ಮಡಿಕೇರಿ, ಸೆ. ೨೦: ಪೊನ್ನಂಪೇಟೆ ತಾಲೂಕನ್ನು ಬರಪೀಡಿತ ಪ್ರದೇಶ ಪಟ್ಟಿಯಿಂದ ಕೈಬಿಟ್ಟಿರುವ ಕ್ರಮವನ್ನು ಸಾರ್ವಜನಿಕ ಹಿತರಕ್ಷಣಾ ವೇದಿಕೆ ಖಂಡಿಸಿದ್ದು, ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಬೇಕೆಂದು ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಂದಾಯ ಸಚಿವ ಕೃಷ್ಣೇಬೈರೇಗೌಡ ಅವರಿಗೆ ಪತ್ರ ಬರೆದು ಗಮನ ಸೆಳೆದಿದೆ.

ವೇದಿಕೆಯ ಜಿಲ್ಲಾಧ್ಯಕ್ಷ ಅಜ್ಜಮಾಡ ಕಟ್ಟಿ ಮಂದಯ್ಯ ಈ ಬಗ್ಗೆ ಪತ್ರ ಬರೆದಿದ್ದು, ಜಿಲ್ಲೆಯ ಮೂರು ತಾಲೂಕುಗಳನ್ನು ಬರಪೀಡಿತ ಪ್ರದೇಶ ಪಟ್ಟಿಯಲ್ಲಿ ಸೇರಿಸಲಾಗಿದೆ. ಆದರೆ, ಪೊನ್ನಂಪೇಟೆ ತಾಲೂಕನ್ನು ಪಟ್ಟಿಯಿಂದ ಕೈಬಿಡಲಾಗಿದೆ. ತಾಲೂಕಿನಲ್ಲಿ ಬರದಿಂದ ಕೃಷಿಕರು ಸಂಕಷ್ಟ ಎದುರಿಸುತ್ತಿದ್ದು, ಬೆಳೆ ನಾಶದಿಂದ ತೊಂದರೆಗೀಡಾಗಿದ್ದಾರೆ. ಅಧಿಕಾರಿ ಅಸಮರ್ಪಕತೆಯಿಂದ ಪಟ್ಟಿಯಿಂದ ತಾಲೂಕು ಹೊರಬಿದ್ದಿದೆ ಎಂದು ಆರೋಪಿಸಿರುವ ಅವರು, ಮರುಸಮೀಕ್ಷೆ ನಡೆಸಿ ಪಟ್ಟಿಗೆ ಸೇರಿಸಬೇಕೆಂದು ಪತ್ರದ ಮೂಲಕ ಆಗ್ರಹಿಸಿದ್ದಾರೆ.