ಗೋಣಿಕೊಪ್ಪಲು, ಆ. ೨೬: ಕಾಡಾನೆಗಳ ಚಲನದ ಬಗ್ಗೆ ನಿಗಾವಹಿಸಲು ರೇಡಿಯೋ ಕಾಲರ್ ಅಳವಡಿಸುವ ಯೋಜನೆಯಲ್ಲಿ ಮೊದಲ ಹಂತದಲ್ಲಿ ೩೦ ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸಲಾಗುತ್ತದೆ ಎಂದು ಕೊಡಗು ಜಿಲ್ಲೆಗೆ ಪ್ರಥಮ ಬಾರಿಗೆ ಆಗಮಿಸಿದ ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಅವರು ತಿಳಿಸಿದರು. ಅಲ್ಲದೆ, ತಿತಿಮತಿ ಬಳಿ ೫ ಕಿ.ಮೀ. ವರೆಗೆ ರೈಲ್ವೆ ಬ್ಯಾರಿಕೇಡ್ ಅಳವಡಿಸಲು ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು.

ಶ್ರೀಮಂಗಲ ಹೋಬಳಿಯ ಕಾಯಿಮನೆಗೆ ಸಚಿವರು ಆಗಮಿಸುತ್ತಿದ್ದಂತೆಯೇ ಸ್ಥಳೀಯ ಗ್ರಾಮಸ್ಥರು ಮುಖ್ಯ ರಸ್ತೆಯಲ್ಲಿ ನಿಲ್ಲಿಸಿ ಮಾತನಾಡಿಸಿದಾಗ ಅವರು ಮೇಲಿನ ವಿಷಯದ ಬಗ್ಗೆ ತಿಳಿಸಿದರು.

ಶ್ರೀಮಂಗಲ ಹೋಬಳಿಯಲ್ಲಿ ಸುಮಾರು ೬೦ ಕಾಡಾನೆಗಳು ಕಾಫಿ ತೋಟಗಳಲ್ಲಿ ವಾಸವಾಗಿದ್ದು, ರೈತರಿಗೆ, ಬೆಳೆಗಾರರಿಗೆ ಹಾಗೂ ಕಾರ್ಮಿಕರಿಗೆ ನಿರಂತರ ಉಪಟಳ ಮಾಡುತ್ತಿರುವುದಾಗಿ ಮಾಜಿ ತಾ.ಪಂ.ಸದಸ್ಯ ಪಲ್ವೀನ್ ಪೂಣಚ್ಚ ಗಮನ ಸೆಳೆದರು.

ಈ ವೇಳೆ ಸಚಿವರು ಉತ್ತರಿಸಿ, ಕಾಡಾನೆ ಸಮಸ್ಯೆ ಪರಿಹಾರಕ್ಕೆ ಶಾಶ್ವತ ಪರಿಹಾರ ನೀಡಲು ಬಂದಿದ್ದೇನೆ. ಸಮಸ್ಯೆಗಳ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದ ಅವರು, ತುಂಬಾ ತೊಂದರೆ ನೀಡುತ್ತಿರುವ ಕಾಡಾನೆಗಳನ್ನು ಪತ್ತೆ ಹಚ್ಚಿ ರೇಡಿಯೋ ಕಾಲರ್ ಅಳವಡಿಸಲಾಗುತ್ತದೆ ಎಂದು ಸಚಿವರು ಗ್ರಾಮಸ್ಥರ ಪ್ರಶ್ನೆಗಳಿಗೆ ಉತ್ತರಿಸಿದರು.

