ಮಡಿಕೇರಿ, ಸೆ. ೬: ಕೊಡಗು ಜಿಲ್ಲಾ ಕೇಂದ್ರವಾಗಿರುವ ಮಡಿಕೇರಿ ಹೆಸರಿನಲ್ಲಿಯೇ ಇದೀಗ ಕನ್ನಡ ಸಿನಿಮಾ ತಯಾರಾಗುತ್ತಿದೆ. ದಕ್ಷಿಣ ಭಾರತದ ಹೆಸರಾಂತ ತಾರೆ ಸುಹಾಸಿನಿ ಮಡಿಕೇರಿ ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಮಂಜು ಕರಗಿದ ಮೇಲೆ ಎಂಬ ಉಪಶೀರ್ಷಿಕೆ ಈ ಚಿತ್ರಕ್ಕಿದೆ.

ಕಾಲ್ಗೆಜ್ಜೆ ಎಂಬ ಕನ್ನಡ ಚಿತ್ರ ನಿರ್ದೇಶಿಸಿ ರಾಜ್ಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದ ಎ.ಬಂಗಾರು ಇದೀಗ ಮಡಿಕೇರಿ ಹೆಸರಿನ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಪ್ರಥ್ವಿ ಅಂಬಾರ್ ನಾಯಕನಾಗಿರುವ ಮಡಿಕೇರಿ ಚಿತ್ರಕ್ಕೆ ನಾಯಕಿಯಾಗಿ ಶಾಲಿನಿ ಭಟ್ ಆಯ್ಕೆಯಾಗಿದ್ದಾರೆ. ಮಡಿಕೇರಿ ಹೆಸರಿನ ಚಿತ್ರ ಮೂರು ಕುಟುಂಬಗಳ ಕಥೆ ಹೇಳಲಿದ್ದು, ಗಂಧರ್ವ ಅವರ ಸಂಗೀತ ಮಡಿಕೇರಿ ಚಿತ್ರಕ್ಕಿದೆ ಎಂದು ಬಂಗಾರು ಹೇಳಿದ್ದಾರೆ.

ನವಂಬರ್ ನಿಂದ ಮಡಿಕೇರಿಯಲ್ಲಿ ಚಿತ್ರೀಕರಣ ನಡೆಯಲಿದ್ದು, ಮುಂದಿನ ಮಾರ್ಚ್ನಲ್ಲಿ ಮಡಿಕೇರಿ ತೆರೆಮೇಲೆ ಕಾಣಿಸಿಕೊಳ್ಳಲಿದೆ. ಈಗಾಗಲೇ ಮಡಿಕೇರಿ ಸಿನಿಮಾದ ಶೀರ್ಷಿಕೆಯನ್ನು ಖ್ಯಾತ ನಿರ್ದೇಶಕ ಎಸ್.ಮಹೇಂದರ್ ಅನಾವರಣ ಮಾಡಿದ್ದಾರೆ. ೧೨ ವರ್ಷಗಳಿಂದ ನೋಂದಣಿ ಮಾಡಿಕೊಂಡಿದ್ದ ಮಡಿಕೇರಿ ಹೆಸರಿನ ಶೀರ್ಷಿಕೆ ಇದೀಗ ಸಿನಿಮಾವಾಗಿ ತೆರೆ ಮೇಲೆ ಬರಲು ಸಿದ್ದಗೊಳ್ಳುತ್ತಿರುವುದು ತೃಪ್ತಿ ತಂದಿದೆ ಎಂದು ಬಂಗಾರು ಹೇಳಿದರು.

