ವೀರಾಜಪೇಟೆ, ಆ. ೧೭: ರಾಸಾಯನಿಕ ವಸ್ತುಗಳನ್ನು ಬಳಸಿ ತಯಾರಿಸುವ ಸುಗಂಧಭರಿತ ಸಾಬೂನುಗಳನ್ನು ಬಳಸುವುದರ ಬದಲು ಮನೆಯಲ್ಲಿಯೇ ಪರಿಶುದ್ಧವಾದ ಸಾಬೂನನ್ನು ಅತಿಕಡಿಮೆ ಖರ್ಚಿನಲ್ಲಿ ತಯಾರಿಸ ಬಹುದು ಎಂದು ಡಾ. ಎಸ್.ವಿ. ನರಸಿಂಹನ್ ಅಭಿಪ್ರಾಯ ಪಟ್ಟರು. ಅವರು ಅರಮೇರಿ ಕಳಂಚೇರಿ ಮಠದಲ್ಲಿ ಜರುಗಿದ ೨೧೨ನೇ ಮಾಸಿಕ ತತ್ತ÷್ವ ಚಿಂತನಾಗೋಷ್ಠಿಯಲ್ಲಿ “ಸುಲಭವಾಗಿ ಹಾಲಿನಿಂದ ಮನೆಯಲ್ಲಿಯೇ ಅತ್ಯುತ್ತಮ ಸಾಬೂನು ತಯಾರಿಸುವುದು ಹೇಗೆ?” ಎಂಬುದರ ಬಗ್ಗೆ ಉಪನ್ಯಾಸವನ್ನು ನೀಡುತ್ತ ಗುಣಮಟ್ಟವಿಲ್ಲದ, ಕೃತಕ ವಸ್ತುಗಳಿಂದಾದ ಸಾಬೂನುಗಳು ದೇಹದ ಚರ್ಮಕ್ಕೆ ಹಾನಿಕಾರಕ, ಅದರ ಬದಲು ತೆಂಗಿನ ಎಣ್ಣೆ ಮತ್ತು ಹಾಲಿನಿಂದಲೇ ಉತ್ತಮವಾದ ಸಾಬೂನನ್ನು ತಯಾರಿಸಲು ಸಾಧ್ಯವೆಂದು ಅವರು ಪ್ರಾತ್ಯಕ್ಷಿಕೆಯೊಂದಿಗೆ ವಿವರಿಸಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ನಿವೃತ್ತ ಬ್ಯಾಂಕ್ ಅಧಿಕಾರಿ ವೀರಾಜಪೇಟೆಯ ಕೆ.ಕೆ. ಶ್ಯಾಮ್ ಅವರು ನೆರವೇರಿಸಿ ಮಾತನಾಡಿ, ಮಾರುಕಟ್ಟೆಯ ಸಾಬೂನುಗಳ ಬಳಕೆಯಿಂದ ಆಗುವ ಹಾನಿಯನ್ನು ವಿವರಿಸಿದರು. ಮಠದ ಪೀಠಾಧಿಪತಿ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿಯವರು ನೈಸರ್ಗಿಕವಾಗಿ ಸಿಗುವ ಸಂಪತ್ತನ್ನು ಬಳಸಿ ದೇಹದ ಆರೋಗ್ಯವನ್ನು ರಕ್ಷಿಸಿಕೊಳ್ಳಬೇಕಾದ ಅಗತ್ಯವನ್ನು ವಿವರಿಸಿದರು. ಮಠದ ವಿದ್ಯಾರ್ಥಿಗಳಿಂದ ಪ್ರಾರ್ಥನೆ, ನಿರೂಪಣೆ ಹಾಗೂ ವಂದನಾರ್ಪಣೆಗಳು ನಡೆಯಿತು.