ವೀರಾಜಪೇಟೆ, ಸೆ. ೫: ಸಮಾಜದಲ್ಲಿ ಗೌರವಯುತವಾದ ಜವಾಬ್ದಾರಿ ಶಿಕ್ಷಕರ ಮೇಲಿದ್ದು, ಜ್ಞಾನದ ಹಸಿವನ್ನು ಇಂಗಿಸುವ ಪರಮೋಚ್ಚ ಶಕ್ತಿ ಶಿಕ್ಷಕರಲ್ಲಿದ್ದು ತಮ್ಮ ಜವಾಬ್ದಾರಿಯನ್ನು ಅರಿತು ಶಿಕ್ಷಕರು ಸಮಾಜಮುಖಿಯಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಮುಖ್ಯಂತ್ರಿಗಳ ಕಾನೂನು ಸಲಹೆಗಾರ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್. ಪೊನ್ನಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು.
ಶಾಲಾ ಶಿಕ್ಷಣ ಇಲಾಖೆ, ವೀರಾಜಪೇಟೆ ತಾಲೂಕು ಶಿಕ್ಷಕರ ದಿನಾಚರಣಾ ಸಮಿತಿ, ಸರಕಾರಿ, ಅನುದಾನಿತ, ಅನುದಾನ ರಹಿತ, ಪ್ರಾಥಮಿಕ, ಪ್ರೌಢಶಾಲೆಗಳ ಶಿಕ್ಷಕರ ಸಂಘ, ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಬೆಂಗಳೂರು, ತಾಲೂಕು ಶಿಕ್ಷಕರ ಕಲ್ಯಾಣ ಸಮಿತಿ, ಸಂತ ಅನ್ನಮ್ಮ ವಿದ್ಯಾಸಂಸ್ಥೆ ಸಂಯುಕ್ತಾಶ್ರಯದಲ್ಲಿ ವೀರಾಜಪೇಟೆಯ ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳ ಓದಿನ ಜೊತೆಗೆ ಭವಿಷ್ಯ ರೂಪಿಸಿಕೊಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರ ನೀಡುವ, ಸಮಾಜ ತಿದ್ದುವ ಹಾಗೂ ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಕರು ಕಾರಣವಾಗಲಿದ್ದಾರೆ ಎಂದರು.
ಶಿಕ್ಷಕರು ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುವುದರ ಮೂಲಕ ಸಮಾಜದಲ್ಲಿ ಉತ್ತಮ ವ್ಯಕ್ತಿಯನ್ನಾಗಿ ರೂಪಿಸಬೇಕು. ಒಂದು ಶಾಲೆಯಲ್ಲಿ ಕಲಿತ ವಿದ್ಯಾರ್ಥಿ ಮುಂದೆ ತಾನು ಯಾವ ಕ್ಷೇತ್ರದಲ್ಲಿ ಮುಂದುವರೆದು ಸಾಧನೆ ಮಾಡಿದ್ದಾನೆ ಅನ್ನುವುದು ಮುಖ್ಯವಾಗಬೇಕು, ಆ ನಿಟ್ಟಿನಲ್ಲಿ ಶಿಕ್ಷಣ ಸಾಗಬೇಕು ಎಂದರು.
ಬದಲಾದ ಕಾಲಘಟ್ಟದಲ್ಲಿ ಶಿಕ್ಷಕರು ಹೊಂದಿಕೊAಡು ಕೆಲಸ ಮಾಡಬೇಕಿದೆ. ಇಂದು ತಂತ್ರಜ್ಞಾನ ಬಹಳ ಮುಂದುವರೆದಿದೆ. ಪುಸ್ತಕಗಳನ್ನು ಹೊರತುಪಡಿಸಿ ಜೀವನದಲ್ಲಿ ಕಲಿಯುವುದು, ಕಲಿಸುವುದು ಬಹಳಷ್ಟಿವೆ. ಮಕ್ಕಳು ಶಿಸ್ತುಬದ್ಧ ಜೀವನ ನಡೆಸಲು ಶಿಕ್ಷಕರೇ ಪ್ರೇರಣೆಯಾಗಲಿದ್ದಾರೆ. ಶಿಕ್ಷಕರನ್ನು ಗುರುತಿಸುವುದು ಸಮಾಜದ ಜವಾಬ್ದಾರಿ ಎಂದರು.
