ಸೋಮವಾರಪೇಟೆ, ಆ. ೨೭ : ತೋಟಗಾರಿಕಾ ಇಲಾಖೆ ವತಿಯಿಂದ ಸಮೀಪದ ಹರಗ ಗ್ರಾಮದಲ್ಲಿ ಕಾಳುಮೆಣಸು ಬಳ್ಳಿಗೆ ಹರಡುವ ರೋಗಗಳ ಹತೋಟಿ ಕುರಿತ ಮಾಹಿತಿ ಕಾರ್ಯಾಗಾರ ನಡೆಯಿತು.

ತೋಟಗಾರಿಕಾ ಇಲಾಖೆಯ ಹಿರಿಯ ಅಧಿಕಾರಿಗಳು ತೋಟಗಳಿಗೆ ತೆರಳಿ ಕೃಷಿಕರಿಗೆ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು. ಹವಾಮಾನ ವೈಪರೀತ್ಯ ಉಂಟಾಗುವ ಸಂದರ್ಭ ಕೈಗೊಳ್ಳಬೇಕಾದ ಕ್ರಮಗಳು, ಗೊಬ್ಬರ ಹಾಗೂ ಕ್ರಿಮಿನಾಶಕಗಳು, ಆರೋಗ್ಯವಂತ ಬಳ್ಳಿಗಳ ಆರೈಕೆ ಸೇರಿದಂತೆ ಇನ್ನಿತರ ಸುಧಾರಿತ ಕ್ರಮಗಳ ಬಗ್ಗೆ ಕೃಷಿಕರಿಗೆ ಮಾಹಿತಿ ಒದಗಿಸಿದರು.

ನಂತರ ಆಸಕ್ತ ಬೆಳೆಗಾರರಿಗೆ ಜೇನು ಕೃಷಿ ಕೈಗೊಳ್ಳುವ ಬಗ್ಗೆ ಮಾಹಿತಿ ನೀಡಲಾಯಿತು. ನೈಸರ್ಗಿಕವಾಗಿ ಹುಳುಗಳ ಸಾಕಾಣೆ, ಗೂಡಿನ ವ್ಯವಸ್ಥೆ, ಮಾರುಕಟ್ಟೆ, ಬೇಡಿಕೆಗಳ ಬಗ್ಗೆ ಅಧಿಕಾರಿಗಳು ಮಾಹಿತಿ ಒದಗಿಸಿದರು.

ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಮಂಜುನಾಥ್, ತಾಂತ್ರಿಕ ಸಲಹೆಗಾರ ಪ್ರಸಾದ್, ತಾಕೇರಿ ರಾಜು, ಶಾಂತಳ್ಳಿ ಹೇಮಂತ್ ಅವರುಗಳು ಜೇನುಕೃಷಿಯ ಬಗ್ಗೆ ಮಾಹಿತಿ ನೀಡಿದರು. ತಾ.ಪಂ. ಮಾಜೀ ಸದಸ್ಯ ಧರ್ಮಪ್ಪ, ಕೃಷಿಕರಾದ ಕುಶಾಲಪ್ಪ, ಕಾರ್ತಿಕ್, ಶರಣ್ ಗೌಡ, ಶರತ್, ನಾಗೇಶ್, ಬಿ.ಎ. ಗಣಪತಿ, ದಿಲೀಪ್, ರಮೇಶ್ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.