ಸೋಮವಾರಪೇಟೆ, ಸೆ. ೧೯: ‘ಭೀಕರ ಬರಗಾಲದ ಸಂದರ್ಭ ಸಾಕ್ಷಾತ್ ಜಲದೇವತೆಯಾಗಿ ಬೃಹತ್ ಕೆರೆಗೆ ಹಾರವಾದರು’ ಎಂಬ ದೈವಿಕ ಇತಿಹಾಸ ಹೊಂದಿರುವ ತಾಲೂಕಿನ ದೊಡ್ಡಮಳ್ತೆ ಗ್ರಾಮದ ಹೊನ್ನಮ್ಮನ ಕೆರೆಗೆ ಗೌರಿ ಹಬ್ಬದ ದಿನದಂದು ನೂರಾರು ಮಂದಿ ಭಕ್ತಾದಿಗಳು, ನವ ವಿವಾಹಿತ ದಂಪತಿಗಳು ಶ್ರದ್ಧಾಭಕ್ತಿಯಿಂದ ಬಾಗಿನ ಅರ್ಪಿಸಿದರು.

ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಇತಿಹಾಸ ಪ್ರಸಿದ್ಧ, ಎಂದೂ ಬತ್ತದ ಹೊನ್ನಮ್ಮನ ಕೆರೆಗೆ ಬಾಗಿನ ಅರ್ಪಿಸುವ ಕಾರ್ಯಕ್ರಮ ದೇವಾಲಯ ಸಮಿತಿ ಪದಾಧಿಕಾರಿಗಳ ಉಸ್ತುವಾರಿಯಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು.

ವರ್ಷಂಪ್ರತಿ ಗೌರಿ ಹಬ್ಬದ ದಿನದಂದು

(ಮೊದಲ ಪುಟದಿಂದ) ನೂರಾರು ನವ ದಂಪತಿಗಳು ಹಾಗೂ ಭಕ್ತಾದಿಗಳು ಆಗಮಿಸಿ ಹೊನ್ನಮ್ಮನ ಕೆರೆಗೆ ಬಾಗಿನ ಅರ್ಪಿಸಿ ಸರ್ವಮಂಗಳಕ್ಕಾಗಿ ಪ್ರಾರ್ಥಿ ಸುವದು ಹಿಂದಿನಿAದಲೂ ನಡೆದು ಕೊಂಡು ಬಂದ ಪದ್ದತಿ. ಅಂತೆಯೇ ಸಮಿತಿ ವತಿಯಿಂದ ಜಾತ್ರೋತ್ಸವ ಆಯೋಜಿಸಿ, ಸಹಸ್ರಾರು ಭಕ್ತಾದಿಗಳಿಗೆ ಅನ್ನದಾನ ಏರ್ಪಡಿಸುವ ಮೂಲಕ ಸಂಭ್ರಮದ ಹಬ್ಬವನ್ನು ಆಚರಿಸಲಾ ಯಿತು. ಸ್ವರ್ಣಗೌರಿ ಹಬ್ಬದ ದಿನದ ಇಂದು ಬೆಳಿಗ್ಗೆ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಕ್ಷೇತ್ರದಲ್ಲಿರುವ ಶ್ರೀ ಹೊನ್ನಮ್ಮ ತಾಯಿ, ಬಸವೇಶ್ವರ ಗುಡಿಯಿರುವ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಬಾಗಿನ(ಮೊರದಲ್ಲಿ ಅರಸಿಣ, ಕುಂಕುಮ, ಬಿಚ್ಚೋಲೆ, ರವಿಕೆ ಕಣ, ಕನ್ನಡಿ, ಬಳೆ, ಹೂವು, ಫಲತಾಂಬೂಲ) ವನ್ನು ದೇವಾಲಯದ ಪಕ್ಕದಲ್ಲಿರುವ ಬಂಗಾರದ ಕಲ್ಲಿನ ಕಟ್ಟೆಯ ಮೇಲಿಟ್ಟು ಪೂಜೆ ಸಲ್ಲಿಸಿ, ಗ್ರಾಮದ ಪಟೇಲರ ಮನೆಯವರು ಹಾಗೂ ಬಸವೇಶ್ವರ-ಸ್ವರ್ಣಗೌರಿ ಹೊನ್ನಮ್ಮ ಸಮಿತಿಯ ಪದಾಧಿಕಾರಿಗಳು ಕೆರೆಗೆ ಅರ್ಪಿಸಿದರು.

