ಚೆಯ್ಯಂಡಾಣೆ ಆ. ೨ : ಕಾವೇರಿ ನದಿಗೆ ಹಾರಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಬಲಮುರಿ ಗ್ರಾಮದಲ್ಲಿ ನಡೆದಿದೆ.

ಅಯ್ಯಂಗೇರಿ ಸಣ್ಣಪುಲಿಕೋಟು ಗ್ರಾಮದ ನಿವಾಸಿ ಕುಡಿಯರ ಕರುಂಬಯ್ಯ (೭೭) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಕಾಲು ನೋವಿನಿಂದ ಬಳಲುತ್ತಿದ್ದ ಕರುಂಬಯ್ಯ ಮನೆಯಲ್ಲಿ ನಾಪೋಕ್ಲುವಿಗೆ ಹೋಗಿ ಬರುತ್ತೇನೆಂದು ಹೇಳಿ ಹೊರಟಿದ್ದರು ಎನ್ನಲಾಗಿದೆ. ಆದರೆ ಇವರು ಬಲಮುರಿ ಗ್ರಾಮದ ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸ್ಥಳಕ್ಕೆ ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕರುಂಬಯ್ಯ ಅವರ ಪುತ್ರ ಅಯ್ಯಪ್ಪ ನೀಡಿದ ದೂರಿನ ಅನ್ವಯ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.