ಮಡಿಕೇರಿ, ಆ. ೨೮: ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾದ ದಶಮಂಟಪ ಸಮಿತಿಯ ಸಭೆಯು ಇಂದು ರಾಜ್‌ದರ್ಶನ್ ಸಭಾಂಗಣದಲ್ಲಿ ನಡೆದು, ದಸರಾ ಸಮಿತಿಯ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗಿ ದಶಮಂಟಪ ಸಮಿತಿಯಿಂದ ಮತದಾನದ ಮೂಲಕ ನಗರಸಭಾ ಮಾಜಿ ಸದಸ್ಯ, ಕೋಟೆ ಮಾರಿಯಮ್ಮ ದೇವಾಲಯ ಸಮಿತಿಯ ಪ್ರಕಾಶ್ ಆಚಾರ್ಯ ಆಯ್ಕೆಯಾದರು.
ದಶಮಂಟಪ ಸಮಿತಿ ಅಧ್ಯಕ್ಷ ಮಂಜುನಾಥ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಾರ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾದ ಪ್ರಕಾಶ್ ಆಚಾರ್ಯ ಹಾಗೂ ಪತ್ರಕರ್ತ ಕಂಚಿಕಾಮಾಕ್ಷಿ ದೇವಾಲಯ ಸಮಿತಿಯ ಅನಿಲ್ ಎಚ್.ಟಿ. ಇವರುಗಳಿಗೆ ಮಾತುಕತೆ ಮೂಲಕ ಒಮ್ಮತದ ತೀರ್ಮಾನ ಕೈಗೊಳ್ಳಲು ಅವಕಾಶ ನೀಡಲಾಯಿತಾದರೂ, ಇಬ್ಬರೂ ಪಟ್ಟು ಬಿಡದ ಹಿನ್ನೆಲೆಯಲ್ಲಿ ಮತದಾನ ಪ್ರಕ್ರಿಯೆ ನಡೆಯಿತು. ಹತ್ತು ಮಂಟಪ ಸಮಿತಿಗಳ ೧೦ ಮತ ಹಾಗೂ ನಾಲ್ಕು ಕರಗ ಸಮಿತಿಗಳ ೪ ಮತ ಸೇರಿ ಒಟ್ಟು ೧೪ ಮತಗಳು ಚಲಾವಣೆಯಾದವು. ಈ ಪೈಕಿ ಅನಿಲ್ ಅವರಿಗೆ ೫ ಮತ ಲಭಿಸಿದರೆ, ಪ್ರಕಾಶ್ ಆಚಾರ್ಯ ೯ ಮತಗಳನ್ನು ಪಡೆಯುವ ಮೂಲಕ ಕಾರ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಆಯ್ಕೆಯಾದರು.
ದಶಮಂಟಪ ಸಮಿತಿಯಿಂದ ದಸರಾ ಸಮಿತಿಯ ಉಪಾಧ್ಯಕ್ಷ ಸ್ಥಾನಕ್ಕೆ ದಂಡಿನ ಮಾರಿಯಮ್ಮ ದೇವಾಲಯದ ಟಿ.ಹೆಚ್. ಉದಯಕುಮಾರ್ ಹಾಗೂ ಕೋಟೆ ಗಣಪತಿ ದೇವಾಲಯದ ಬಿ.ಎಂ. ರಾಜೇಶ್ ಆಕಾಂಕ್ಷಿಗಳಾಗಿದ್ದರು. ಮಾತುಕತೆಯ ಮೂಲಕ ಬಿ.ಎಂ. ರಾಜೇಶ್ ಆಯ್ಕೆಯಾದರು.
(ಮೊದಲ ಪುಟದಿಂದ) ದಸರಾ ಸಮಿತಿಯ ಸಹಕಾರ್ಯದರ್ಶಿ ಸ್ಥಾನಕ್ಕೆ ಕರವಲೆ ಭಗವತಿ ದೇವಾಲಯದ ಪೂಣಚ್ಚ ಹಾಗೂ ಕೋಟೆ ಮಾರಿಯಮ್ಮ ದೇವಾಲಯದ ಜಗದೀಶ್ ಆಕಾಂಕ್ಷಿಗಳಾಗಿದ್ದರು. ಈ ವೇಳೆ ಇಬ್ಬರು ಆಕಾಂಕ್ಷಿಗಳ ಅಪೇಕ್ಷೆಯಂತೆ ಚೀಟಿ ಎತ್ತುವ ಮೂಲಕ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಜಗದೀಶ್ ಆಯ್ಕೆಯಾದರು.
ಸಭೆಯಲ್ಲಿ ಮಾತನಾಡಿದ ದಶಮಂಟಪ ಸಮಿತಿ ಅಧ್ಯಕ್ಷ ಮಂಜುನಾಥ್, ದಸರಾ ಉತ್ಸವ ಸಂಬAಧ ನಗರದ ರಸ್ತೆಗಳ ದುರಸ್ಥಿ, ಗಿಡಗಂಟಿಗಳ ತೆರವು ಮಾಡುವ ಸಂಬAಧ ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ದಶಮಂಟಪ ಸಮಿತಿ ಗೌರವಾಧ್ಯಕ್ಷ ಮನುಮಂಜುನಾಥ್, ಉಪಾಧ್ಯಕ್ಷ ನಂಜುAಡ, ಖಜಾಂಚಿ ತಿಮ್ಮಯ್ಯ, ಕೋದಂಡರಾಮ ಮಂಟಪ ಸಮಿತಿ ಅಧ್ಯಕ್ಷ ಗೋಪಿನಾಥ್ ಉಪಸ್ಥಿತರಿದ್ದರು. ದಶಮಂಟಪ ಸಮಿತಿ ಪ್ರಧಾನ ಕಾರ್ಯದರ್ಶಿ ಜಗದೀಶ್ ನಿರೂಪಿಸಿ, ವಂದಿಸಿದರು.