ಚಿತ್ರ ವರದಿ: ಹೆಚ್.ಕೆ.ಜಗದೀಶ್

ಗೋಣಿಕೊಪ್ಪಲು, ಆ. ೨೮: ದ.ಕೊಡಗಿನ ಹೃದಯ ಭಾಗವಾಗಿರುವ ಟಿ.ಶೆಟ್ಟಿಗೇರಿ ಪಟ್ಟಣದಲ್ಲಿ ಅಮೃತ ಶಿಲೆಯಲ್ಲಿ ನಿರ್ಮಿಸಲಾದ ಯುದ್ಧ ಸ್ಮಾರಕವನ್ನು ವೀರಾಜಪೇಟೆ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಹಾಗೂ ದಾನಿಗಳಾದ ಕೈಬುಲಿರ ಬಿ.ಪಾರ್ವತಿ ಮತ್ತು ಗಣ್ಯರು ಲೋಕಾರ್ಪಣೆ ಮಾಡಿದರು.

ಟಿ.ಶೆಟ್ಟಿಗೇರಿಯಲ್ಲಿ ಸೋಮವಾರ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಮಾಜಿ ಸೈನಿಕ ಸಂಘದ ಅಧ್ಯಕ್ಷರಾದ ವಿಶ್ವನಾಥ್ ಹಾಗೂ ಪದಾಧಿಕಾರಿಗಳು ಮುಂಜಾನೆಯಿAದಲೇ ಪಟ್ಟಣದಲ್ಲಿ ಸೇರಿದ್ದರು. ಸೈನಿಕರ ನೆಲೆಬೀಡು ಎಂಬ ಹೆಗ್ಗಳಿಕೆ ಹೊಂದಿರುವ ಕೊಡಗು ಜಿಲ್ಲೆಯ ಅದರಲ್ಲೂ ವಿಶೇಷವಾಗಿ ಸೈನ್ಯಕ್ಕೆ ಅಪಾರ ಸಂಖ್ಯೆಯ ಸೈನಿಕರನ್ನು ನೀಡಿರುವ ದ.ಕೊಡಗಿನ ಹೃದಯ ಭಾಗವಾಗಿರುವ ಟಿ.ಶೆಟ್ಟಿಗೇರಿ ಪಟ್ಟಣದಲ್ಲಿ ಯುದ್ಧ ಸ್ಮಾರಕ ಅನಾವರಣವನ್ನು ಸಾರ್ವಜನಿಕರು ಸಾಕ್ಷೀಕರಿಸಿದರು.

ಪೊಲೀಸ್ ಬ್ಯಾಂಡ್, ಕೊಡವ ವಾಲಗ, ಪೊಲೀಸ್ ತುಕಡಿಯ ಗೌರವ ವಂದನೆ ನಡುವೆ ಯುದ್ಧ ಸ್ಮಾರಕ ಅದ್ಧೂರಿಯಾಗಿ ಅನಾವರಣಗೊಂಡಿತು.

ಕಾರ್ಯಕ್ರಮದಲ್ಲಿ ಸೇನೆಯ ನಿವೃತ್ತ ಅಧಿಕಾರಿಗಳು, ಸೈನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಸ್ಮಾರಕಕ್ಕೆ ‘ಸೆಲ್ಯುಟ್’ ಮಾಡಿ ಗೌರವ ಸಲ್ಲಿಸಿದರು. ಆರಂಭದಲ್ಲಿ ಅತಿಥಿಗಳಿಗೆ ಪೊಲೀಸರು ಗೌರವ ವಂದನೆ ಸಲ್ಲಿಸಿದರು. ಈ ವೇಳೆ ಪೊಲೀಸ್ ಬ್ಯಾಂಡ್ ಹಾಗೂ ಕೊಡಗಿನ ಸಾಂಪ್ರದಾಯಿಕ ವಾಲಗ ಮೊಳಗಿತು.

