ಗೋಣಿಕೊಪ್ಪ, ಸೆ. ೨: ಆದಿವಾಸಿ ಜನಾಂಗ ಆರ್ಥಿಕವಾಗಿ, ಶೈಕ್ಷಣಿಕ ವಾಗಿ, ಸಾಮಾಜಿಕವಾಗಿ ಹಿಂದುಳಿದು ನಿರಂತರ ಶೋಷಣೆಗೆ ಒಳಗಾಗಿದೆ. ಯಾವುದೇ ಸರ್ಕಾರ ಬಂದರೂ ಕಾಡಿನ ಮಕ್ಕಳಿಗೆ ನ್ಯಾಯ ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ಬುಡಕಟ್ಟು ಜನಾಂಗ ಸಂಘಟಿತ ಹೋರಾಟ ಮಾಡುವದು ಅನಿವಾರ್ಯ ಎಂದು ಕವಿ, ವೀರಾಜ ಪೇಟೆ ಸಂತ ಅನ್ನಮ್ಮ ಪದವಿ ಕಾಲೇಜು ಉಪನ್ಯಾಸಕ ಅರ್ಜುನ್ ಮೌರ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ಗೋಣಿಕೊಪ್ಪಲು ಮಹಿಳಾ ಸಮಾಜದ ಆವರಣದಲ್ಲಿ ಜರುಗಿದ ವಿಶ್ವ ಆದಿವಾಸಿ ಹಕ್ಕುಗಳ ದಿನಾಚರಣೆ ಹಾಗೂ ಜಿಲ್ಲಾ ಸಮಾವೇಶ ಉದ್ಘಾ ಟಿಸಿ ಅವರು ಮಾತನಾಡಿದರು.
ವಿಶ್ವದ ಸುಮಾರು ೯೦ ರಾಷ್ಟçಗಳಲ್ಲಿ ೪೭೬ ಮಿಲಿಯನ್ ಆದಿವಾಸಿಗಳಿದ್ದಾರೆ. ಶೇ.೫೦ ರಷ್ಟು ಬುಡಕಟ್ಟು ಜನಾಂಗ ಹಸಿವಿನಿಂದ ಬಳಲುತ್ತಿದ್ದು, ಸರ್ಕಾರದ ಅನುದಾ ನಗಳು ಶೋಷಿತರಿಗೆ ನ್ಯಾಯೋ ಚಿತವಾಗಿ ಸಿಗುತ್ತಿಲ್ಲ. ಕೊಡಗು ಜಿಲ್ಲೆಯ ಶೇ.೪೩ರಷ್ಟು ಅರಣ್ಯ ಸಂರಕ್ಷಣೆಗೆ ಆದಿವಾಸಿ ಜನಾಂಗದ ಆಚಾರ, ವಿಚಾರ ಕಾರಣವಾಗಿದೆ. ಜೇನು ಕುರುಬ, ಬೆಟ್ಟ ಕುರುಬ, ಪಂಜರಿ ಯರವ ಜನಾಂಗದ ನಡುವೆ ವೈಷಮ್ಯ ಬಿತ್ತಿ ಪರಸ್ಪರ ಸಂಘರ್ಷ ಹುಟ್ಟು ಹಾಕಲಾಗುತ್ತಿದೆ ಎಂದು ವಿಷಾದಿಸಿದರು.
ಬುಡಕಟ್ಟು ಸಮುದಾಯ ಮೊದಲು ಸಂಘಟಿತರಾಗಬೇಕು. ಸರ್ಕಾರದ ಅನುದಾನ ಕಟ್ಟ ಕಡೆಯ ವ್ಯಕ್ತಿಗೆ ಸಿಗುವಂತಾಗಬೇಕು. ಭೂಮಿ, ವಸತಿ ಹಾಗೂ ಮೂಲಭೂತ ಹಕ್ಕುಗಳಿಗೆ ಹೋರಾಡುವ ಅನಿ ವಾರ್ಯತೆ ಎದುರಾಗಿದೆ ಎಂದ ಅವರು, ಪ್ರಕೃತಿ ಆರಾಧಕರು, ಪಂಚಭೂತಗಳ ಧರ್ಮವನ್ನು ಪಾಲಿಸುವವರು ಕಾಡಿನ ಮಕ್ಕಳು ಎಂದು ಅರ್ಜುನ್ ಮೌರ್ಯ ಬಣ್ಣಿಸಿದರು.
ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ರಾಜ್ಯ ಸಹ ಸಂಚಾಲಕ ಡಾ. ಎಸ್.ವೈ. ಗುರುಶಾಂತ್ ಅವರು ಮಾತನಾಡಿ, ಅನ್ಯಜನಾಂಗ, ಆರ್ಥಿಕವಾಗಿ ಬಲಾಢ್ಯರಾದವರು ಬುಡಕಟ್ಟು ಸ್ಥಾನಮಾನ ಪಡೆಯಲು ಹೊಂಚು ಹಾಕುತ್ತಿದ್ದಾರೆ. ಇವರ ವಿರುದ್ಧ ರಾಜ್ಯ ಮಟ್ಟದಲ್ಲಿ ಆದಿವಾಸಿಗಳು ಸಂಘಟಿತ ಹೋರಾಟ ನಡೆಸುವ ಅನಿವಾರ್ಯತೆ ಎದುರಾಗಿದೆ.
ರಾಜ್ಯ ಸರ್ಕಾರ ಎಸ್.ಸಿ, ಎಸ್.ಟಿ. ಅಭ್ಯುದಯಕ್ಕೆ ಬಜೆಟ್ನಲ್ಲಿ ರೂ. ೩೪ ಸಾವಿರ ಕೋಟಿ ಅನುದಾನ ಮೀಸಲಿಟ್ಟಿದ್ದು, ಈಗಾಗಲೇ ಸುಮಾರು ರೂ.೧೧ ಸಾವಿರ ಕೋಟಿ ಹಣವನ್ನು ಬೇರೆ ಉದ್ದೇಶಕ್ಕೆ ಬಳಸಿಕೊಂಡಿರುವದು ಅಕ್ಷಮ್ಯ. ಈ ನಿಟ್ಟಿನಲ್ಲಿಯೂ ಹೋರಾಟ ಅನಿವಾರ್ಯವಾಗಿದೆ ಎಂದರು.
ಕೊಡಗು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಅಬ್ದುಲ್ ಲತೀಫ್ ಅವರು ಆದಿವಾಸಿಗಳು ಶೈಕ್ಷಣಿಕವಾಗಿ, ಆರ್ಥಿಕವಾಗಿ ಪ್ರಗತಿ ಸಾಧಿಸಲು ಸಂಘಟಿತ ಪ್ರಯತ್ನ ಮಾಡ ಬೇಕೆಂದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಪ್ರಮುಖ ಕೃಷ್ಣಪ್ಪ, ಜಿಲ್ಲಾ ಜನರಲ್ ವರ್ಕರ್ಸ್ ಯೂನಿಯನ್ನ ಹೆಚ್.ಬಿ. ರಮೇಶ್, ನಾಗರಹೊಳೆ ಜಮ್ಮಾ ಪಾಳೆ ಹಕ್ಕು ಸ್ಥಾಪನಾ ಸಮಿತಿ ಕಾರ್ಯದರ್ಶಿ ಶಿವು, ಯುವ ವಕೀಲರಾದ ಕುಮಾರಿ ವಿದ್ಯಾ ಮುಂತಾದವರು ಉಪಸ್ಥಿತರಿದ್ದರು.
ಕರ್ನಾಟಕ ರಾಜ್ಯ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಸಂಚಾಲಕ ಮತ್ತು ಕೊಡಗು ಜಿಲ್ಲಾ ಆದಿವಾಸಿ ಹಕ್ಕು ಸಮನ್ವಯ ಸಮಿತಿ ಅಧ್ಯಕ್ಷ ವೈ.ಕೆ. ಗಣೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಘಟನೆಯ ರಾಜ್ಯ ಸಹ ಸಂಚಾಲಕಿ ಪ್ರೇಮಾ ಸ್ವಾಗತ ಹಾಗೂ ಪುಷ್ಪಾ ವಂದಿಸಿದರು.