ಕುಶಾಲನಗರ, ಸೆ. ೮ : ಶೌಚ ತ್ಯಾಜ್ಯವನ್ನು ಟ್ಯಾಂಕರ್‌ನಲ್ಲಿ ತುಂಬಿಸಿ ತಡರಾತ್ರಿ ನದಿಗೆ ಹರಿಸುತ್ತಿದ್ದ ಸಂದರ್ಭ ಸ್ಥಳೀಯರು ಪತ್ತೆ ಹಚ್ಚಿ ಟ್ಯಾಂಕರ್ ಮತ್ತು ನಾಲ್ವರನ್ನು ಪೊಲೀಸರ ವಶಕ್ಕೆ ನೀಡಿದ ಘಟನೆ ಕುಶಾಲನಗರದಲ್ಲಿ ನಡೆದಿದೆ.

ಕುಶಾಲನಗರ ಪಟ್ಟಣದ ವಾಣಿಜ್ಯ ಕಟ್ಟಡಗಳಿಂದ ಶೌಚ ತ್ಯಾಜ್ಯವನ್ನು ತೆರವುಗೊಳಿಸಿ ಟ್ಯಾಂಕರ್‌ಗೆ ತುಂಬಿಸಿ ನಂತರ ಅದನ್ನು ದಂಡಿನಪೇಟೆ ಸಮೀಪದ ಶಾಂತಿ ಮಾರ್ಗ ಬಳಿ ಚರಂಡಿ ಮೂಲಕ ನದಿಗೆ ಹರಿಸುತ್ತಿದ್ದ ದೃಶ್ಯವನ್ನು ಕಂಡ ಸ್ಥಳೀಯ ನಿವಾಸಿ ಅಜೀಜ್ ಎಂಬವರು ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ ಮೇರೆಗೆ ಟ್ಯಾಂಕರ್ ವಶಪಡಿಸಿಕೊಂಡು ವಾಹನದ ಚಾಲಕ, ಮಾಲೀಕ ಸೇರಿದಂತೆ ಪಟ್ಟಣದ ಪೌರಕಾರ್ಮಿಕನೊಬ್ಬನ ಮೇಲೆ ಮೊಕದ್ದಮೆ ದಾಖಲಿಸಲಾಗಿದೆ ಎಂದು ಎಸ್‌ಐ ಚಂದ್ರಶೇಖರ್ ತಿಳಿಸಿದ್ದಾರೆ.

ಮಂಡ್ಯ ಜಿಲ್ಲೆಯ ವ್ಯಕ್ತಿಯೊಬ್ಬರಿಗೆ ಸೇರಿದ ಟ್ಯಾಂಕರ್ (ಕೆಎ೦೧-ಎಎ೬೨೬೦) ಅನ್ನು ಬಾಡಿಗೆ ಮೇರೆಗೆ ಕುಶಾಲನಗರದ ಕಾರ್ಮಿಕ ತಂದು ಕುಶಾಲನಗರ ಪಟ್ಟಣದ ವಾಣಿಜ್ಯ ಕಟ್ಟಡಗಳಿಂದ ಶೌಚ ತ್ಯಾಜ್ಯ ತೆರವುಗೊಳಿಸಿ ಟ್ಯಾಂಕರ್‌ನಲ್ಲಿ ತುಂಬಿಸಿ ನಂತರ ಪಟ್ಟಣ ವ್ಯಾಪ್ತಿಯಲ್ಲಿ ರಾತ್ರಿ ೧೧ ಗಂಟೆಗೆ ಪಟ್ಟಣದ ದಂಡಿನಪೇಟೆ ಸಮೀಪದ ಶಾಂತಿ ಮಾರ್ಗ ಬಳಿ ನದಿಗೆ ಬಿಡುತ್ತಿದ್ದ ಸಂದರ್ಭ ಗಮನಿಸಿ ಅಲ್ಲಿನ ನಿವಾಸಿ ಅಜೀಜ್ ಎಂಬವರು ವಿಚಾರಿಸಿದಾಗ ಚರಂಡಿ ಮೂಲಕ ನದಿಗೆ ಬಿಡುತ್ತಿರುವುದು ಕಂಡು ಬಂದಿದೆ.

ಪುರಸಭೆ ಸದಸ್ಯೆ ಸುರಯ್ಯಬಾನು ಅವರ ಗಮನಕ್ಕೆ ತಂದು ಪೊಲೀಸರಿಗೆ ಮಾಹಿತಿ ನೀಡಿದ ಮೇರೆಗೆ ಪೊಲೀಸರು ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣಕ್ಕೆ ಸಂಬAಧಿಸಿದAತೆ ಕುಶಾಲನಗರ ಪೊಲೀಸ್ ಠಾಣಾಧಿಕಾರಿ ಚಂದ್ರಶೇಖರ್ ಮತ್ತು ಸಿಬ್ಬಂದಿ, ಪುರಸಭೆ ಆರೋಗ್ಯ ಅಧಿಕಾರಿ ಉದಯಕುಮಾರ್ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಟ್ಯಾಂಕರ್ ಮಾಲೀಕರಾದ ಹರೀಶ್, ಚಾಲಕ ರವಿ ಚಂದ್ರ ಉದಯ ಮತ್ತು ಕುಶಾಲನಗರ ಪುರಸಭೆ ಕಾರ್ಮಿಕ ಸುರೇಶ್ ಬಾಬು ಮೇಲೆ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಎಸ್‌ಐ ಚಂದ್ರಶೇಖರ್ ಅವರು ಪ್ರಕರಣದ ಬಗ್ಗೆ ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಕುಶಾಲನಗರ ಪುರಸಭೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಮುಂದಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

ಕುಶಾಲನಗರ ಪಟ್ಟಣ ಮತ್ತು ಸುತ್ತಮುತ್ತ ವ್ಯಾಪ್ತಿಯಲ್ಲಿ ನಿರಂತರವಾಗಿ ರಾತ್ರಿ ವೇಳೆ ನದಿಗೆ ಶೌಚ ತ್ಯಾಜ್ಯ ಹರಿಸುವ ವ್ಯಕ್ತಿಗಳ ಮೇಲೆ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕೆಂದು ದಂಡಿನಪೇಟೆ ಪ್ರಮುಖರಾದ ಶಬೀರ್ ಅಹಮದ್ ಸಂಬAಧಿಸಿದ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.