ಸಚಿವರೊಂದಿಗೆ ಶಾಸಕ ಪೊನ್ನಣ್ಣ, ಕೆಪಿಸಿಸಿ ರಾಜ್ಯ ವಕ್ತಾರ ಸಂಕೇತ್ ಪೂವಯ್ಯ, ಡಿಸಿಸಿ ಅಧ್ಯಕ್ಷ ಧರ್ಮಜ ಉತ್ತಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ತಿತಿಮತಿ ಬಳಿ ೫ ಕಿ.ಮೀ. ರೈಲ್ವೆ ಬ್ಯಾರಿಕೇಡ್

ಹಲವು ದಶಕಗಳಿಂದ ಕಾಡಾನೆ ಸಮಸ್ಯೆ ಎದುರಿಸುತ್ತಿರುವ ತಿತಿಮತಿ ಗ್ರಾ.ಪಂ.ವ್ಯಾಪ್ತಿಯ ಆಯಿರಸುಳಿ ಗಿರಿಜನರ ಹಾಡಿ ಬಳಿ ತೆರಳಿದ ಅರಣ್ಯ ಸಚಿವರು ಗಿರಿಜನರ ಸಮಸ್ಯೆ ಆಲಿಸಿದರು.

ಈ ವೇಳೆ ಗಿರಿಜನ ಮುಖಂಡರಾದ ಚುಬ್ರು, ಪಿ.ಆರ್. ಪಂಕಜ,

ಪಿ.ಸಿ. ರಾಮು ಹಾಗೂ ಸಿದ್ದಪ್ಪ ಸಚಿವರ ಗಮನ ಸೆಳೆದರು.

ನಮ್ಮನ್ನು ಸೇರಿಸಿ ರೈಲ್ವೆ ಬ್ಯಾರಿಕೇಡ್ ಹಾಕಿದ್ದಾರೆ. ಇದರಿಂದ ಕಾಡಾನೆ ಸಮಸ್ಯೆ ಬಗೆಹರಿದಿಲ್ಲ, ಆನೆ ಕಂದಕ ಇರುವ ಬದಿಯಲ್ಲಿ ಬ್ಯಾರಿಕೇಡ್ ಅಳವಡಿಸಿದರೆ ಸಮಸ್ಯೆ ನೀಗಲಿದೆ ಎಂದು ಸಚಿವರ ಗಮನಕ್ಕೆ ತಂದರು.

ಈ ವೇಳೆ ಸಚಿವರ ಮಾತಿಗೆ ಉತ್ತರಿಸಿದ

(ಮೊದಲ ಪುಟದಿಂದ) ನಾಗರಹೊಳೆ ಅರಣ್ಯ ವಿಭಾಗದ ಡಿಸಿಎಫ್ ಹರ್ಷಕುಮಾರ್ ಈಗಾಗಲೇ ೨.೫ ಕಿ.ಮೀ. ರೈಲ್ವೆ ಬ್ಯಾರಿ ಕೇಡ್ ಅಳವಡಿಸಲು ಅನುದಾನ ಲಭ್ಯವಿದೆ. ಆದಿವಾಸಿಗಳ ಸಲಹೆಯಂತೆ ಕಾಮಗಾರಿ ಪೂರೈಸಲು ಇನ್ನೂ ಹೆಚ್ಚುವರಿ ೫ ಕಿ.ಮೀ. ಆಗಲಿದೆ ಎಂದು ಸಮಜಾಯಿಷಿಕೆ ನೀಡಿದರು. ಸ್ಥಳದಲ್ಲಿದ್ದ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಾದ ಜಾವೇದ್ ಅಕ್ತರ್ ಅವರಿಗೆ ಈ ಬಗ್ಗೆ ತುರ್ತು ಕ್ರಮ ವಹಿಸಲು ನಿರ್ದೇಶನ ನೀಡಿದರು.

ಕಾಮಗಾರಿಗೆ ಬೇಕಾದ ಹೆಚ್ಚುವರಿ ಅನುದಾನ ಬಿಡುಗಡೆ ಮಾಡುವುದಾಗಿ ಸಚಿವರು ಈ ವೇಳೆ ಭರವಸೆ ನೀಡಿದರು.

ನಿರ್ವಹಣೆ ಇಲ್ಲದ ಸೋಲಾರ್ ತಂತಿಗಳನ್ನು ಹಾಗೂ ಅರ್ಧಕ್ಕೆ ನಿಂತಿರುವ ರೈಲ್ವೆ ಬ್ಯಾರಿಕೇಡ್ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು.

