ಸೋಮವಾರಪೇಟೆ, ಆ. ೨೧ : ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಬಿಜೆಪಿ ಸರ್ಕಾರ ಈ ಹಿಂದೆ ಜಾರಿಗೆ ತಂದಿರುವ ಕೆಲವೊಂದು ಮಸೂದೆಗಳನ್ನು ಕೂಡಲೇ ವಾಪಸ್ ಪಡೆಯಬೇಕೆಂದು ಕರ್ನಾಟಕ ರೈತ ಸಂಘ (ಎಐಕೆಕೆಎಸ್) ಆಗ್ರಹಿಸಿದೆ.

ಬಿಜೆಪಿ ಅವಧಿಯಲ್ಲಿ ಜಾರಿಗೆ ತಂದಿರುವ ಎಪಿಎಂಸಿ ಕಾಯ್ದೆ, ಗೋರಕ್ಷಾ ಕಾಯ್ದೆ, ಧಾರ್ಮಿಕ ಹಕ್ಕು ಸಂರಕ್ಷಣಾ ಅಧಿನಿಯಮ ಮಸೂದೆಗಳನ್ನು ವಿಳಂಬ ಮಾಡದೆ ವಾಪಸ್ ಪಡೆಯಬೇಕು. ೫ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಬೇಕೆಂದು ತಹಶೀಲ್ದಾರ್ ಎಸ್.ಎನ್. ನರಗುಂದ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ರಾಜ್ಯದಲ್ಲಿ ಬೆವರು ಸುರಿಸಿ ದುಡಿಯುವ ವರ್ಗಗಳ, ದಮನಿತರ, ಶೋಷಿತರ ಶತಮಾನದ ಬೇಡಿಕೆಯಾದ ಭೂಹಂಚಿಕೆ ಮತ್ತು ಸಾಗುವಳಿ ಭೂಮಿಗೆ ಪಟ್ಟಾ ನೀಡುವ ಬಹುಮುಖ್ಯ ಬೇಡಿಕೆ ಈಡೇರಿಸಬೇಕು.

ರಾಜ್ಯದಲ್ಲಿ ಭೂರಹಿತರ ಸಂಖ್ಯೆ ಜಾಸ್ತಿಯಾಗುತ್ತಿತ್ತು. ಆರ್ಥಿಕ ಅಸಮಾನತೆ ಹೆಚ್ಚಾಗುತ್ತಿದೆ. ಕೂಡಲೇ ಸರ್ಕಾರಿ ಭೂಮಿಯನ್ನು ಭೂರಹಿತರಿಗೆ ಹಂಚಿ, ಕೃಷಿ ಚಟುವಟಿಕೆಗೆ ಬುನಾದಿ ಹಾಕಬೇಕು ಎಂದು ಮನವಿಯಲ್ಲಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಮಲೆನಾಡಿನಲ್ಲಿ ನೂರಾರು ಎಕರೆ ಸರ್ಕಾರಿ ಭೂಮಿ ಪ್ರಭಾವಿ ವ್ಯಕ್ತಿಗಳು, ಕಂಪೆನಿ, ಭೂ ಮಾಫಿಯಾಗಳ ಪಾಲಾಗಿದೆ. ಸರ್ಕಾರ ರಾಜ್ಯದ ರೈತರ ಭೂಮಿ ಹಕ್ಕುಗಳ ಸಂರಕ್ಷಣೆಗಾಗಿ ಸಮಗ್ರ ಭೂ ನೀತಿಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಗೇಣಿ ಸಾಗುವಳಿ ರೈತರಿಗೆ ಬೆಳೆಸಾಲ, ಸಹಾಯಧನ, ಪರಿಹಾರ ಸೌಲಭ್ಯ ನೀಡುವುದಕ್ಕೆ ಹೊಸ ಕಾಯ್ದೆ ರೂಪಿಸಬೇಕು. ಪ್ರತಿವರ್ಷ ಲ್ಯಾಂಡ್ ಆಡಿಟಿಂಗ್(ಭೂಮಿ ಲೆಕ್ಕ ಪತ್ರ) ಮಾಡಿ ಸಾರ್ವಜನಿಕ ಪ್ರಕಟಣೆ ನೀಡಿ ಹೆಚ್ಚುವರಿ ಭೂಮಿಯನ್ನು ಭೂರಹಿತ ಕುಟುಂಬಗಳಿಗೆ ಹಂಚಬೇಕು ಎಂದು ಆಗ್ರಹಿಸಲಾಗಿದೆ.

ಮನವಿ ಸಲ್ಲಿಸುವ ಸಂದರ್ಭ ಸಂಘದ ಜಿಲ್ಲಾಧ್ಯಕ್ಷ ಎಚ್.ಈ.ಸಣ್ಣಪ್ಪ, ಜಿಲ್ಲಾ ಸಮಿತಿ ಸದಸ್ಯರಾದ ಎಚ್.ಜೆ.ಜಯಣ್ಣ, ಕೆ.ಟಿ.ಆನಂದ, ಪುಟ್ಟನಂಜ, ಎಸ್.ಆರ್.ಮಂಜುನಾಥ್ ಇದ್ದರು.