ಮಡಿಕೇರಿ, ಸೆ.೫: ‘ಗುರುರ್ ಬ್ರಹ್ಮ.., ಗುರುರ್ ವಿಷ್ಣುಃ.., ಗುರುರ್ದೇವೋ ಮಹೇಶ್ವರಃ.., ಗುರುಸ್ಸಾಕ್ಷಾತ್ ಪರಬ್ರಹ್ಮ ತಸ್ಮೆöÊ ಶ್ರೀ ಗುರವೇ ನಮಃ...’
ಒಂದು ಮಗುವಿಗೆ ತಾಯಿ ಮೊದಲ ಗುರುವಾದರೆ ಎರಡನೇ ಸ್ಥಾನದಲ್ಲಿ ನಿಲ್ಲುವವರೇ ಗುರುಗಳು., ಶಿಕ್ಷಣ ನೀಡಿ ಓರ್ವ ವ್ಯಕ್ತಿಯನ್ನು ಸಮಾಜದಲ್ಲಿ ಉತ್ತಮ ಪ್ರಜೆಯನ್ನಾಗಿ ರೂಪಿಸುವ ಮಹತ್ತರ ಜವಾಬ್ದಾರಿಯನ್ನು ಹೊತ್ತಿರುವ ಶಿಕ್ಷಕರಿಗೆ ನಮ್ಮ ಸಮಾಜದಲ್ಲಿ ಅಪಾರವಾದ ಗೌರವವಿದೆ. ಶಿಕ್ಷಕರನ್ನು ಪ್ರತಿಯೋರ್ವರೂ ಗೌರವಾದರದಿಂದ ಕಾಣುತ್ತೇವೆ. ಗುರುಗಳನ್ನು ಪೂಜ್ಯ ಭಾವನೆಯೊಂದಿಗೆ ಪೂಜಿಸುತ್ತೇವೆ..,
ಅಂತಹ ಗುರುಗಳನ್ನು ಗೌರವಿಸುವ., ಆದರಿಸುವ ಸಲುವಾಗಿ ಪ್ರತಿವರ್ಷ ಶಿಕ್ಷಕರ ದಿನಾಚರಣೆಯನ್ನು ಹಮ್ಮಿಕೊಂಡು ಬರಲಾಗುತ್ತಿದೆ. ಶಿಷ್ಯಂದಿರು ಗುರುಗಳಿಗೆ ಪ್ರೀತಿಯ ಉಡುಗೊರೆಗಳನ್ನು ನೀಡಿ ಗೌರವ ಸಲ್ಲಿಸುತ್ತಾರೆ. ಶಿಕ್ಷಕ ವೃತ್ತಿಯಲ್ಲಿ ಅಸಾಧಾರಣ ಸೇವೆಗಾಗಿ ಅವರನ್ನು ಗುರುತಿಸಿ ಸರಕಾರದ ಮೂಲಕ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಅಂತಹುದ್ದೇ ಕಾರ್ಯಕ್ರಮವೊಂದನ್ನು ಇಂದು ಏರ್ಪಡಿಸಲಾಗಿತ್ತು. ಜಿಲ್ಲೆಯ ವಿವಿಧೆಡೆಗಳಿಂದ ಉತ್ಸಾಹಭರಿತರಾಗಿ ಶಿಕ್ಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆದರೆ., ಅಲ್ಲಿ ಗೌರವದ ಬದಲಿಗೆ ಶಿಕ್ಷಕರಿಗೆ ಸಿಕ್ಕಿದ್ದು ‘ಶಿಕ್ಷೆ’ ಎಂಬ ಉಡುಗೊರೆ..!
ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಮಡಿಕೇರಿಯ ಗೌಡ ಸಮಾಜದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಬೆಳಿಗ್ಗೆ ಹತ್ತು ಗಂಟೆಗೆ ನಿಗದಿಯಾಗಿದ್ದ ಕಾರ್ಯಕ್ರಮವನ್ನು ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಉದ್ಘಾಟನೆ ಮಾಡಬೇಕಿತ್ತು. ಆದರೆ., ಗಂಟೆ ಹನ್ನೆರಡಾದರೂ ಶಾಸಕರ ಸುಳಿವಿಲ್ಲ. ಬೆಳಿಗ್ಗೆಯಿಂದಲೇ ಸಂಭ್ರಮದ ಕ್ಷಣಗಳಿಗಾಗಿ ಕಾಯುತ್ತಾ ಕುಳಿತ್ತಿದ್ದ ಶಿಕ್ಷಕರಲ್ಲಿ ಸಮಯ ಕಳೆಯುತ್ತಲೇ ನಿರಾಸೆಯ ಭಾವ ಮೂಡತೊಡಗಿತು. ಅದರಲ್ಲೂ ತಮ್ಮದೇ ಕಾರ್ಯಕ್ರಮವಾಗಿದ್ದರಿಂದ ತಮ್ಮ ಮನೆಯ ಸಂಭ್ರಮದAತೆ ತಯಾರಾಗಿ ಬಂದಿದ್ದ ಶಿಕ್ಷಕಿಯರ ಮೊಗ ಬಾಡತೊಡಗಿತು. ಸಭಾಂಗಣವಿಡೀ ಅಸಮಾಧಾನದ ಮಾತುಗಳಿಂದ ಗಿಜಿಗುಡಲಾರಂಭಿಸಿದಾಗ ವಿಧಿಯಿಲ್ಲದೆ ಆಯೋಜನೆಯ ಜವಾಬ್ದಾರಿ ಹೊತ್ತಿದ್ದವರು ಶಾಸಕರಿಗೆ ಕರೆ ಮಾಡಿ ಕಾರ್ಯಕ್ರಮ ಆರಂಭ ಮಾಡಲು ಅನುಮತಿ ಕೋರಿದಾಗಲೂ ತಾನು ಬಂದ ಬಳಿಕವೇ ಆರಂಭಿಸುವAತೆ ಅತ್ತಲಿಂದ ಸೂಚನೆ ಬಂದಿತು..!
ವಿಧಿಯಿಲ್ಲದೆ ಮತ್ತೆ ಶಿಕ್ಷಕರಿಗೆ ಕಾಯುವದೇ ಶಿಕ್ಷೆಯಾಯಿತು. ‘ಟೈಂ ಪಾಸ್’ಗಾಗಿ ಆಯೋಜಕರು ಶಿಕ್ಷಕರಿಗೆ ‘ಯಾರಾದರೂ ಹಾಡು ಹೇಳುವವರಿದ್ದರೆ ಬಂದು ಹಾಡಬಹುದು’ ಎಂದ ಮೇಲೆ ಒಬ್ಬೊಬ್ಬರೇ ಬಂದು ತಮ್ಮದೇ ಧಾಟಿಯಲ್ಲಿ ಹಾಡುತ್ತಾ ಸಮಯವನ್ನು ಎಳೆದರು..!
ಅಂತೂ ಮಧ್ಯಾಹ್ನ ಹನ್ನೆರಡೂವರೆ ಗಂಟೆಗೆ ಶಾಸಕರ ಆಗಮನವಾದ ಬಳಿಕ ಕಾರ್ಯಕ್ರಮ ಆರಂಭಗೊAಡಿತು. ಉದ್ಘಾಟನೆ ಮಾಡಿ, ಪ್ರಶಸ್ತಿ ನೀಡಿ., ಶಿಕ್ಷಕರ ದಿನಾಚರಣೆಯ ಶುಭ ಕೋರಿ ತೆರಳಿದರು. ನಂತರ ವೇದಿಕೆಯಲ್ಲಿದ್ದ ಇತರ ಅತಿಥಿಗಳು ತಮ್ಮ ಪಾಲಿನ ಕರ್ತವ್ಯ ನಿರ್ವಹಿಸುವ ಸಲುವಾಗಿ ಮಾತಿಗೆ ಇಳಿದರಾದರೂ ಮೊದಲೇ ಸುಸ್ತಾಗಿ., ಹಸಿವಿನಿಂದ ಕಂಗೆಟ್ಟಿದ್ದ ಶಿಕ್ಷಕರು ಅದಾಗಲೇ ಊಟದ ಮನೆ ತಲುಪಿಯಾಗಿತ್ತು..!
-ಸಂತೋಷ್