*ಗೋಣಿಕೊಪ್ಪ, ಆ. ೨೨ : ೭೭ನೇ ವರ್ಷದ ಸ್ವಾತಂತ್ರೊ÷್ಯÃತ್ಸವದ ಸಂಭ್ರಮದಲ್ಲಿದ್ದರೂ, ದಲಿತರು ಸಮಾನತೆಯಿಂದ ಪ್ರಜಾಪ್ರಭುತ್ವ ವ್ಯವಸ್ಥೆಯೊಳಗೆ ಬದುಕಲು ಸಾಧ್ಯವಾಗುತ್ತಿಲ್ಲ ಎಂದು ದಲಿತ ಮುಖಂಡ ಟಿ.ಎನ್. ಗೋವಿಂದಪ್ಪ ವಿಷಾಧ ವ್ಯಕ್ತಪಡಿಸಿದರು.
ಗೋಣಿಕೊಪ್ಪ ದಲಿತ ಸಂಘರ್ಷ ಸಮಿತಿ ಕಚೇರಿಯಲ್ಲಿ ನಡೆದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಕುರಿತ ಉಪನ್ಯಾಸ ಮತ್ತು ದಲಿತ ಸಂಘರ್ಷ ಸಮಿತಿಯ ಸರ್ವ ಸದಸ್ಯರ ಸಭೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ದಲಿತರು ಸಂಘಟನಾತ್ಮಕವಾಗಿ ಗಟ್ಟಿಗೊಳ್ಳದೆ ಇದ್ದರೆ ಈ ಪ್ರಜಾಪ್ರಭುತ್ವ ವ್ಯವಸ್ಥೆಯೊಳಗೆ ಬದುಕು ನಡೆಸಲು ಮತ್ತು ಸಮಾನತೆಯನ್ನು ಪಡೆದುಕೊಳ್ಳಲು ಅಸಾಧ್ಯವಾಗಿದೆ. ದಲಿತರ ಮೇಲಿನ ಕಾಳಜಿಯಿಂದ ಅಂಬೇಡ್ಕರ್ ಸಂವಿಧಾನ ರಚನೆಯಲ್ಲಿ ದಲಿತ ಪರ ಕಾನೂನುಗಳನ್ನು ಅಳವಡಿಸಿದರು. ಆದರೆ, ಅದರ ಸದುಪಯೋಗ ಮತ್ತು ಆ ವಿಚಾರದ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗದೇ ಇದ್ದರೆ, ಸಮುದಾಯದ ಬೆಳವಣಿಗೆ ಸಾಧ್ಯವಿಲ್ಲ. ದಲಿತರು ಶಿಕ್ಷಣವಂತರಾಗುವ ಮೂಲಕ ಸಾಮಾಜಿಕ ಪ್ರಜ್ಞೆಯನ್ನು ಮೈಗೂಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಜಿಲ್ಲಾ ದಲಿತ ಸಂಘರ್ಷ ಸಮಿತಿ ಸಂಚಾಲಕ ಪರಶುರಾಮ್ ಮಾತನಾಡಿ, ದಲಿತರ ನೋವು, ನಲಿವುಗಳಿಗೆ ಸ್ಪಂದಿಸಲು ಸಂಘಟನೆ ಕಾರ್ಯ ನಿರತವಾಗಿದೆ. ತಮ್ಮ ಮನೋಬಲದಿಂದ ಸಂಘಟನೆಯನ್ನು ಗಟ್ಟಿಗೊಳಿಸುವ ಕಾರ್ಯ ನಡೆಯಬೇಕಾಗಿದೆ ಎಂದು ಹೇಳಿದರು. ಯಾರ ಹಂಗಿಗೂ ಒಳಪಡದೇ ಸ್ವತಂತ್ರವಾಗಿ ಬದುಕು ನಡೆಸಲು ದಲಿತರು ಚಿಂತನಾರ್ಹವಾಗಿರಬೇಕು. ಈ ನಿಟ್ಟಿನಲ್ಲಿ ಶಿಕ್ಷಣ ಪಡೆದುಕೊಂಡು ಅಂಬೇಡ್ಕರ್ ನೀಡಿದ ಪ್ರಜಾಪ್ರಭುತ್ವ,÷ ಸಂವಿಧಾನದ ವ್ಯವಸ್ಥೆಯನ್ನು ಅನುಭವಿಸಬೇಕೆಂದು ಸಲಹೆ ನೀಡಿದರು.
ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಉಪನ್ಯಾಸ ನೀಡಿದ ಹಿರಿಯ ಪತ್ರಕರ್ತ ಟಿ.ಎಲ್. ಶ್ರೀನಿವಾಸ್, ಬ್ರಿಟಿಷರ ದಾಸ್ಯದಿಂದ ಮುಕ್ತಿ ಹೊಂದಿದ ಭಾರತ ಇಂದು ಜಾತಿ ವ್ಯವಸ್ಥೆಯ ದಾಸ್ಯಕ್ಕೆ ಬಿದ್ದು ನರಳುತ್ತಿದೆ ಎಂದು ಹೇಳಿದರು.
ಪ್ರಪಂಚದಲ್ಲಿ ಬಹುದೊಡ್ಡ ಪ್ರಜಾಪ್ರಭುತ್ವವನ್ನು ಹೊಂದಿದ ಭಾರತದಲ್ಲಿ ಶ್ರೀಸಾಮಾನ್ಯನಿಗೆ ಸೂಕ್ತ ಭದ್ರತೆಯಿಲ್ಲ. ದಲಿತ, ಮಹಿಳಾ ದೌರ್ಜನ್ಯಗಳು ನಡೆಯುತ್ತಲೆ ಇದೆ. ಸಮಾಜದಲ್ಲಿ ದಲಿತ ಸಮಾನತೆಯಲ್ಲಿ ಬದುಕಲು, ಜಾತ್ಯತೀತತೆಯಿಂದ ಹೊರಬರಬೇಕಾಗಿದೆ. ಇದರಿಂದ ಹೊರಗುಳಿಯಲು ಮತ್ತು ಅಂಬೇಡ್ಕರ್ ಕಂಡ ಭಾರತ ಮತ್ತು ದಲಿತರ ಏಳಿಗೆಯ ಕನಸು ನನಸ್ಸಾಗಿಸಲು ಪ್ರತಿಯೊಬ್ಬರು ಶಿಕ್ಷಣವಂತರಾಗ ಬೇಕೆಂದು ಕರೆ ನೀಡಿದರು.
ವಕೀಲ ಹರೀಶ್, ಜಿಲ್ಲಾ ದಲಿತ ಸಂಘರ್ಷ ಸಮಿತಿ ಸದಸ್ಯ ಕಾಟಿ ಮುರುಗ ಮಾತನಾಡಿದರು. ನಿವೃತ್ತ ಸೈನಿಕ ಹೆಚ್.ಕೆ ಪ್ರಭು, ದಲಿತ ಸಂಘರ್ಷ ಸಮಿತಿ ಸಂಚಾಲಕರು ಗಳಾದ ಗಿರೀಶ್, ಕುಮಾರ್ ಸೇರಿದಂತೆ ಸಂಘದ ಪದಾಧಿಕಾರಿಗಳು, ಸದಸ್ಯರುಗಳು ಉಪಸ್ಥಿತರಿದ್ದರು.