂಸತ್ ವಿಶೇಷ ಅಧಿವೇಶನ ನಡೆಯಲಿದ್ದು, ನಿರೀಕ್ಷಿತ ಮಹಿಳಾ ಮೀಸಲಾತಿ ಮಸೂದೆಗೆ ನಾಳಿನ ಅಧಿವೇಶನದಲ್ಲಿ ಅಂಗೀಕಾರ ಸಿಗುವ ಸಾಧ್ಯತೆ ಇದೆ. ನಾರಿಶಕ್ತಿ ವಂದನಾ ಅಧಿನಿಯಮ ಎಂದು ಹೆಸರಿಡಲಾಗಿದೆ. ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಮುನ್ನಡೆಯುತ್ತಿದ್ದಾರೆ. ಆದ್ದರಿಂದ, ನೀತಿ ನಿರೂಪಣೆಯಲ್ಲಿ ನಮ್ಮ ತಾಯಂದಿರು, ಸಹೋದರಿಯರು ಮತ್ತು ಮಹಿಳೆಯರು ತಮ್ಮ ಗರಿಷ್ಠ ಕೊಡುಗೆಯನ್ನು ನೀಡುವುದು ಮತ್ತು ಪ್ರಮುಖ ಪಾತ್ರವನ್ನು ವಹಿಸುವುದು ಅತ್ಯಗತ್ಯ. ಈ ಕಾರಣಕ್ಕಾಗಿಯೇ ಈ ದಿನ ಅಮರವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸುತ್ತಿರುವುದು ಇದೇ ಮೊದಲಲ್ಲ. ೧೯೯೬ರಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇಕಡ ೩೩ರಷ್ಟು ಸ್ಥಾನಗಳನ್ನು ಮೀಸಲಿಡಲು ಸಂವಿಧಾನವನ್ನು ತಿದ್ದುಪಡಿ ಮಾಡಲು ಲೋಕಸಭೆಯಲ್ಲಿ ಪರಿಚಯಿಸಲಾಯಿತು.

ದೇವೇಗೌಡರ ನೇತೃತ್ವದ ಸಂಯುಕ್ತ ರಂಗ ಸರ್ಕಾರ ಈ ಮಸೂದೆಯನ್ನು ಮಂಡಿಸಿತ್ತು. ಮಸೂದೆಯು ಸಂವಿಧಾನದ ೩೩೦ ಮತ್ತು ೩೩೨ನೇ ವಿಧಿಗಳಿಗೆ ತಿದ್ದುಪಡಿ ತರಲು ಪ್ರಸ್ತಾಪಿಸಿತ್ತು. ಲೋಕಸಭೆಯ ೫೪೩ ಸ್ಥಾನಗಳಲ್ಲಿ ೧೮೧ ಮತ್ತು ರಾಜ್ಯ ವಿಧಾನಸಭೆಗಳ ೪,೧೦೯ ಸ್ಥಾನಗಳಲ್ಲಿ ೧,೩೭೦ ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲು ಅದು ಪ್ರಯತ್ನಿಸಿತ್ತು. ಹಂಚಿಕೆಯಾದ ಸ್ಥಾನಗಳನ್ನು ಸರದಿಯ ಮೂಲಕ ನಿರ್ಧರಿಸಲಾಗುತ್ತದೆ.