ಕೊಡಗಿನಲ್ಲಿ ಚಿತ್ರೀಕರಣವಾಗಿದ್ದ ಸುಹಾಸಿನಿ ಮತ್ತು ವಿಷ್ಣುವರ್ಧನ್ ಅಭಿನಯದ ಬಂಧನ ಚಿತ್ರ ೧೯೮೦ ರ ದಶಕದಲ್ಲಿ ಸೂಪರ್ ಹಿಟ್ ಚಿತ್ರವಾಗಿತ್ತು. ಈ ಚಿತ್ರದಲ್ಲಿ ಕೊಡಗು ಮೂಲದ ಜೈಜಗದೀಶ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಸುಹಾಸಿನಿಗೆ ಹೆಸರು ತಂದ ಬಂಧನ ಚಿತ್ರ ಕೊಡಗು ಜಿಲ್ಲೆಯಲ್ಲಿಯೇ ಬಹುತೇಕ ಚಿತ್ರೀಕರಣವಾಗಿತ್ತು. ಅಂತೆಯೇ ಸುಹಾಸಿನಿ ಮತ್ತು ವಿಷ್ಣುವರ್ಧನ್ ನಟಿಸಿದ್ದ ಸೈನಿಕನ ಕಥೆಯುಳ್ಳ ಮುತ್ತಿನ ಹಾರ ಚಿತ್ರದ ಮಡಿಕೇರಿ ಸಿಪಾಯಿ ಮುತ್ತ್ ತಾತ್ ಮರೆಲ್ ಎಂಬ ಹಾಡು ಇಂದಿಗೂ ಜನಪ್ರಿಯವಾಗಿದೆ. ಮಡಿಕೇರಿ ಹೆಸರನ್ನು ಜನಪ್ರಿಯಗೊಳಿಸಿದ್ದ ಈ ಚಿತ್ರದಲ್ಲಿಯೂ ಸುಹಾಸಿನಿ ನಾಯಕಿಯಾಗಿದ್ದರು ಎಂಬುದು ವಿಶೇಷ. ಹಾಗೆಯೇ, ಸುಹಾಸಿನಿ ಮತ್ತು ಅನಂತನಾಗ್ ಜೋಡಿ ಇದ್ದ ಹೊಸನೀರು ಚಲನಚಿತ್ರ ಕೂಡ ಹಾರಂಗಿ ವ್ಯಾಪ್ತಿಯಲ್ಲಿ ಚಿತ್ರೀಕರಣಗೊಂಡಿತ್ತು. ಅಲ್ಲದೇ ಸುಹಾಸಿನಿ ಅವರ ಪತಿ ಹೆಸರಾಂತ ನಿರ್ದೇಶಕ ಮಣಿರತ್ನಂ ನಿರ್ದೇಶನದ ಮೊದಲ ಕನ್ನಡ ಚಿತ್ರ ಪಲ್ಲವಿ ಅನುಪಲ್ಲವಿ ಕೂಡ ಮಡಿಕೇರಿಯಲ್ಲಿ ಚಿತ್ರೀಕರಣಗೊಂಡಿತ್ತು.!

ಮಡಿಕೇರಿ ಹೆಸರಿನಲ್ಲಿ ಸಿನಿಮಾ ತಯಾರಾಗುತ್ತಿರುವುದು ಹೆಮ್ಮೆಯ ವಿಚಾರವಾದರೂ ಸಿನಿಮಾ ಹೆಸರನ್ನು ಹೊಂದುವAತಾದ ಮಡಿಕೇರಿ ನಗರದಲ್ಲಿಯೇ ಸಿನಿಮಾ ಪ್ರದರ್ಶನಕ್ಕೆ ಚಿತ್ರಮಂದಿರವೇ ಇಲ್ಲ ಎಂಬುದು ವಿಪರ್ಯಾಸ. ಜಿಲ್ಲಾ ಕೇಂದ್ರದಲ್ಲಿ ಸಿನಿಮಾ ಮಂದಿರ ಇಲ್ಲದಿರುವ ಕರ್ನಾಟಕದ ಏಕೈಕ ಜಿಲ್ಲೆಯಾಗಿಯೂ ಕೊಡಗು ಗುರುತಿಸಲ್ಪಟ್ಟಿದೆ.

- ಅನಿಲ್ ಎಚ್.ಟಿ.