ಗೋಣಿಕೊಪ್ಪಲು, ಸೆ. ೯: ದ.ಕೊಡಗಿನ ಜನತೆಯ ಹಲವು ದಶಕಗಳ ಬಹು ಬೇಡಿಕೆಯಾಗಿದ್ದ ಪದವಿ ಕಾಲೇಜು ಆರಂಭಕ್ಕೆ ಇದೀಗ ಕಾಲ ಕೂಡಿ ಬಂದಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಪದವಿ ಶಿಕ್ಷಣ ಪಡೆಯಲು ಈ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ಪದವಿ ಕಾಲೇಜು ಪ್ರಾರಂಭಿಸಲು ನಿರ್ಧಾರ ಕೈಗೊಂಡಿದೆ.
ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಶಾಸಕರಾಗಿ ಆಯ್ಕೆ ಆದ ನಂತರ ಕರ್ನಾಟಕ ರಾಜ್ಯದ ಶಿಕ್ಷಣ ಸಚಿವರಿಗೆ ಪೊನ್ನಂಪೇಟೆ ತಾಲೂಕು ಕೇಂದ್ರದಲ್ಲಿ ಪದವಿ ಶಿಕ್ಷಣ ನೀಡಲು ಕಾಲೇಜು ಆರಂಭಿಸುವAತೆ ಸಚಿವರ ಗಮನ ಸೆಳೆದಿದ್ದರು. ಈ ಹಿನ್ನೆಲೆಯಲ್ಲಿ ಮಂಗಳೂರಿನ ಕಾಲೇಜು ಶಿಕ್ಷಣ ಜಂಟಿ ನಿರ್ದೇಶಕ ರಾಮೇಗೌಡ ಹಾಗೂ ಇನ್ನಿತರ ಅಧಿಕಾರಿಗಳು ತಾಲೂಕು ಕೇಂದ್ರ ಪೊನ್ನಂಪೇಟೆಗೆ ಆಗಮಿಸಿ ಕಾಲೇಜು ಪ್ರಾರಂಭಿಸುವ ವಿಚಾರದಲ್ಲಿ ಶಾಸಕ ಪೊನ್ನಣ್ಣನವರೊಂದಿಗೆ ಸುದೀರ್ಘ ಚರ್ಚೆ ನಡೆಸಿದರು.
ಪ್ರಸ್ತುತ ಪೊನ್ನಂಪೇಟೆಯಲ್ಲಿರುವ ಪದವಿ ಪೂರ್ವ ಕಾಲೇಜು ಆವರಣದಲ್ಲಿ ತಾತ್ಕಾಲಿಕವಾಗಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಪದವಿ ಕಾಲೇಜು ಆರಂಭಿಸುವAತೆ ಮಂಗಳೂರಿನಿAದ ಆಗಮಿಸಿದ್ದ ಕಾಲೇಜು ಶಿಕ್ಷಣ ಜಂಟಿ ನಿರ್ದೇಶಕರಾದ ರಾಮೇಗೌಡರಿಗೆ ಶಾಸಕ ಪೊನ್ನಣ್ಣ ನಿರ್ದೇಶನ ನೀಡಿದರು.
ಶಾಸಕರ ಸೂಚನೆ ಅನ್ವಯ ಅಧಿಕಾರಿಗಳು ಶಾಸಕ ಪೊನ್ನಣ್ಣ ಹಾಗೂ ಇತರ ಗಣ್ಯರೊಂದಿಗೆ ಪೊನ್ನಂಪೇಟೆಯಲ್ಲಿರುವ ಪದವಿ ಕಾಲೇಜಿಗೆ ತೆರಳಿ ಸ್ಥಳ ಪರಿಶೀಲನೆ ನಡೆಸಿದರು. ಕಾಲೇಜು ಆವರಣದಲ್ಲಿರುವ ಖಾಲಿ ಕೊಠಡಿಗಳಲ್ಲಿ ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಪದವಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಕ್ರಮವಹಿಸುವಂತೆ
(ಮೊದಲ ಪುಟದಿಂದ) ಅಧಿಕಾರಿಗಳಿಗೆ ಸ್ಥಳದಲ್ಲಿ ಸೂಚನೆ ನೀಡಿದರು.