ಇದಾದ ನಂತರ ಸಾರ್ವಜನಿಕ ಭಕ್ತಾದಿಗಳಿಗೆ ಬಾಗಿನ ಅರ್ಪಿಸಲು ಅವಕಾಶ ಕಲ್ಪಿಸಲಾಯಿತು. ಕೊಡಗು ಮಾತ್ರವಲ್ಲದೇ ಸುತ್ತಮುತ್ತಲ ಜಿಲ್ಲೆಗ ಳಿಂದಲೂ ಭಕ್ತಾದಿಗಳು ಆಗಮಿಸಿದ್ದರು. ನವ ವಿವಾಹಿತ ದಂಪತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಹೊನ್ನಮ್ಮ ದೇವಿಗೆ ಪೂಜೆ ಸಲ್ಲಿಸಿ ಕೆರೆಗೆ ಬಾಗಿನ ಅರ್ಪಿಸಿದರು. ಮಾಜಿ ಶಾಸಕ ಎಂ.ಪಿ. ಅಪ್ಪಚ್ಚುರಂಜನ್, ಅರಕಲಗೂಡು ಶಾಸಕ ಎ. ಮಂಜು, ಕೊಡ್ಲಿಪೇಟೆ ವಿದ್ಯಾಸಂಸ್ಥೆ ಮುಖ್ಯಸ್ಥ, ಕಾಂಗ್ರೆಸ್ ಮುಖಂಡ ಹೆಚ್.ಎಸ್. ಚಂದ್ರಮೌಳಿ, ಬಿಜೆಪಿ ಮುಖಂಡ ಬಿ.ಬಿ. ಭಾರತೀಶ್ ಅವರುಗಳು ಕೆರೆಗೆ ಬಾಗಿನ ಅರ್ಪಿಸಿ, ಪೂಜೆ ಸಲ್ಲಿಸಿದರು.

ಈ ಸಂದರ್ಭ ಶ್ರೀ ಸಿದ್ದೇಶ್ವರ, ಬಸವೇಶ್ವರ-ಸ್ವರ್ಣಗೌರಿ ಹೊನ್ನಮ್ಮ ದೇವಾಲಯ ಸಮಿತಿಯ ಅಧ್ಯಕ್ಷ ಡಿ.ಬಿ. ವೀರೇಶ್, ಗೌರವಾಧ್ಯಕ್ಷ ಎಂ.ಬಿ. ವಸಂತಕುಮಾರ, ಉಪಾಧ್ಯಕ್ಷ ಡಿ.ಎಂ. ಪ್ರಸನ್ನ, ಕಾರ್ಯದರ್ಶಿ ಎಂ.ಜೆ. ಕಿರಣ್‌ಕುಮಾರ್ ಹಾಗೂ ಸದಸ್ಯ ಸತೀಶ್, ಡಿ.ಬಿ. ಯೋಗೇಶ್, ದೇವಾಲಯದ ಅರ್ಚಕ ಈರಯ್ಯ ಹಿರೇಮಠ್ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ನಡೆದವು.

ಪ್ರಸಕ್ತ ವರ್ಷ ನಡೆಸಿದ ಅಷ್ಟಮಂಗಲದ ಪ್ರಕಾರ ಹೊನ್ನಮ್ಮ ತಾಯಿಯ ತವರುಮನೆ ಎಂದೇ ಹೇಳಲಾಗಿರುವ ದೊಡ್ಡಹಣಕೋಡು ಗ್ರಾಮದಿಂದ ಮತ್ತು ಇದಕ್ಕೆ ಸಂಬAಧಪಟ್ಟಿರುವ ಹಿರಿಕರ ಗ್ರಾಮದಿಂದಲೂ ಪ್ರತ್ಯೇಕವಾಗಿ ಬಾಗಿನ ಅರ್ಪಿಸಬೇಕೆಂಬ ಸೂಚನೆಯನ್ವಯ, ಈ ಬಾರಿ ಎರಡೂ ಗ್ರಾಮಗಳ ವತಿಯಿಂದ ಹೊನ್ನಮ್ಮತಾಯಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಕೆರೆಗೆ ಬಾಗಿನ ಅರ್ಪಿಸಲಾಯಿತು. ದೊಡ್ಡಹಣಕೋಡು ಗ್ರಾಮಾಧ್ಯಕ್ಷ ಚಂದ್ರಪ್ಪ, ಸೇರಿದಂತೆ ಎರಡೂ ಊರಿನ ಪ್ರಮುಖರು ಹಾಜರಿದ್ದು, ಬಾಗಿನ ಅರ್ಪಿಸಿದರು.

