ಮಡಿಕೇರಿ, ಆ. ೨೬: ಚೀನಾದ ಹ್ಯಾಂಗ್‌ಝಾನಲ್ಲಿ ಸೆ. ೨೩ರಿಂದ ನಡೆಯಲಿರುವ ಈ ಬಾರಿಯ ಏಷ್ಯನ್ ಗೇಮ್ಸ್ನಲ್ಲಿ ಪಾಲ್ಗೊಳ್ಳಲಿರುವ ಭಾರತದ ಕ್ರೀಡಾಪಟುಗಳ ಪಟ್ಟಿಯನ್ನು ಕ್ರೀಡಾ ಸಚಿವಾಲಯ ಶುಕ್ರವಾರ ಬಿಡುಗಡೆ ಮಾಡಿದೆ. ಈ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ದೇಶದ ೬೩೪ ಕ್ರೀಡಾಪಟುಗಳು ಅವಕಾಶ ಪಡೆದಿದ್ದು ಇವರ ಪೈಕಿ ಕೊಡಗು ಜಿಲ್ಲೆಯವರಾದ ಆರು ಕ್ರೀಡಾಪಟುಗಳು ವಿವಿಧ ಕ್ರೀಡೆಗಳಲ್ಲಿ ದೇಶವನ್ನು ಪ್ರತಿನಿಧಿಸು ತ್ತಿದ್ದಾರೆ. ಕ್ರೀಡಾ ಜಿಲ್ಲೆ ಖ್ಯಾತಿಯ ಪುಟ್ಟ ಕೊಡಗಿನ ೬ ಮಂದಿ ಈ ಬಾರಿ ಒಟ್ಟಿಗೆ ಏಷ್ಯನ್ ಗೇಮ್ಸ್ಗೆ ಅವಕಾಶ ಪಡೆದಿರು ವುದು ಜಿಲ್ಲೆಗೆ ಹೆಮ್ಮೆಯ ವಿಚಾರವಾಗಿದೆ.

ಬ್ಯಾಡ್‌ಮಿಂಟನ್‌ನಲ್ಲಿ ಮಾಚಿಮಂಡ ಅಶ್ವಿನಿ ಪೊನ್ನಪ್ಪ, ಸ್ಕಾ÷್ವಷ್‌ನಲ್ಲಿ ಕುಟ್ಟಂಡ ಜೋಶ್ನಾ ಚಿಣ್ಣಪ್ಪ, ಟೆನ್ನಿಸ್‌ನಲ್ಲಿ ಮಚ್ಚಂಡ ರೋಹನ್ ಬೋಪಣ್ಣ, ಸೆಯ್ಲಿಂಗ್‌ನಲ್ಲಿ ಕೇಳಪಂಡ ಗಣಪತಿ, ಮೆರಥಾನ್‌ನಲ್ಲಿ ಅಪ್ಪಚಂಗಡ ಬೆಳ್ಯಪ್ಪ ಹಾಗೂ ಅಥ್ಲೆಟಿಕ್ಸ್ನಲ್ಲಿ ಯುವ ಪ್ರತಿಭೆಯಾಗಿ ಇದೇ ಮೊದಲ ಬಾರಿಗೆ ತೀತರಮಾಡ ಸಿಂಚಲ್ ಕಾವೇರಮ್ಮ ಅವರುಗಳು ದೇಶವನ್ನು ಪ್ರತಿನಿಧಿಸುತ್ತಿದ್ದಾರೆ.

೨೦೧೮ರಲ್ಲಿ ನಡೆದ ಜಕಾರ್ತ ಏಷ್ಯನ್ ಗೇಮ್ಸ್ನಲ್ಲಿ ಭಾರತದ ೫೭೨ ಮಂದಿ ಪಾಲ್ಗೊಂಡಿದ್ದರು. ಇದೀಗ ೬೩೪ ಮಂದಿ ೨೦೨೩ರ ಕ್ರೀಡಾ ಕೂಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಭಾರತ ಒಲಂಪಿಕ್ಸ್ ಸಂಸ್ಥೆ (ಐ.ಓ.ಎ.) ಒಟ್ಟು ೮೫೦ ಕ್ರೀಡಾಪಟುಗಳ ಹೆಸರನ್ನು ಶಿಫಾರಸ್ಸು ಮಾಡಿದ್ದು ಕ್ರೀಡಾ ಸಚಿವಾಲಯ ೬೩೪ ಮಂದಿಯನ್ನು ಅಂತಿಮಗೊಳಿಸಿದೆ.