ಈ ವೇಳೆ ಮಾತನಾಡಿದ ಮಂಗಳೂರಿನ ಕಾಲೇಜು ಶಿಕ್ಷಣ ಜಂಟಿ ನಿರ್ದೇಶಕ ರಾಮೇಗೌಡ ಪದವಿ ಕಾಲೇಜು ಆರಂಭಿಸಲು ಗರಿಷ್ಠ ೫ ಎಕರೆ ಜಾಗದ ಅವಶ್ಯಕತೆ ಇದೆ, ಕನಿಷ್ಟ ೨ ಎಕರೆ ಜಾಗವನ್ನು ಮಂಜೂರು ಮಾಡಿಸಿಕೊಡುವಂತೆ ಶಾಸಕ ಪೊನ್ನಣ್ಣನವರಲ್ಲಿ ಮನವಿ ಮಾಡಿದರು.
ಸರ್ಕಾರದ ಸೂಚನೆ ಅನ್ವಯ ಮುಂದಿನ ಶೈಕ್ಷಣಿಕ ಸಾಲಿನಲ್ಲಿಯೇ ತರಗತಿಗಳು ಆರಂಭವಾಗಬೇಕಾಗಿರುವುದರಿAದ ತಾತ್ಕಾಲಿಕವಾಗಿ ೫ ಕೊಠಡಿಗಳನ್ನು ನೀಡುವಂತೆ ಪ್ರಸ್ತಾಪ ಸಲ್ಲಿಸಿದರು. ಪೊನ್ನಂಪೇಟೆ ತಾಲೂಕು ಕೇಂದ್ರವು ಮಧ್ಯಭಾಗದಲ್ಲಿರುವುದರಿಂದ ಪದವಿ ಶಿಕ್ಷಣ ಪಡೆಯಲು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲಕರ ವಾಗಿರುವುದರಿಂದ ಪೊನ್ನಂಪೇಟೆಯ ಸರ್ಕಾರಿ ಕಾಲೇಜಿನ ಆವರಣದಲ್ಲಿ ಪದವಿ ಶಿಕ್ಷಣ ಆರಂಭಿಸಲು ಕಾರ್ಯಪ್ರವೃತ್ತರಾಗುವಂತೆ ಸಲಹೆ ನೀಡಿದರು. ಮುಂದಿನ ವರ್ಷಗಳಲ್ಲಿ ಹೊಸ ಪದವಿ ಕಾಲೇಜು ನಿರ್ಮಾಣಕ್ಕೆ ಸೂಕ್ತವಾದ ಸ್ಥಳವನ್ನು ಗುರುತಿಸಿ ಇಲಾಖೆಗೆ ಹಸ್ತಾಂತರಿಸಲಾಗುವುದು. ಈ ಬಗ್ಗೆ ಸ್ಥಳ ಗುರುತಿಸಲು ತಹಶೀಲ್ದಾರ್ರಿಗೆ ಸೂಚನೆ ನೀಡಲಾಗುವುದು ಎಂದು ಅಧಿಕಾರಿಗಳು ಸಲ್ಲಿಸಿದ ಪ್ರಸ್ತಾವನೆಗೆ ಶಾಸಕ ಪೊನ್ನಣ್ಣ ಉತ್ತರಿಸಿದರು.
ಪೊನ್ನಂಪೇಟೆಯಲ್ಲಿ ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಪ್ರಾರಂಭವಾಗಲಿರುವ ಪದವಿ ಶಿಕ್ಷಣದಲ್ಲಿ ಮೊದಲಿಗೆ ಬಿಎ,ಬಿಕಾಂ ತರಗತಿಗಳು ಆರಂಭವಾಗಲಿವೆ. ಇದರಿಂದ ದ.ಕೊಡಗಿನಿಂದ ಗ್ರಾಮೀಣ ಭಾಗದಲ್ಲಿರುವ ವಿದ್ಯಾರ್ಥಿಗಳಿಗೆ ಪದವಿ ಶಿಕ್ಷಣ ಪಡೆಯಲು ಅನುಕೂಲವಾಗಲಿದೆ. ಈ ಹಿಂದೆ ದೂರದ ಪಟ್ಟಣ ಪ್ರದೇಶಗಳಿಗೆ ಈ ಭಾಗದ ವಿದ್ಯಾರ್ಥಿಗಳು ತೆರಳುತ್ತಿದ್ದರು. ಅಲ್ಲದೇ ಖಾಸಗಿ ಕಾಲೇಜುಗಳನ್ನು ಅವಲಂಬಿಸಿದ್ದರು. ಇದೀಗ ನೂತನ ಶಾಸಕ ಪೊನ್ನಣ್ಣ ಅವರ ವಿಶೇಷ ಆಸಕ್ತಿಯಿಂದ ಪೊನ್ನಂಪೇಟೆಯಲ್ಲಿ ಪದವಿ ಶಿಕ್ಷಣ ಇಲ್ಲಿಯ ವಿದ್ಯಾರ್ಥಿಗಳಿಗೆ ಲಭಿಸಲಿದೆ ಎಂಬ ಆಶಾಭಾವನೆ ಸೃಷ್ಟಿಯಾಗಿದೆ. ಕಳೆದ ಹಲವು ವರ್ಷಗಳಿಂದ ಸರಕಾರಿ ಪದವಿ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ದಕ್ಷಿಣ ಕೊಡಗು ಭಾಗದಿಂದ ದೂರದ ವೀರಾಜಪೇಟೆಗೆ ಅಥವಾ ಖಾಸಗಿ ಕಾಲೇಜಿಗೆ ಸೇರಬೇಕಾಗಿತ್ತು. ಪರಿಶಿಷ್ಟ ಪಂಗಡ, ಆರ್ಥಿಕ ಹಿಂದುಳಿದವರಿಗೆ ದೂರದೂರಿಗೆ ತೆರಳಿ ಶಿಕ್ಷಣ ಪಡೆಯುವುದು ಕಷ್ಟಸಾಧ್ಯವಾಗಿತ್ತು. ನೂತನ ಕ್ರಮ ವಿದ್ಯಾರ್ಥಿಗಳಿಗೆ ಖುಷಿ ತರಿಸಿದೆ.
ಪೊನ್ನಂಪೇಟೆಯಲ್ಲಿ ಪದವಿ ಕಾಲೇಜು ಆರಂಭಿಸಲು ೨೦೦೭ರಲ್ಲಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಆದರೆ ನಾನಾ ಕಾರಣಗಳಿಂದ ಈ ಪ್ರಸ್ತಾವನೆಗೆ ಮಾನ್ಯತೆ ಲಭ್ಯವಾಗಿರಲಿಲ್ಲ. ಪೊನ್ನಂಪೇಟೆಗೆ ಮಂಜೂರಾದ ಪದವಿ ಕಾಲೇಜನ್ನು ಆಗಿನ ತಾಲೂಕು ಕೇಂದ್ರದಲ್ಲಿ ಪ್ರಾರಂಭಿಸಬೇಕೆAಬ ನಿಯಮದ ಅನ್ವಯ ವೀರಾಜಪೇಟೆ ಪಟ್ಟಣದಲ್ಲಿ ಸರ್ಕಾರಿ ಪದವಿ ಕಾಲೇಜು ಆರಂಭಿಸಲಾಗಿತ್ತು. ತದ ನಂತರ ಮಹಿಳಾ ಕಾಲೇಜನ್ನು ಪೊನ್ನಂಪೇಟೆ ವ್ಯಾಪ್ತಿಯಲ್ಲಿ ತೆರೆಯುವಂತೆ ಸರ್ಕಾರದ ಮುಂದೆ ಇಲ್ಲಿನ ನಾಗರಿಕರು ಮನವಿ ಮಾಡಿದ್ದರು.
೨೦೧೩-೧೪ರ ಸಾಲಿನಲ್ಲಿ ಮಂಜೂರಾದ ಮಹಿಳಾ ಕಾಲೇಜನ್ನು ಜಿಲ್ಲಾ ಕೇಂದ್ರದಲ್ಲಿ ತೆರೆÀಯಬೇಕೆಂಬ ಸರ್ಕಾರದ ಸುತ್ತೋಲೆ ಅನ್ವಯ ಮಹಿಳಾ ಕಾಲೇಜನ್ನು ಜಿಲ್ಲಾ ಕೇಂದ್ರ ಮಡಿಕೇರಿಗೆ ಸ್ಥಳಾಂತರಿಸಲಾಯಿತು. ಇದೀಗ ಈ ಹಿಂದಿನ ಎಲ್ಲಾ ವಿಘ್ನಗಳು ಮರೆಯಾಗಿದ್ದು, ಪೊನ್ನಂಪೇಟೆ ತಾಲೂಕು ಕೇಂದ್ರದಲ್ಲಿಯೇ ಪದವಿ ಕಾಲೇಜು ಆರಂಭವಾಗುವ ಎಲ್ಲಾ ಲಕ್ಷಣಗಳು ಕಂಡು ಬಂದಿವೆ. ಇದರಿಂದ ದ.ಕೊಡಗಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.