ಯುದ್ಧ ಸ್ಮಾರಕ ಅನಾವರಣಗೊಳಿಸಿದ ನಂತರ ಪಟ್ಟಣದ ಮುಖ್ಯ ರಸ್ತೆಯಲ್ಲಿ ಅತಿಥಿಗಳನ್ನು ಮೆರವಣಿಗೆಯಲ್ಲಿ ಕೊಡವ ಸಮಾಜಕ್ಕೆ ಕರೆತರಲಾಯಿತು. ತಳಿಯತಕ್ ಬೊಳ್ಚದೊಂದಿಗೆ ಮಹಿಳೆಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಟಿ. ಶೆಟ್ಟಿಗೇರಿ ಮಾಜಿ ಸೈನಿಕರ ಸಂಘವು ಸೈನಿಕರಿಗೆ ವಿಶೇಷ ಗೌರವ ನೀಡುವ ಸಲುವಾಗಿ ಕಳೆದ ಹಲವಾರು ವರ್ಷಗಳಿಂದ ಇಂತಹ ಕಾರ್ಯವನ್ನು ಕೈಗೆತ್ತಿಕೊಳ್ಳಲು ಸಂಘದ ಅಧ್ಯಕ್ಷ ಕಟ್ಟೆರ ಎ.ವಿಶ್ವನಾಥ್ ಅಧ್ಯಕ್ಷತೆಯಲ್ಲಿ ಯೋಜನೆ ರೂಪಿಸಿತ್ತು. ದೇಶದ ಸೈನ್ಯಕ್ಕೆ ಅಪಾರ ಸಂಖ್ಯೆಯಲ್ಲಿ ಸೈನಿಕರನ್ನು ನೀಡಿದ ಹೆಗ್ಗಳಿಕೆ ದ.ಕೊಡಗಿಗಿದೆ. ಈ ಹಿನ್ನೆಲೆಯಲ್ಲಿ ಯುದ್ಧ ಸ್ಮಾರಕವನ್ನು ದ. ಕೊಡಗಿನ ಟಿ. ಶೆಟ್ಟಿಗೇರಿ ಪಟ್ಟಣದಲ್ಲಿ ಸ್ಥಾಪಿಸಲು ಸಂಘವು ಕೈಗೊಂಡಿದ್ದ ಒಮ್ಮತದ ನಿರ್ಧಾರ ಇಂದು ಸಾಕಾರಗೊಂಡಿದೆ.

೫ ಲಕ್ಷ ವೆಚ್ಚದ ಯುದ್ಧ ಸ್ಮಾರಕವನ್ನು ಅಮೃತಶಿಲೆಯಲ್ಲಿ ನಿರ್ಮಿಸಲಾಗಿದ್ದು ನಾಗರಿಕರನ್ನು ಆಕರ್ಷಿಸುತ್ತಿವೆ, ಸೈನಿಕರ ಮೇಲೆ ಅಪಾರ ಗೌರವ ಮೂಡಿಸು ವಂತಿದೆ. ಕೊಡವ ಸಮಾಜದ ಸಭಾಂಗಣದಲ್ಲಿ ಆಯೋಜಿಸಿದ್ದ ಸಭಾ ಕಾರ್ಯ ಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಮಾತನಾಡಿದ

(ಮೊದಲ ಪುಟದಿಂದ) ಸಂಘದ ಅಧ್ಯಕ್ಷ ಕಟ್ಟೇರ ವಿಶ್ವನಾಥ್, ಸೈನಿಕರು ಸೇವೆ ಸಲ್ಲಿಸಿ ಬಂದ ನಂತರ ಅವರ ಅನುಕೂಲಕ್ಕಾಗಿ ಸರ್ಕಾರಿ ಜಾಗವನ್ನು ಮಂಜೂರು ಮಾಡಿಕೊಡುವ ನಿಯಮವಿದೆ. ಆದರೆ ಇಲ್ಲಿವರೆಗೂ ಸರ್ಕಾರಗಳು ಸೈನಿಕರ ಸಮಸ್ಯೆಗೆ ಪರಿಹಾರ ಕಲ್ಪಿಸುವ ಕೆಲಸ ಮಾಡಿಲ್ಲ. ಈ ನಿಟ್ಟಿನಲ್ಲಿ ನೂತನ ಶಾಸಕರು ವಿಶೇಷ ಗಮನ ಹರಿಸಿ ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ಕೋರಿ ಮನವಿ ಪತ್ರ ಸಲ್ಲಿಸಿದರು.