ಈ ಭಾಗದ ಗಿರಿಜನರು ದಶಕಗಳಿಂದ ಎದುರಿಸುತ್ತಿರುವ ಸಮಸ್ಯೆಗಳನ್ನು ಶಾಸಕ ಎ.ಎಸ್.ಪೊನ್ನಣ್ಣ ಸಚಿವರಿಗೆ ಮನದಟ್ಟು ಮಾಡಿದರು.

ಈ ವೇಳೆ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ತಿತಿಮತಿ ವಲಯ ಕಾಂಗ್ರೆಸ್ ಅಧ್ಯಕ್ಷ ಕಾಂಗ್ರೆಸ್ ಮುಖಂಡರಾದ ಮಣಿಕುಂಞ, ವಿನಯ್ ಕುಮಾರ್, ಶಿವಕುಮಾರ್, ಡಾ.ಮದ್ಯಸ್ತ, ರವಿನಾ, ಗ್ರಾ.ಪಂ. ಅಧ್ಯಕ್ಷರು, ಸದಸ್ಯರು ಹಾಜರಿದ್ದರು.

ಮೃತ ಆಯಿಷಾ ಕುಟುಂಬಕ್ಕೆ ಸಾಂತ್ವನ

ಕಳೆದ ಕೆಲದಿನಗಳ ಹಿಂದೆ ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟ ಆಯಿಷಾ ಎಂಬ ಮಹಿಳೆಯ ಮನೆಯಾದ ಸಿದ್ದಾಪುರ ಬಳಿಯ ಮಾಲ್ದಾರೆ ಗ್ರಾ.ಪಂ.ವ್ಯಾಪ್ತಿಯ ಮಟ್ಟಂ ಗ್ರಾಮಕ್ಕೆ ತೆರಳಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಮನೆಯವರಿಗೆ ಸಾಂತ್ವನ ಹೇಳಿದರು.

ಈ ವೇಳೆ ಮಾತನಾಡಿದ ಸಚಿವರು, ಘಟನೆ ಬಗ್ಗೆ ವಿಷಾದವಿದೆ. ಹಾಗಾಗಿ ಮಾಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಿರುವುದಾಗಿ ತಿಳಿಸಿದರು.

ಭೇಟಿ ವೇಳೆ ಶಾಸಕ ಎ.ಎಸ್. ಪೊನ್ನಣ್ಣ, ಕೆಪಿಸಿಸಿ ರಾಜ್ಯ ವಕ್ತಾರ ಸಂಕೇತ್ ಪೂವಯ್ಯ, ಡಿಸಿಸಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮತ್ತಿತರ ನಾಯಕರು ಹಾಜರಿದ್ದರು.

ಕಾರ್ಯ ನಿರ್ವಹಿಸಿದ ಸೋಲಾರ್ ತಂತಿ...!

ಮಾಲ್ದಾರೆ ಪಂಚಾಯಿತಿ ವ್ಯಾಪ್ತಿಯ ೪ ಗೇಟ್‌ಗಳು ಹಾಗೂ ಸೋಲಾರ್ ತಂತಿಗಳು ಕಾರ್ಯ ನಿರ್ವಹಣೆ ಮಾಡುತ್ತಿಲ್ಲ ಎಂಬ ಸಾರ್ವಜನಿಕರ ದೂರಿನ ಸರ್ಕಾರದ ವತಿಯಿಂದ ತಮ್ಮನ್ನು ಭೇಟಿ ಮಾಡಿ ಸಾಂತ್ವನ ಹೇಳಲು ಬಂದಿರುವುದಾಗಿ ತಿಳಿಸಿದರು.

ಈ ಭಾಗದ ವಿದ್ಯಾರ್ಥಿಗಳು ಶಾಲೆಗೆ ಬಾಡಿಗೆ ವಾಹನದಲ್ಲಿ ಪ್ರತಿನಿತ್ಯ ತೆರಳುವ ವ್ಯವಸ್ಥೆ ಮಾಡಲಾಗಿದೆ. ಬಾಕಿ ಉಳಿದಿರುವ ಹಣವನ್ನು ಮಂಜೂರು ಮೇರೆಗೆ ಶಾಸಕ ಪೊನ್ನಣ್ಣ ಎರಡು ದಿನಗಳ ಹಿಂದೆ ಭೇಟಿ ನೀಡಿದ್ದರು.

