ಸಿದ್ದಾಪುರ, ಆ. ೨೩: ಜಿಲ್ಲೆಯಲ್ಲಿ ಮಿತಿಮೀರಿರುವ ಕಾಡಾನೆ ಉಪಟಳ ತಡೆಯುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಪರಿಣಾಮಕಾರಿ ಕ್ರಮವಹಿಸಬೇಕೆಂದು ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಆನೆ ಯೋಜನೆ) ಶಾಶ್ವತಿ ಮಿಶ್ರ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಕಳೆದ ಒಂದು ವಾರದ ಅಂತರದಲ್ಲಿ ಕಾಡಾನೆ ದಾಳಿಗೆ ಸಿಲುಕಿ ಇಬ್ಬರು ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಶಾಶ್ವತಿ ಮಿಶ್ರ ಜಿಲ್ಲೆಗೆ ಭೇಟಿ ನೀಡಿ ಜಿಲ್ಲೆಯ ಅರಣ್ಯ ಇಲಾಖಾಧಿಕಾರಿಗಳೊಂದಿಗೆ ಮಾಹಿತಿ ಪಡೆದುಕೊಂಡರು. ಕಳೆದ ಒಂದು ವಾರಗಳ ಹಿಂದೆ ಅರೆಕಾಡು ಗ್ರಾಮದ ದೇವಪ್ಪ ಅವರನ್ನು ಕಾಡಾನೆ ದಾಳಿ ಮಾಡಿ ಕೊಂದು ಹಾಕಿದ ಸ್ಥಳಕ್ಕೆ ಭೇಟಿ ನೀಡಿ ಅನಂತರ ದೇವಪ್ಪ ಮನೆಗೆ ತೆರಳಿ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಅಲ್ಲದೇ ಸರ್ಕಾರದ ವತಿಯಿಂದ ನೀಡುತ್ತಿರುವ ಪರಿಹಾರ ಹಣದ ಬಾಕಿ ಇದ್ದ ರೂ. ೫ ಲಕ್ಷದ ಚೆಕ್ನ್ನು ವಿತರಿಸಿದರು. ಈ ಸಂದರ್ಭದಲ್ಲಿ ಮೃತ ದೇವಪ್ಪ, ಪತ್ನಿ ಸರಸ್ವತಿ ತಮ್ಮ ನೋವು ತೋಡಿಕೊಂಡರು. ಕುಟುಂಬದ ಒಬ್ಬರಿಗೆ ಸರ್ಕಾರಿ ಹುದ್ದೆ ನೀಡುವಂತೆ ಅಧಿಕಾರಿಯ ಬಳಿ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಮಡಿಕೇರಿ ವಿಭಾಗದ ಡಿ.ಎಫ್.ಓ ಪೂವಯ್ಯ, ಎ.ಸಿ.ಎಫ್. ವಿ.ಎ. ಗೋಪಾಲ್, ಕುಶಾಲನಗರ ವಲಯ ಅರಣ್ಯಾಧಿಕಾರಿ ಕೆ.ವಿ. ಶಿವರಾಂ, ಉಪವಲಯ ಅರಣ್ಯಾಧಿಕಾರಿ ಮಲ್ಲಯ್ಯ, ಸಿಬ್ಬಂದಿಗಳಾದ ಸಂಜು ಇನ್ನಿತರರು ಹಾಜರಿದ್ದರು.