ಸೈನಿಕ ಸಂಘದ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಎ.ಎಸ್.ಪೊನ್ನಣ್ಣ, ಸೈನಿಕರು ಈ ದೇಶವನ್ನು ಕಾಯುವ ಮೂಲಕ ಜನರಿಗೆ ರಕ್ಷಣೆ ನೀಡುತ್ತಾ ಬಂದಿದ್ದಾರೆ. ಕೊಡಗಿನಿಂದ ಅಪಾರ ಸಂಖ್ಯೆಯಲ್ಲಿ ಸೈನಿಕರನ್ನು ದೇಶಕ್ಕೆ ನೀಡಿದ ಕೀರ್ತಿ ಇದ್ದು, ಸೈನಿಕರಿಗೆ ನಿವೃತ್ತಿ ನಂತರ ಅವರಿಗೆ ಸಿಗುವ ಸವಲತ್ತುಗಳು ಸಿಗಬೇಕು. ಆ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆಯಿತ್ತರು.

ಸೇನೆಯಲ್ಲಿ ವಿವಿಧ ಉನ್ನತ ಹುದ್ದೆಗಳನ್ನು ಅಲಂಕರಿಸಿ ನಿವೃತ್ತರಾದ ಅಧಿಕಾರಿಗಳನ್ನು ಸಂಘದ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ಸಂಘದ ಜಂಟಿ ಕಾರ್ಯದರ್ಶಿ ಅಪ್ಪಚಂಗಡ ಪಿ. ಮೋಟಯ್ಯ ಮಾಜಿ ಸೈನಿಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು.

ಕಾರ್ಯಕ್ರಮದ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ದಾನಿಗಳಾದ ಕೈಬುಲೀರ ಪಾರ್ವತಿ ಬೋಪಯ್ಯ, ಚಟ್ಟಂಗಡ ಪುಣ್ಯಾವತಿ ಚಿಣ್ಣಪ್ಪ, ಕಾನೂನು ಸಲಹೆಗಾರರಾದ ಮಂಡೇಟಿರ ಸುಬ್ರಮಣಿ, ಸಂಘದ ಹಿರಿಯ ಸದಸ್ಯರಾದ ಮಚ್ಚಮಾಡ ಮಾದಪ್ಪ, ಸಂಘದ ಮಾಜಿ ಕಾರ್ಯದರ್ಶಿ ಉಳುವಂಗಡ ಗಣಪತಿ ಹಾಗೂ ಚಂಗುಲAಡ ಅಶ್ವಿನಿ ಸತೀಶ್ ಅವರನ್ನು ಸನ್ಮಾನಿಸಲಾಯಿತು.

ಈ ವೇಳೆ ಮಾಜಿ ಸೈನಿಕರ ಸಂಘದ ಸದಸ್ಯರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು.

ವಿಶೇಷ ಆಹ್ವಾನಿತರಾಗಿ ಮಾಜಿ ಕೊಡಗು ಜಿಲ್ಲಾ ಸೈನಿಕರ ಸಂಘದ ಅಧ್ಯಕ್ಷ, ಮೇ.ಜ. ಬಾಚಮಂಡ ಕಾರ್ಯಪ್ಪ ಹಾಗೂ ಮಾಜಿ ಸೈನಿಕರ ಸಂಘದ ಕಾರ್ಯದರ್ಶಿ,ನಿವೃತ್ತ ಮೇಜರ್ ಒಡಿಯಂಡ ಚಿಂಗಪ್ಪ, ವೀರಚಕ್ರ ಪ್ರಶಸ್ತಿ ವಿಜೇತ ಮೇ.ಜ. ಕುಪ್ಪಂಡ ನಂಜಪ್ಪ ಭಾಗವಹಿಸಿ ಮಾತನಾಡಿ ಸೇನೆಯಲ್ಲಿ ಸೇವೆ ಸಲ್ಲಿಸಿದ ಸಂದರ್ಭದ ಅಮೂಲ್ಯ ಕ್ಷಣಗಳನ್ನು ಹಂಚಿಕೊAಡರು.

