ಮಡಿಕೇರಿ, ಆ. ೨೭: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಭಾಗಮಂಡಲ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಇವರ ಸಂಯುಕ್ತ ಆಶ್ರಯದಲ್ಲಿ ದಿ. ಶಾಂತಮಲ್ಲಸ್ವಾಮಿ ದತ್ತಿ ಮತ್ತು ದಿ.ಕೆ.ಟಿ ಸುಬ್ಬರಾವ್ ದತ್ತಿ ಉಪನ್ಯಾಸ ಹಾಗೂ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮವು ಚೇರಂಬಾಣೆಯ ಕೊಟ್ಟೂರು ಗ್ರಾಮದ ಶ್ರೀ ರಾಜರಾಜೇಶ್ವರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ತಾ.೨೯ರಂದು ಬೆಳಿಗ್ಗೆ ೧೧ ಗಂಟೆಗೆ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ.ಪಿ. ಕೇಶವ ಕಾಮತ್ ಅವರು ವಹಿಸಲಿದ್ದು, ಉದ್ಘಾಟನೆಯನ್ನು ಶ್ರೀ ರಾಜರಾಜೇಶ್ವರಿ ಎಜುಕೇಶನ್ ಟ್ರಸ್ಟಿನ ಕಾರ್ಯದರ್ಶಿಗಳು ಹಾಗೂ ವ್ಯವಸ್ಥಾಪಕರಾದ ನಾಟೋಳಂಡ. ಡಿ. ವಿಜು ನೆರವೇರಿಸಲಿದ್ದಾರೆ.

ಕೊಡಗಿನ ವೀರಶೈವ ಅರಸರ ಕುರಿತು ಉಪನ್ಯಾಸವನ್ನು ಶಿಕ್ಷಕರಾದ ಕೆ.ಬಿ ಉಷಾರಾಣಿ ಮತ್ತು ಕನ್ನಡ ಸಾಹಿತ್ಯದಲ್ಲಿ ಕೊಡಗು ಕುರಿತು ಉಪನ್ಯಾಸವನ್ನು ಭಾಗಮಂಡಲದ ಶ್ರೀ ಕಾವೇರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾದ ವಿ.ವಿ ಶಿವಪ್ಪ ನೀಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಬೆಂಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪಟ್ಟಮಾಡ ಮಿಲನ್ ಮುತ್ತಣ್ಣ, ರಾಜರಾಜೇಶ್ವರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಕೆ.ಎಸ್. ಕವನ್ ಕುಮಾರ್, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕಡ್ಲೇರ ತುಳಸಿ ಮೋಹನ್, ಭಾಗಮಂಡಲ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುನಿಲ್ ಪತ್ರಾವೊ, ಭಾಗಮಂಡಲ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ಎ.ಎಸ್. ಶ್ರೀಧರ್ ಭಾಗವಹಿಸಲಿದ್ದಾರೆ.

ಚೇರಂಬಾಣೆಯ ಸಾಹಿತಿಗಳಾದ ಕು. ಚೀರಮ್ಮನ ವಾಣಿ ಚೆಂಗುಮಯ್ಯ ರವರ ತಾಳ್ಮೆಯ ಚಿಗುರು ಕವನ ಸಂಕಲನವು ಬಿಡುಗಡೆಗೊಳ್ಳಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಗೌರವ ಕಾರ್ಯದರ್ಶಿ ಎಸ್.ಐ. ಮುನೀರ್ ಅಹ್ಮದ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.