ಅಥೆನ್ಸ್, ಆ. ೨೬: ಶುಕ್ರವಾರ ಅಥೆನ್ಸ್ನಲ್ಲಿ ನಡೆದ ವ್ಯಾಪಾರ ಭೋಜನಕೂಟದಲ್ಲಿ ಭಾರತ ಮತ್ತು ಗ್ರೀಸ್‌ನ ವ್ಯಾಪಾರ ನಿಯೋಗಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಉಭಯ ದೇಶಗಳ ನಡುವಿನ ಸಂಬAಧದಲ್ಲಿನ ಸಕಾರಾತ್ಮಕ ಲಾಭವನ್ನು ಪಡೆದುಕೊಳ್ಳುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮೋದಿ ಅವರು ತಮ್ಮ ಭಾಷಣದಲ್ಲಿ ತಮ್ಮ ಸರ್ಕಾರ ಜಾರಿಗೆ ತಂದ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯ ಕುರಿತು ಮಾತನಾಡಿದಾಗ ಮೊದಲು ಕರ್ನಾಟಕದ ಕೊಡಗಿನಲ್ಲಿ ಕಾಫಿಯನ್ನು ಉತ್ಪನ್ನವನ್ನಾಗಿ ಆಯ್ಕೆ ಮಾಡಿದ ಬಗ್ಗೆ ಉಲ್ಲೇಖಿಸಿದ್ದಾರೆ. ಮೋದಿ ಅವರ ಭಾಷಣದ ೫೦ ಸೆಕೆಂಡುಗಳ ವೀಡಿಯೋ ಕ್ಲಿಪ್ ಜಿಲ್ಲಾದ್ಯಂತ ಶನಿವಾರ ವೈರಲ್ ಆಗಿದೆ.
ನಂತರ ಅಮೃತಸರ ಜಿಲ್ಲೆಯ ಉಪ್ಪಿನಕಾಯಿ ಮತ್ತು ಭಿಲ್ವಾರ ಜಿಲ್ಲೆಯ ಜೋಳದ ಉತ್ಪನ್ನ ಕುರಿತು ಪ್ರಸ್ತಾಪಿಸಿದ್ದಾರೆ.
ಈ ಯೋಜನೆಯನ್ನು ೨೦೧೮ ರಲ್ಲಿ ಮೊದಲ ಬಾರಿಗೆ ಉತ್ತರ ಪ್ರದೇಶ ರಾಜ್ಯ ಸರ್ಕಾರವು ಜಾರಿಗೆ ತಂದಿದ್ದು ಇದನ್ನು ೭೫ ಜಿಲ್ಲೆಗಳಿಗೆ ವಿಸ್ತರಿಸಿತ್ತು. ನಂತರ ಕೇಂದ್ರ ಸರ್ಕಾರ ಈ ಯೋಜನೆಯನ್ನು ದೇಶಾದ್ಯಂತ ಆಯ್ದ ಜಿಲ್ಲೆಗಳಿಗೆ ವಿಸ್ತರಿಸಿತು. ಈ ಯೋಜನೆಯಿಂದ ರೈತರ ಉತ್ಪನ್ನಗಳಿಗೆ ಹೆಚ್ಚಿನ ಬೆಲೆ ದೊರಕಿ ವಿದೇಶಗಳಿಗೆ ರಫ್ತು ಮಾಡುವ ಅವಕಾಶ ಹೆಚ್ಚಾಗಲಿದೆ ಎಂದು ಮೋದಿ ಹೇಳಿದರು. ತಮ್ಮ ಗ್ರೀಸ್ ಭೇಟಿಯನ್ನು ಮುಕ್ತಾಯಗೊಳಿಸುವ ಮೊದಲು ಅಥೆನ್ಸ್ ಕನ್ಸರ್ವೇಟೋಯರ್‌ನಲ್ಲಿ ಆಯೋಜಿಸಲಾದ ಸಮುದಾಯ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಭಾರತೀಯ ಸಮುದಾಯದ ಸದಸ್ಯರೊಂದಿಗೆ ಸಂವಾದ ನಡೆಸಿದರು.
- ಕೋವರ್‌ಕೊಲ್ಲಿ ಇಂದ್ರೇಶ್