ಸೋಮವಾರಪೇಟೆ, ಆ. ೨೧: ಶತಮಾನ ಕಂಡಿರುವ ಸೋಮವಾರಪೇಟೆ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಮಸಗೋಡು ಗ್ರಾಮದ ರೂಪಾ ಸತೀಶ್ ಆಯ್ಕೆಯಾಗಿದ್ದು, ಆ ಮೂಲಕ ನೂರು ವರ್ಷ ದಾಟಿರುವ (೧೦೪ನೇ ವರ್ಷ) ಸಹಕಾರ ಸಂಘದ ಮೊದಲನೇ ಮಹಿಳಾ ಅಧ್ಯಕ್ಷೆ ಎಂಬ ದಾಖಲೆ ನಿರ್ಮಿಸಿದ್ದಾರೆ.
ಶತಮಾನೋತ್ಸವದ ಸಂಭ್ರಮದಲ್ಲಿನ ಪ್ರಸಕ್ತ ಸಾಲಿನ ಮೊದಲನೇ ಅವಧಿಯಲ್ಲಿ ಹೆಚ್.ಕೆ. ಮಾದಪ್ಪ ಅವರು ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದರು. ಅವರ ತರುವಾಯ ಅರೆಯೂರು ಜಯಣ್ಣ ಅವರು ಅಧ್ಯಕ್ಷರಾಗಿದ್ದು, ಕಳೆದ ೧೫ ದಿನಗಳ ಹಿಂದಷ್ಟೇ ವೈಯಕ್ತಿಕ ಕಾರಣಗಳಿಂದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.
ಇಂದು ಸಂಘದ ಸಭಾಂಗಣ ದಲ್ಲಿ ಉಳಿದ ಅವಧಿಗೆ ಅಧ್ಯಕ್ಷರ ಆಯ್ಕೆ ನಡೆದಿದ್ದು, ಉಪಾಧ್ಯಕ್ಷ ರಾಗಿದ್ದ ರೂಪಾ ಸತೀಶ್ ಅವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಪ್ರಥಮ ಮಹಿಳಾ ಅಧ್ಯಕ್ಷೆ ಎಂಬ ಕೀರ್ತಿಗೆ ಭಾಜನರಾಗಿ ದ್ದಾರೆ. ನೂತನ ಅಧ್ಯಕ್ಷರ ಆಯ್ಕೆ ಸಂದರ್ಭ ಸಹಕಾರ ಸಂಘದ ನಿರ್ದೇಶಕರು ಗಳಾದ ಬಿ.ಎಂ. ಸುರೇಶ್, ಹೆಚ್.ಕೆ. ಮಾದಪ್ಪ, ಬಿ.ಎಂ. ಈಶ್ವರ್, ಕೆ.ಕೆ. ಚಂದ್ರಿಕಾ, ಪಿ.ಡಿ. ಮೋಹನ್ದಾಸ್, ಹೆಚ್.ಕೆ. ಚಂದ್ರಶೇಖರ್, ಪಿ.ಎ. ಅನಿತ, ಬಿ.ಶಿವಪ್ಪ, ಎಂ.ವಿ. ದೇವರಾಜ್, ಬಿ.ಪಿ. ದಿವಾನ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರವೀಂದ್ರ ಅವರುಗಳು ಉಪಸ್ಥಿತರಿದ್ದರು.