ಆ ವೇಳೆ ಈ ಭಾಗದಲ್ಲಿ ಸೋಲಾರ್ ತಂತಿಗಳು ಕಾರ್ಯ ನಿರ್ವಹಿಸುತ್ತಿರಲಿಲ್ಲ. ಅಲ್ಲದೇ ಕಾಡಾನೆ ನುಸುಳುವಿಕೆಯನ್ನು ತಡೆಯಲು ಅಳವಡಿಸಿದ್ದ ಕಬ್ಬಿಣದ ಗೇಟ್ ಮೂಲೆ ಸೇರಿತ್ತು.

ಈ ವಿಚಾರವನ್ನು ಶಾಸಕ ಪೊನ್ನಣ್ಣ ಸಚಿವರ ಗಮನಕ್ಕೆ ತಂದಿದ್ದರು. ಸಚಿವರ ಭೇಟಿ ವೇಳೆ ಸೋಲಾರ್ ಬೇಲಿಗಳು ಕಾರ್ಯನಿರ್ವಹಣೆ ಮಾಡುತ್ತಿದ್ದವು. ಇದನ್ನು ಕಂಡು ಶಾಸಕರು ಆಶ್ಚರ್ಯಗೊಂಡರು.

ಸಚಿವರ ಆಗಮನದ ಹಿನ್ನೆಲೆಯಲ್ಲಿ ಸೋಲಾರ್ ತಂತಿಗಳು ಕೆಲಸ ನಿರ್ವಹಿಸುತ್ತಿದೆ ಎಂದು ಅಲ್ಲಿದ್ದ ಗ್ರಾಮಸ್ಥರು ಸಚಿವರಿಗೆ ಮಾಹಿತಿ ಒದಗಿಸಿದರು.

ಸ್ಥಳೀಯ ಗ್ರಾಮಸ್ಥರು ಹಲವು ಸಮಸ್ಯೆ ಬಗ್ಗೆ ಲಿಖಿತ ಅರ್ಜಿ ನೀಡಿದರು. ಸಮಸ್ಯೆಗೆ ಪರಿಹಾರ ಒದಗಿಸುವ ಭರವಸೆ ನೀಡಿದರು.

ಭೇಟಿ ವೇಳೆ ಗ್ರಾ.ಪಂ.ಅಧ್ಯಕ್ಷರು, ಸದಸ್ಯರು, ಅರಣ್ಯ ಇಲಾಖೆಯ ಅಧಿಕಾರಿಗಳು, ಪಕ್ಷದ ಮುಖಂಡರು ಹಾಜರಿದ್ದರು.

ಕಾಡಾನೆ ದಾಳಿಯಿಂದ ಮೃತಪಟ್ಟ ಕಟ್ಟೆಮಾಡು ಗ್ರಾಮದ ಪರಂಬು ಪೈಸಾರಿಯ ದೇವಪ್ಪ ಅವರ ಮನೆಗೆ ಭೇಟಿ ನೀಡಿದ ಸಚಿವ ಈಶ್ವರ ಖಂಡ್ರೆ ಅವರು ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ಅರಣ್ಯ ಸಚಿವರಿಗೆ ಗಜ ದರ್ಶನ !

ತಿತಿಮತಿಯಿಂದ ಮಾಲ್ದಾರೆಗೆ ಬರುತ್ತಿದ್ದ ಅರಣ್ಯ ಸಚಿವರಿಗೆ ಮಾರ್ಗೊಲ್ಲಿ ಕಾಫಿ ತೋಟದ ಬಳಿ ಎರಡು ಕಾಡಾನೆಗಳು ಕಾಣಿಸಿಕೊಂಡವು.

- ಹೆಚ್.ಕೆ.ಜಗದೀಶ್