ಈ ಹಿಂದೆ ತೀವ್ರ ಬರಗಾಲ ಎದುರಾದ ಸಂದರ್ಭ ಊರಿನ ಪ್ರಮುಖರು ಗ್ರಾಮದ ೧೬ ಎಕರೆ ಪ್ರದೇಶದಲ್ಲಿ ದೊಡ್ಡಕೆರೆಯೊಂದನ್ನು ನಿರ್ಮಿಸಲು ಮುಂದಾದರು. ನೂರಾರು ಮಂದಿ ಕೆರೆ ನಿರ್ಮಿಸುವ ಕಾರ್ಯದಲ್ಲಿ ಮಗ್ನರಾದರು. ಆದರೆ ಎಷ್ಟೇ ಆಳ ತೆಗೆದರೂ ಕೆರೆಯಲ್ಲಿ ಒಂದು ಹನಿ ನೀರೂ ಬರಲಿಲ್ಲ. ಅಂತಹ ಸನ್ನಿವೇಶದಲ್ಲಿ ಹೊನ್ನಿನ ಗುಣ ಹೊಂದಿದ್ದ ಹೊನ್ನಮ್ಮ ತಾನೇ ಕೆರೆಗೆ ಹಾರವಾದಳು. ಅಂದು ತುಂಬಿದ ಕೆರೆ ಇಂದಿಗೂ ಬತ್ತಿಲ್ಲ ಎಂಬ ಪ್ರತೀತಿ ಈ ಕ್ಷೇತ್ರವ್ಯಾಪ್ತಿಯಲ್ಲಿದ್ದು, ಬಸವೇಶ್ವರ ದೇವಾಲಯದ ಪಕ್ಕದಲ್ಲಿಯೇ ಹೊನ್ನಮ್ಮ ತಾಯಿಗೆ ದೇವಾಲಯ ನಿರ್ಮಿಸ ಲಾಗಿದೆ. ಪ್ರತಿ ಗೌರಿ ಹಬ್ಬದ ದಿನದಂದು ವಿಶೇಷ ಪೂಜೆ ಸಲ್ಲಿಸಿ, ಕೆರೆಗೆ ಬಾಗಿನ ಅರ್ಪಿಸುವ ಕಾರ್ಯ ಅನೂಚಾನವಾಗಿ ನಡೆದುಕೊಂಡು ಬಂದಿದೆ.

ಅಂದು ತುಂಬಿದ ಕೆರೆ ಇಂದಿನವರೆಗೂ ಬತ್ತದೇ ಇರುವದು ದೈವೇಚ್ಛೆ ಎಂಬ ನಂಬಿಕೆ ಎಲ್ಲರಲ್ಲಿದ್ದು, ಹೊನ್ನಮ್ಮನ ಕೆರೆಯನ್ನು ಇಂದಿಗೂ ವಿಶೇಷ ಭಕ್ತಿಭಾವದಿಂದ ಪೂಜಿಸ ಲಾಗುತ್ತದೆ. ಇದರೊಂದಿಗೆ ಈ ವ್ಯಾಪ್ತಿಯ ನೂರಾರು ಎಕರೆ ಪ್ರದೇಶದ ಕೃಷಿ ಕಾರ್ಯಕ್ಕೂ ಹೊನ್ನಮ್ಮನ ಕೆರೆ ಮೂಲಾಧಾರವಾಗಿದ್ದು, ಕೃಷಿಕ ವರ್ಗದ ಜೀವನಾಧಾರವಾಗಿದೆ. - ವಿಜಯ್ ಹಾನಗಲ್