ವೇದಿಕೆಯಲ್ಲಿ ಸ್ಥಾಪಕ ಅಧ್ಯಕ್ಷರಾಗಿದ್ದ ಚಟ್ಟಂಡ ಕಾರ್ಯಪ್ಪ (ಸಾಬು), ಉಪಾಧ್ಯಕ್ಷರಾದ ಮನ್ನೇರ ಎ.ರಮೇಶ್, ಕಾರ್ಯದರ್ಶಿ ಚಂಗುಲAಡ ಎಂ.ಸತೀಶ್, ಖಜಾಂಜಿ ಚಟ್ಟಂಗಡ ಎಸ್. ವಿಜಯ ಕಾರ್ಯಪ್ಪ, ಜಂಟಿ ಕಾರ್ಯದರ್ಶಿ ಅಪ್ಪಚಂಗಡ ಪಿ.ಮೋಟಯ್ಯ, ನಿರ್ದೇಶಕರುಗಳಾದ ಮಿದೇರಿರ ಬಿ.ಸುರೇಶ್, ಮಂದಮಾಡ ಎ.ಬೆಳ್ಯಪ್ಪ, ಚೊಟ್ಟೆಯಂಡಮಾಡ ಯು.ಗೋಕುಲ, ಮಚ್ಚಮಾಡ ಎಸ್.ಮನುಕುಶಾಲಪ್ಪ, ಚಟ್ಟಂಗಡ ಸಿ.ಪುಣ್ಯವತಿ, ಕೈಬುಲಿರ ಬಿ.ಪಾರ್ವತಿ, ಕಾನೂನು ಸಲಹೆಗಾರರಾದ ಮಂಡೇಟಿರ ಎನ್.ಸುಬ್ರಮಣಿ ಹಾಗೂ ಹಿರಿಯ ಸಲಹೆಗಾರರಾದ ಕಾಳಿಮಾಡ ಮುತ್ತಣ್ಣ ಉಪಸ್ಥಿತರಿದ್ದರು. ಸಹ ಕಾರ್ಯದರ್ಶಿ ಅಪ್ಪಚ್ಚಂಗಡ ಮೋಟಯ್ಯ ನಿರೂಪಿಸಿ, ಚಂಗುಲAಡ ಅಶ್ವಿನಿ ಪ್ರಾರ್ಥಿಸಿ, ಖಜಾಂಜಿ ಚಟ್ಟಂಗಡ ವಿಜಯ್ ಕಾರ್ಯಪ್ಪ ವಂದಿಸಿದರು.

ಮಾಜಿ ಸೈನಿಕರ ಪತ್ನಿಯರ ಸಹಿತ ಸುಮಾರು ೪೫೦ ಸದಸ್ಯರನ್ನೊಳಗೊಂಡ ಈ ಸೈನಿಕ ಸಂಘವು ಸೈನಿಕರ ಸಹಾಯದಿಂದ ತನ್ನದೇ ಆದ ಸ್ವಂತ ಕಟ್ಟಡವನ್ನು ಹೊಂದಿದೆ. ಕಾರ್ಯಕ್ರಮದಲ್ಲಿ ಮಾಜಿ ಸೈನಿಕರ ಸಂಘದ ಸದಸ್ಯರು, ಮಹಿಳೆಯರು, ಗ್ರಾಮದ ಹಿರಿಯರು, ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.