ಮಡಿಕೇರಿ, ಸೆ. ೪: ಕರ್ನಾಟಕ ದಲಿತ ಸಂಘರ್ಷ ಜಿಲ್ಲಾ ಸಮಿತಿಯಿಂದ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ನೆಲ್ಯಹುದಿಕೇರಿ ಸರಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ನಡೆದ ಸನ್ಮಾನ, ಗೌರವ ಸಮರ್ಪಣೆ ಕಾರ್ಯಕ್ರಮವನ್ನು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್. ಎಲ್. ದಿವಾಕರ್ ಉದ್ಘಾಟಿಸಿ ಮಾತನಾಡಿ, ಪ್ರೌಢಶಾಲೆಯಲ್ಲಿ ಶೇ. ೮೫ರಷ್ಟು ಉತ್ತಮ ಫಲಿತಾಂಶ ಬಂದಿರುವ ಸರಕಾರಿ ಶಾಲೆಗಳನ್ನು ಗುರುತಿಸಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಗೌರವ ಸಮರ್ಪಣೆ ಕಾರ್ಯಕ್ರಮವನ್ನು ಪ್ರತಿ ವರ್ಷ ಹಮ್ಮಿಕೊಳ್ಳಲಾಗುತ್ತಿದೆ. ಈ ವರ್ಷ ನೆಲ್ಯಹುದಿಕೇರಿ ಸರಕಾರಿ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳನ್ನು ಗೌರವಿಸಲಾಗಿದೆ.
ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವುದರ ಮೂಲಕ ಸಂಘಟನೆ ನಿರಂತರ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಮುನ್ನಡೆಯುತ್ತಿದೆ ಎಂದರು.ವಿಭಾಗೀಯ ಸಂಚಾಲಕ ಎನ್. ವೀರಭದ್ರಯ್ಯ ಮಾತನಾಡಿ, ಶಿಕ್ಷಕ ವೃತ್ತಿಗೆ ಬಹಳ ಗೌರವ ಇದೆ ವ್ಯಕ್ತಿಯೊಬ್ಬನನ್ನು ಉನ್ನತ ಹುದ್ದೆಗೇರಿಸುವ ಸಾಮರ್ಥ್ಯ ಇರುವುದು ಶಿಕ್ಷಕರಿಗೆ ಮಾತ್ರ. ಶಿಕ್ಷಣ ಕ್ರಾಂತಿಯನ್ನು ಮೂಡಿಸುತ್ತಿರುವ ಶಿಕ್ಷಕರ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಾಮಾಜಿಕ ಕಾರ್ಯಕರ್ತ ಎಂ.ಎ. ಆಜೀಜ್ ಮಾತನಾಡಿ, ಸಾಧನೆ ಮಾಡಿದವರ ಮಾತುಗಳನ್ನು ಕೇಳಿದರೆ ನಮ್ಮ ಜೀವನಕ್ಕೆ ಬೇಕಾದ ಉಪಯುಕ್ತ ಅಂಶಗಳು ಸಿಗುತ್ತವೆ. ವಿದ್ಯಾರ್ಥಿಗಳು ಶಿಕ್ಷಣದ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಂಡು ಸಮಾಜದಲ್ಲಿ ಗುರುತಿಸಿಕೊಳ್ಳುವಂತಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆಸ್ಪತ್ರೆ ಉಪ ಮುಖ್ಯ ವೈದ್ಯಾಧಿಕಾರಿ ದೇವದಾಸ್, ತಾಲೂಕು ಸಂಚಾಲಕ ದೀಪಕ್ ಪೊನ್ನಪ್ಪ, ವಿದ್ಯಾರ್ಥಿ ಒಕ್ಕೂಟದ ಸಂತೋಷ್ ಕುಮಾರ್, ನಗರ ಸಂಘಟನೆ ಸಂಚಾಲಕ ಲೋಕನಾಥ್, ಪ್ರಾಂಶುಪಾಲರಾದ ಅಂತೋನಿ ವಿವಿಯನ್ ಆಲ್ವಾರೀಸ್, ಅನಿಲ್ ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.