ವೀರಾಜಪೇಟೆ ವಲಯ ಅರಣ್ಯ ವ್ಯಾಪ್ತಿಗೆ ಒಳಪಡುವ
(ಮೊದಲ ಪುಟದಿಂದ) ಕರಡಿಗೋಡು ಗ್ರಾಮಕ್ಕೆ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶಾಶ್ವತಿ ಮಿಶ್ರ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಕರಡಿಗೋಡು ಗ್ರಾಮದ ಅವರೆಗುಂದ ಭಾಗದ ಅರಣ್ಯದಂಚಿನಲ್ಲಿರುವ ಆನೆ ಕಂದಕಗಳನ್ನು ಹಾಗೂ ಸೋಲಾರ್ ಬೇಲಿಗಳನ್ನು ಪರಿಶೀಲನೆ ಮಾಡಿದರು. ಹಾಗೂ ಕಂದಕಗಳು ಹಾಗೂ ಸೋಲಾರ್ ಬೇಲಿಗಳು ಇದ್ದರೂ ಕೂಡ ಅರಣ್ಯದಿಂದ ಕಾಡಾನೆಗಳು ನಾಡಿನತ್ತ ಬರುತ್ತಿರುವ ಬಗ್ಗೆ ಮಾಹಿತಿ ಪಡೆದುಕೊಂಡರು. ಕಂದಕಗಳನ್ನು ಹಾಗೂ ಸೋಲಾರ್ ಬೇಲಿಗಳನ್ನು ನಿರ್ವಹಣೆ ಮಾಡುವಂತೆ ಸ್ಥಳದಲ್ಲಿದ್ದ ಅರಣ್ಯ ಇಲಾಖಾಧಿಕಾರಿಗಳಿಗೆ ಸೂಚಿಸಿದರು. ಇದಾದ ನಂತರ ಕಳೆದ ಮೂರು ದಿನಗಳ ಹಿಂದೆ ಬಾಡಗ ಬಾಣಂಗಾಲ ಗ್ರಾಮದ ಮಟ್ಟಂನಲ್ಲಿ ಆಯಿಷಾ ಎಂಬವರನ್ನು ಕಾಡಾನೆ ದಾಳಿ ನಡೆಸಿ ಹತ್ಯೆ ಮಾಡಿದ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು.
ನಂತರ ಮೃತರ ನಿವಾಸಕ್ಕೆ ತೆರಳಿ ಅವರ ಕುಟುಂಬವರ್ಗಕ್ಕೆ ಸಾಂತ್ವನ ಹೇಳಿದರು. ಈ ಭಾಗದಲ್ಲಿ ಉಪಟಳ ನೀಡುತ್ತಿರುವ ಸಲಗವನ್ನು ಸೆರೆಹಿಡಿಯಲು ಅನುಮತಿಯನ್ನು ಪಡೆಯಲಾಗಿದೆ ಎಂದು ಅರಣ್ಯ ಇಲಾಖಾಧಿಕಾರಿಗಳು ಮಾಹಿತಿ ನೀಡಿದರು. ಇದಾದ ಬಳಿಕ ತಿತಿಮತಿ ವಲಯ ಅರಣ್ಯ ವ್ಯಾಪ್ತಿಯಲ್ಲಿ ಚೆನ್ನಂಗಿ ಅಬ್ಬೂರುವಿನಲ್ಲಿ ಕಾಡಾನೆಗಳು ಅರಣ್ಯದಿಂದ ಕಾಫಿ ತೋಟದೊಳಗೆ ನುಸುಳುವ ಸ್ಥಳಗಳನ್ನು ಪರಿಶೀಲಿಸಿದರು. ವೀರಾಜಪೇಟೆ ತಾಲೂಕು ಡಿ.ಎಫ್.ಓ ಶರಣ ಬಸಪ್ಪ ಈಗಾಗಲೇ ತಾಲೂಕು ವ್ಯಾಪ್ತಿಯಲ್ಲಿ ೫೦ ಕಾಡಾನೆಗಳನ್ನು ಸೆರೆಹಿಡಿಯಲು ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಗಮನಕ್ಕೆ ತಂದರು. ಜಿಲ್ಲೆಯ ಆನೆ-ಮಾನವ ಸಂಘರ್ಷದ ಬಗ್ಗೆ ಹಾಗೂ ಆನೆ ಹಾವಳಿಗಳನ್ನು ತಡೆಗಟ್ಟುವ ಯೋಜನೆಗಳ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ಅಧಿಕಾರಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಎ.ಸಿ.ಎಫ್ ಗಳಾದ ಸೀಮಾ, ಎ.ಎ. ಗೋಪಾಲ್, ನೆಹರು, ವಲಯ ಅರಣ್ಯಾಧಿಕಾರಿಗಳಾದ ಕೆ.ವಿ. ಶಿವರಾಂ, ಕೆ.ಪಿ. ದೇವಯ್ಯ, ಅಶೋಕ್ ಹುನಗುಂದ, ಉಪವಲಯ ಅರಣ್ಯಾಧಿಕಾರಿಗಳಾದ ಕನ್ನಂಡ ರಂಜನ್, ಶ್ರೀನಿವಾಸ್, ಸಂಜೀತ್ ಸೋಮಯ್ಯ ಹಾಗೂ ಸಿಬ್ಬಂದಿಗಳು ಹಾಜರಿದ್ದರು. -ವಾಸು