ಕುಶಾಲನಗರ, ಸೆ. ೪: ಕುಶಾಲ ನಗರ ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣ ಬೇಲಿಯನ್ನು ಕೆಡವಿ ಜಾಗ ಒತ್ತುವರಿ ಮಾಡಿದ ಪ್ರಕರಣ ಇದೀಗ ಅಂತ್ಯ ಕಂಡಿದೆ.

ವ್ಯಕ್ತಿಯೊಬ್ಬರು ಶಾಲೆಯ ಆವರಣ ಗೋಡೆಯನ್ನು ಕೆಡವಿ ಶಾಲೆಯ ಜಾಗವನ್ನು ಒತ್ತುವರಿ ಮಾಡುವ ಮೂಲಕ ಮನೆ ಕಟ್ಟಡ ನಿರ್ಮಾಣ ಮಾಡುತ್ತಿರುವುದು ಗಮನಕ್ಕೆ ಬಂದು ‘ಶಕ್ತಿ’ಯಲ್ಲಿ ಆ ಬಗ್ಗೆ ವರದಿ ಪ್ರಕಟವಾಗಿತ್ತು.

ಈ ಬಗ್ಗೆ ತಕ್ಷಣ ಗಮನಹರಿಸಿದ ಶಿಕ್ಷಣ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಆವರಣ ಬೇಲಿ ಕೆಡವಿದ ಹಿನ್ನೆಲೆಯಲ್ಲಿ ಕ್ರಮಕ್ಕೆ ಮುಂದಾಗಿ ದ್ದರು. ಆವರಣ ಬೇಲಿ ಕೆಡವಿ ಮನೆ ನಿರ್ಮಾಣಕ್ಕೆ ಮುಂದಾಗಿದ್ದ ವ್ಯಕ್ತಿ ಪುನೀತ್ ಎಂಬಾತ ಶಾಲಾ ಆವರಣ ಬೇಲಿ ಪುನರ್ ನಿರ್ಮಿಸಿ ಅಕ್ರಮವಾಗಿ ಒತ್ತುವರಿ ಮಾಡಿ ಕಾಮಗಾರಿ ನಡೆಸಿದ ಜಾಗವನ್ನು ತೆರವು ಗೊಳಿಸಿದ್ದಾರೆ.

ಪತ್ರಿಕೆಯಲ್ಲಿ ಈ ಬಗ್ಗೆ ವರದಿ ಪ್ರಕಟಗೊಂಡ ಬೆನ್ನಲ್ಲೇ ಸ್ಥಳೀಯ ಸಂಘ-ಸAಸ್ಥೆಗಳು ಸರಕಾರಿ ಶಾಲೆಯ ಆಸ್ತಿಯನ್ನು ಉಳಿಸಲು ಕ್ರಮ ಕೈಗೊಳ್ಳುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಒತ್ತಾಯಿಸಿದ್ದರು.