ಅಮ್ಮತ್ತಿ, ಆ. ೨೭: ೨೦೨೩-೨೪ನೇ ಸಾಲಿನ ಪ್ರಾಥಮಿಕ ಶಾಲಾ ಹಂತದ ಅಮ್ಮತ್ತಿ ವಲಯ ಮಟ್ಟದ ಕ್ರೀಡಾಕೂಟವು ನೇತಾಜಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ನಡೆಯಿತು. ಶಾಲೆಯ ಆಡಳಿತ ಮಂಡಳಿಯ ಕಾರ್ಯದರ್ಶಿ ಅರ್ಶದ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಗಳಾಗಿ ವೀರಾಜಪೇಟೆ ತಾಲೂಕಿನ ದೈಹಿಕ ಶಿಕ್ಷಣ ಪರಿವೀಕ್ಷಕಿ ಗಾಯತ್ರಿ ಮತ್ತು ಅಮ್ಮತ್ತಿ ಕ್ಲಸ್ಟರಿನ ಸಂಪನ್ಮೂಲ ವ್ಯಕ್ತಿ ಪ್ರವೀಣ್, ಪಾಲಿಬೆಟ್ಟ ಕ್ಲಸ್ಟರಿನ ಸಂಪನ್ಮೂಲ ವ್ಯಕ್ತಿ ಕರುಂಬಯ್ಯ, ಶಾಲಾ ಮುಖ್ಯ ಶಿಕ್ಷಕಿ ಪೌಜಿ಼ಯ, ಅಮ್ಮತ್ತಿ ವಲಯದ ಕಾರ್ಯದರ್ಶಿ ಕುಟ್ಟಪ್ಪ, ವೀರಾಜಪೇಟೆಯ ವಿಠಲ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಅಶ್ವತ್ ಬಿ.ಎನ್. ಅವರು ಹಾಜರಿದ್ದರು. ಗಾಯತ್ರಿ ಅವರು ಧ್ವಜಾರೋಹಣವನ್ನು ಮಾಡಿ ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಿದರು. ಬಳಿಕ ಮಕ್ಕಳನ್ನು ಉದ್ದೇಶಿಸಿ, ಕ್ರೀಡೆಯ ಮಹತ್ವವನ್ನು ಹೇಳಿ, ಸೋಲು ಗೆಲುವು ಎರಡನ್ನು ಸಮಚಿತ್ತದಿಂದ ಸ್ವೀಕರಿಸುವಂತೆ ನುಡಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ಅರ್ಶದ್ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಕ್ರೀಡೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಸುತ್ತದೆ ಎಂದು ಹೇಳಿದರು. ಚೆಂಡನ್ನು ಎಸೆಯುವುದರ ಮೂಲಕ ಗಾಯತ್ರಿ ಅವರು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಪ್ರಾರ್ಥನೆಯನ್ನು ವಿದ್ಯಾರ್ಥಿನಿಯರಾದ ದೀಕ್ಷಿತ ಬಿ.ಎಸ್., ಶ್ವೇತ ಹೆಚ್.ಎಸ್. ನೆರವೇರಿಸಿದರು, ದಿವ್ಯ ಸಿ.ಎಸ್. ಸ್ವಾಗತಿಸಿ, ಮಂಜುಳ ಬಿ. ವಂದಿಸಿದರು, ಅನ್ನಮ್ಮ, ಜಾನ್ಸಿ ಕೆ.ಜಿ. ನಿರೂಪಿಸಿದರು.