ಕರಿಕೆ, ಆ. ೨೧: ಕ್ಯಾಂಪ್ಕೋ ಹಾಗೂ ಕರಿಕೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಇದರ ಸಹಾಭಾಗಿತ್ವದೊಂದಿಗೆ ತಾ. ೧೪ ರಂದು ಕರಿಕೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ಕಾಳು ಮೆಣಸು ಖರೀದಿ ಕೇಂದ್ರ ಉದ್ಘಾಟನೆ ಹಾಗೂ ಸದಸ್ಯ ಬೆಳೆಗಾರರ ಸಭೆ ನಡೆಯಿತು.
ಕಾರ್ಯಕ್ರಮದ ಉದ್ಘಾಟಕರಾದ ಕ್ಯಾಂಪ್ಕೋ ಸಂಸ್ಥೆಯ ಅಧ್ಯಕ್ಷರಾದ ಕಿಶೋರ್ ಕುಮಾರ್ ಕೊಡ್ಗಿ ಅವರು ಕಾಳುಮೆಣಸು ಖರೀದಿಗೆ ಚಾಲನೆ ನೀಡಿ ಮಾತನಾಡಿ, ದೇಶದ ಅತ್ಯಂತ ದೊಡ್ಡ ಸಹಕಾರಿ ಸಂಘ ಇದಾಗಿದ್ದು, ಅಡಿಕೆ ಬೆಳೆಗಾರರ ಸಮಸ್ಯೆಯನ್ನು ಆಡಳಿತ ಮಂಡಳಿಯ ಸಭೆಯಲ್ಲಿ ಮಂಡಿಸಿ ಇದನ್ನು ಇತ್ಯರ್ಥಗೊಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ಪಾತಳಕ್ಕಿಳಿದ ಅಡಿಕೆ ಬೆಳೆಯ ಬೆಲೆಯ ಸ್ಥಿರತೆ ಕಾಪಾಡುವ ಉದ್ದೇಶದಿಂದ ಕ್ಯಾಂಪ್ಕೊ ಸ್ಥಾಪಿಸಲ್ಪಟ್ಟಿದೆ. ಬದಲಾವಣೆಯ ಕಾಲಘಟ್ಟದಲ್ಲಿ ರೈತ ಬೆಳೆಗಾರ ಸಮಸ್ಯೆಗೆ ಸ್ಪಂದಿಸುವ ಕೆಲಸವನ್ನು ರಾಜ್ಯ ಮಟ್ಟದಲ್ಲಿ ರಾಷ್ಟçಮಟ್ಟದಲ್ಲಿ ಮಾಡುತ್ತ ಬಂದಿದ್ದು, ಮುಂದಕ್ಕೂ ಇದಕ್ಕೆ ಬದ್ದರಾಗಿದ್ದೆವೆಂದರು. ಕೂಲಿ ಕಾರ್ಮಿಕರ ಸಮಸ್ಯೆ ನಿವಾರಿಸಲು ತೋಟದಲ್ಲಿ ಮಿಶ್ರ ಬೆಳೆ ಬೆಳೆಯುವುದರಿಂದ ಕೊಂಚ ಪರಿಹಾರ ಕಂಡುಕೊಳ್ಳಬಹುದೆAದರು. ಇದೇ ಸಂದರ್ಭದಲ್ಲಿ ಗ್ರಾಮದ ಅನೇಕ ರೈತರು ತಮ್ಮ ಸಮಸ್ಯೆಯನ್ನು ಕ್ಯಾಂಪ್ಕೊ ಆಡಳಿತ ಮಂಡಳಿ ಮುಂದೆ ಮಂಡಿಸಿದರು. ಕ್ಯಾಂಪ್ಕೋದ ನಿರ್ದೇಶಕರಾದ ಕೃಷ್ಣ ಪ್ರಸಾದ್ ಮಡ್ತಿಲ ಸ್ವಾಗತಿಸಿ, ಕ್ಯಾಂಪ್ಕೋದ ವ್ಯವಸ್ಥಾಪಕ ನಿರ್ದೇಶಕರಾದ ಹೆಚ್.ಎಂ. ಕೃಷ್ಣ ಕುಮಾರ್ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು. ತದನಂತರ ಸದಸ್ಯ ಬೆಳೆಗಾರರ ಜೊತೆ ನಡೆದ ವಿಚಾರ ವಿನಿಮಯದಲ್ಲಿ ರೈತರ ಸಮಸ್ಯೆಗಳನ್ನು ಆಲಿಸಿ ಸಮರ್ಪಕ ಪರಿಹಾರಗಳನ್ನು ಸೂಚಿಸಿದರು. ಅಲ್ಲದೆ ಮಾರುಕಟ್ಟೆ ಸ್ಥಿರತೆಯಲ್ಲಿ ಕ್ಯಾಂಪ್ಕೋದ ಪಾತ್ರ ಹಾಗೂ ಸದಸ್ಯರಿಗೆ ಕ್ಯಾಂಪ್ಕೋದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಕರಿಕೆ ಪ್ರಾಥಮಿಕ ಕೃಷಿ ಪತ್ತಿನ ಸಂಘದ ಅಧ್ಯಕ್ಷರಾದ ಶರಣ್ ಕುಮಾರ್ ಬೇಕಲ್ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ, ೨೦೦೫ ರಲ್ಲಿ ಕರಿಕೆಯಲ್ಲಿ ಕೃಷಿ ಪತ್ತಿನ ಸಹಕಾರಿ ಸಂಘದ ಆಶ್ರಯದಲ್ಲಿ ಅಡಿಕೆ ಖರೀದಿ ಕೇಂದ್ರ ಪ್ರಾರಂಭಿಸಿ ನಂತರ ರಬ್ಬರ್ ಖರೀದಿ ಇದೀಗ ಕಾಳು ಮೆಣಸು ಖರೀದಿ ಕೇಂದ್ರ ಆರಂಭ ಮಾಡಿದ ಹಿನ್ನೆಲೆಯಲ್ಲಿ ರೈತರು ಉತ್ತಮ ಮಾರುಕಟ್ಟೆ ಪಡೆಯಲು ಸಾಧ್ಯವಾಯಿತು. ಬೆಳೆಗಾರರಿಗೆ ಅನುಕೂಲಕರ ಆಗುವ ನಿಟ್ಟಿನಲ್ಲಿ ಸಹಕಾರಿ ಸಂಘ ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದ್ದು, ರೈತರು ಅಡಿಕೆ, ರಬ್ಬರ್, ಮೆಣಸು ಸಂಸ್ಥೆಗೆ ಮಾರಾಟ ಮಾಡುವ ಮೂಲಕ ಸಂಸ್ಥೆಯ ಏಳಿಗೆಗೆ ಶ್ರಮಿಸಬೇಕೆಂದರು. ಕ್ಯಾಂಪ್ಕೋ ಉಪಾಧ್ಯಕ್ಷರಾದ ಶಂಕರನಾರಾಯಣ ಭಟ್ ಖಂಡಿಗೆ ವಂದಿಸಿದರು.