ಮೈಸೂರಿನ ಭಾರತೀಯ ಸಂಸ್ಥಾನದ ಶಾಸ್ತಿçÃಯ ಕನ್ನಡ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಡಾ. ನೀಲಗಿರಿ ತಳವಾರ್ ಅವರು ಪ್ರಧಾನ ಭಾಷಣಕಾರರಾಗಿ ಆಗಮಿಸಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ, ಶಿಕ್ಷಕ ವೃತ್ತಿಯಂತಹ ಶ್ರೇಷ್ಠ ವೃತ್ತಿ ಮತ್ತೊಂದಿಲ್ಲ. ಶಿಕ್ಷಕ ವೃತ್ತಿಯಲ್ಲಿ ತ್ಯಾಗ ಮನೋಭಾವನೆ ಬೇಕು, ಆದ್ದರಿಂದ ಮಾತ್ರ ಸಮಾಜ ಸಮೃದ್ಧಿ ಹಾಗೂ ಸುಧಾರಣೆಯಾಗಲಿದೆ. ಉತ್ತಮ ಸಂಸ್ಕಾರಯುತ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಿ ದೇಶದ ಅಭ್ಯುದಯಕ್ಕೆ ಅಡಿಪಾಯ ಹಾಕುವ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.
ಇದೇ ಸಂದರ್ಭ ಸೇವೆಯಿಂದ ನಿವೃತ್ತಿಗೊಂಡ ತಾಲೂಕಿನ ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು, ವಿಷಯ ಬೋಧನಾ ಶಿಕ್ಷಕರನ್ನು ಸನ್ಮಾನಿಸಲಾಯಿತು. ಶಾಸಕ ಪೊನ್ನಣ್ಣ, ಫಾ.ಐಸಾಕ್ ರತ್ನಾಕರ್, ಮಾದಂಡ ತಿಮ್ಮಯ್ಯ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭ ಕರ್ತವ್ಯದಲ್ಲಿದ್ದಾಗಲೇ ಮೃತಪಟ್ಟ ಶಿಕ್ಷಕರಿಗೆ ಸಂತಾಪ ಸೂಚಿಸಲಾಯಿತು.
ವಿವಿಧ ಕಾರ್ಯಕ್ರಮ ಹಾಗೂ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದ ಮೊದಲಿಗೆ ವೇದಿಕೆಯಲ್ಲಿದ್ದ ಗಣ್ಯರು ಡಾ. ಸರ್ವಪಲ್ಲಿ ರಾಧಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ವೇದಿಕೆಯಲ್ಲಿ ವೀರಾಜಪೇಟೆ ತಾಲೂಕು ತಹಶೀಲ್ದಾರ್ ಹೆಚ್.ಎನ್. ರಾಮಚಂದ್ರ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಪ್ರಕಾಶ್, ಸಂತ ಅನ್ನಮ್ಮ ಕಾಲೇಜು ವ್ಯವಸ್ಥಾಪಕ ರೆ.ಫಾ.ಐಸಾಕ್ ರತ್ನಾಕರ್, ಸಂತ ಅನ್ನಮ್ಮ ಶಾಲೆಯ ಮುಖ್ಯ ಶಿಕ್ಷಕ ಬೆನ್ನಿ ಜೋಸೆಫ್, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ವನಜಾಕ್ಷಿ, ದೈಹಿಕ ಶಿಕ್ಷಣ ಪರಿವೀಕ್ಷಕಿ ಗಾಯತ್ರಿ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಪಿ.ಉತ್ತಪ್ಪ, ಅನುದಾನಿತ ನೌಕರರ ಸಂಘದ ಅಧ್ಯಕ್ಷ ಗಿಡ್ಡಯ್ಯ, ಗ್ರೇಡ್-೧ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಎಂ. ಸೋಮಯ್ಯ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಂದ್ರ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಆರ್ ಸುಬ್ಬಯ್ಯ ಸೇರಿದಂತೆ ಇತರರು ಇದ್ದರು.
ಕಾರ್ಯಕ್ರಮದಲ್ಲಿ ತಾಲೂಕಿನ ಎಲ್ಲಾ ಶಾಲೆಗಳಿಂದ ಆಗಮಿಸಿದ ಶಿಕ್ಷಕ ವೃಂದದವರು, ಎಲ್ಲಾ ಸಂಘದ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.